ರಾಸಾಯನಿಕ ಅತಿಯಾದ ಬಳಕೆಯಿಂದ ಕೃಷಿ ಭೂಮಿ ಬರಡಾಗುತ್ತಿದೆ. ಭೂಮಿ ಹಾಗೂ ಆಹಾರ ಉತ್ಪನ್ನಗಳೂ ವಿಷವಾಗುತ್ತಿವೆ. ಅದೇ ರೀತಿ ಕೆಲ ಸಾಹಿತಿಗಳು ತಮ್ಮ ಬರವಣಿಗೆ, ಧರ್ಮಗುರುಗಳು ಪ್ರವಚನ, ಮಾಧ್ಯಮದವರು ಬರಹಗಳ ಮೂಲಕ ಸಮಾಜದಲ್ಲಿ ವಿಷ ಹರಡುತ್ತಿದ್ದಾರೆ. ನಾಗರಿಕ ಸಮಾಜ ಆರೋಗ್ಯವಾಗಿರಲು ಇಂತಹ ಎಲ್ಲ ವಿಷಗಳನ್ನು ದೂರೀಕರಿಸುವ ಅಗತ್ಯವಿದೆ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.

- ಶಿವಣ್ಣ ಸುಕನ್ಯ ತ್ಯಾವಣಿಗೆ ಸಾಹಿತ್ಯ ಕಲಾ ಸಂಸ್ಥೆ ಉದ್ಘಾಟನೆಯಲ್ಲಿ ತೇಜಸ್ವಿ ಪಟೇಲ್

- - -

- ಕವಿಗೋಷ್ಠಿ, ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ ಹಾಗೂ ಪುಸ್ತಕ ಲೋಕಾರ್ಪಣೆ

- “ನನ್ನ ಅಪ್ಪಾಜಿ”, “ಮನದ ಹೊಸ್ತಿಲ ಒಳಗೆ” ಕವನ ಸಂಕಲನಗಳ ಬಿಡುಗಡೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ರಾಸಾಯನಿಕ ಅತಿಯಾದ ಬಳಕೆಯಿಂದ ಕೃಷಿ ಭೂಮಿ ಬರಡಾಗುತ್ತಿದೆ. ಭೂಮಿ ಹಾಗೂ ಆಹಾರ ಉತ್ಪನ್ನಗಳೂ ವಿಷವಾಗುತ್ತಿವೆ. ಅದೇ ರೀತಿ ಕೆಲ ಸಾಹಿತಿಗಳು ತಮ್ಮ ಬರವಣಿಗೆ, ಧರ್ಮಗುರುಗಳು ಪ್ರವಚನ, ಮಾಧ್ಯಮದವರು ಬರಹಗಳ ಮೂಲಕ ಸಮಾಜದಲ್ಲಿ ವಿಷ ಹರಡುತ್ತಿದ್ದಾರೆ. ನಾಗರಿಕ ಸಮಾಜ ಆರೋಗ್ಯವಾಗಿರಲು ಇಂತಹ ಎಲ್ಲ ವಿಷಗಳನ್ನು ದೂರೀಕರಿಸುವ ಅಗತ್ಯವಿದೆ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ಅಭಿಪ್ರಾಯಪಟ್ಟರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ನಡೆದ ಶಿವಣ್ಣ ಸುಕನ್ಯ ತ್ಯಾವಣಿಗೆ ಸಾಹಿತ್ಯ ಕಲಾ ಸಂಸ್ಥೆಯ ಉದ್ಘಾಟನೆ, ಕವಿಗೋಷ್ಠಿ, ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ ಹಾಗೂ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮೊಬೈಲ್ ಹಾವಳಿಯಿಂದ ಜನರಲ್ಲಿ ಓದುವ ಪ್ರವೃತ್ತಿ ಕಡಿಮೆಯಾಗಿದೆ. ಮಾನವೀಯ ಸಂಬಂಧಗಳು ಮಹತ್ವ ಕಳೆದುಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಪುಸ್ತಕ ಬರೆಯುವುದು, ಪ್ರಕಟಿಸುವುದು ತುಂಬಾ ಸವಾಲಿನ ಕೆಲಸ. ಸಾಹಿತ್ಯ ಕೃತಿಗಳು ಮನಸ್ಸಿನ ಭಾರ ಇಳಿಸುವಂತಿರಬೇಕು. ಮನುಷ್ಯನನ್ನು ಚಿಂತನೆಗೆ ಹಚ್ಚಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಎಂದು ತಿಳಿಸಿದರು.

ಚನ್ನಗಿರಿ ಕ್ಷೇತ್ರದ ಮಾಜಿ ಶಾಸಕ ಮಹಿಮಾ ಪಟೇಲ್ ಮಾತನಾಡಿ, ಜಗತ್ತಿನಲ್ಲಿರುವ ಎಲ್ಲ ಖಂಡಗಳಿಗೂ ಹೋಗಿಬಂದಿದ್ದೇನೆ. ಪ್ರಪಂಚವನ್ನೆಲ್ಲಾ ತಿರುಗಿದ ನಂತರ ನಮ್ಮೊಳಗಿನ ಪ್ರಯಾಣವೇ ಮುಖ್ಯ ಅನಿಸುತ್ತಿದೆ. ನಮ್ಮೊಳಗೆ ದೊಡ್ಡ ವಿಶ್ವವೇ ಇದೆ. ಒಳಗಿನ ಪ್ರಪಂಚ ಬದಲಾದರೆ ಹೊರಗೆ ಬದಲಾವಣೆ ತರಬಹುದು. ಪ್ರೀತಿಯಿಂದ ಎಲ್ಲವನ್ನೂ ಪರಿವರ್ತಿಸಬಹುದು ಎಂಬ ಆಶಾಭಾವದಲ್ಲಿದ್ದೇನೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ದಾವಣಗೆರೆಯಲ್ಲಿ ಇತ್ತೀಚೆಗೆ ಅನೇಕ ಉದಯೋನ್ಮುಖ ಸಾಹಿತಿಗಳು ಬೆಳಕಿಗೆ ಬರುತ್ತಿದ್ದಾರೆ. ಮಹಿಳಾ ಸಾಹಿತಿಗಳು ಕೂಡ ಪುರುಷರಿಗೆ ಸಮಾನರಾಗಿ ಕೃತಿ ರಚಿಸುತ್ತಿದ್ದಾರೆ. ಮೊಬೈಲ್‌ನಿಂದ ಯಾವುದೇ ಜ್ಞಾನ ಸಿಗುವುದಿಲ್ಲ. ನಾವು ಚಿಕ್ಕವರಿದ್ದಾಗಲೇ ರಾಮಾಯಣ, ಮಹಾಭಾರತ ಓದಿಕೊಂಡಿದ್ದೆವು. ಈಗಿನವರಿಗೆ ಅವುಗಳ ಪರಿಚಯವಿಲ್ಲ. ಹೀಗಾಗಿ ವಿದ್ಯಾರ್ಥಿ- ಯುವಜನರಲ್ಲಿ ಓದುವ ಅಭಿರುಚಿ ಬೆಳಸಬೇಕು ಎಂದು ಸಲಹೆ ನೀಡಿದರು.

ಸುಕನ್ಯಾ ತ್ಯಾವಣಿಗೆ ರಚಿಸಿರುವ “ನನ್ನ ಅಪ್ಪಾಜಿ” ಹಾಗೂ “ಮನದ ಹೊಸ್ತಿಲ ಒಳಗೆ” ಕವನ ಸಂಕಲನಗಳನ್ನು ಬಿಡುಗಡೆ ಮಾಡಲಾಯಿತು. ವಿವಿಧ ಕ್ಷೇತ್ರಗಳ ಸಾಧಕರಾದ ಎನ್.ಟಿ. ಎರ‍್ರಿಸ್ವಾಮಿ, ತ್ಯಾವಣಿಗೆ ವೀರಭದ್ರಸ್ವಾಮಿ ಇತರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆ ಕಾರ್ಯದರ್ಶಿ ಎನ್.ಎಸ್. ಅನುಸೂಯಮ್ಮ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಎಸ್.ಟಿ. ಶಾಂತ ಗಂಗಾಧರ, ಕಿರಣ್ ಕಾರಿಗನೂರು ಇತರರು ಇದ್ದರು.

- - -

-11ಕೆಡಿವಿಜಿ47:

ದಾವಣಗೆರೆಯಲ್ಲಿ ಸುಕನ್ಯಾ ತ್ಯಾವಣಿಗೆ ರಚಿಸಿರುವ “ನನ್ನ ಅಪ್ಪಾಜಿ” ಹಾಗೂ “ಮನದ ಹೊಸ್ತಿಲ ಒಳಗೆ” ಕವನ ಸಂಕಲನಗಳನ್ನು ತೇಜಸ್ವಿ ಪಟೇಲ್, ಗಣ್ಯರು ಬಿಡುಗಡೆ ಮಾಡಿದರು.