ನಾಮಪತ್ರ ತಿರಸ್ಕಾರಕ್ಕೆ ಅವಕಾಶ ನೀಡಬೇಡಿ: ಗಂಗೂಬಾಯಿ

| Published : Apr 05 2024, 01:02 AM IST

ನಾಮಪತ್ರ ತಿರಸ್ಕಾರಕ್ಕೆ ಅವಕಾಶ ನೀಡಬೇಡಿ: ಗಂಗೂಬಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಚುನಾವಣೆಗೆ ಸ್ಪರ್ಧಿಸುವ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಏ. 6ರಿಂದ ನಾಮಪತ್ರ ಸಲ್ಲಿಕೆಯ ಅರ್ಜಿಗಳನ್ನು ವಿತರಿಸಲಾಗುವುದು.

ಕಾರವಾರ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ, ಜಿಲ್ಲೆಯಲ್ಲಿ ಏ. 12ರಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭಗೊಳ್ಳಲಿದ್ದು, ರಾಜಕೀಯ ಪಕ್ಷಗಳು ಮತ್ತು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ನಾಮಪತ್ರಗಳು ತಿರಸ್ಕಾರವಾಗದಂತೆ ಅತ್ಯಂತ ಎಚ್ಚರಿಕೆಯಿಂದ ಅರ್ಜಿಯನ್ನು ಭರ್ತಿ ಮಾಡುವಂತೆ ಮತ್ತು ಈ ಕುರಿತಂತೆ ಜಿಲ್ಲಾ ಚುನಾವಣಾಧಿಕಾರಿ ಕಚೇರಿಯ ನೆರವು ಪಡೆಯುವಂತೆ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳಿಗೆ ನಾಮಪತ್ರ ಸಲ್ಲಿಕೆ ಕುರಿತು ಪಾಲಿಸಬೇಕಾದ ಕ್ರಮಗಳ ಕುರಿತು ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಚುನಾವಣೆಗೆ ಸ್ಪರ್ಧಿಸುವ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಏ. 6ರಿಂದ ನಾಮಪತ್ರ ಸಲ್ಲಿಕೆಯ ಅರ್ಜಿಗಳನ್ನು ವಿತರಿಸಲಾಗುವುದು.

ಏ. 12ರಿಂದ 19ರ ವರೆಗೆ(ಸರ್ಕಾರಿ ರಜೆ ಹೊರತುಪಡಿಸಿ) ಬೆಳಗ್ಗೆ 11ರಿಂದ ಮಧ್ಯಾಹ್ನ 3 ವರೆಗೆ ನಗರದ ಚುನಾವಣಾಧಿಕಾರಿ(ಡಿಸಿ) ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದು. ಏ. 20ರಂದು ನಾಮಪತ್ರಗಳ ಪರಿಶೀಲನೆ ಮತ್ತು ಏ. 22ರಂದು ಮಧ್ಯಾಹ್ನ 3 ಗಂಟೆ ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದೆ ಎಂದರು.

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಿಗದಿತ ನಮೂನೆ- 2ರಲ್ಲಿ ನಾಮಪತ್ರ ಸಲ್ಲಿಸಬೇಕಾಗಿದ್ದು, ಸೂಚಕರು ಮತ್ತು ಅಭ್ಯರ್ಥಿಗಳು ಕಡ್ಡಾಯವಾಗಿ ಸಹಿ ಮಾಡಬೇಕು. ಇಲ್ಲವಾದಲ್ಲಿ ನಾಮಪತ್ರ ತಿರಸ್ಕೃತಗೊಳ್ಳಲಿದೆ. ಸೂಚಕರು ಕಡ್ಡಾಯವಾಗಿ ಇದೇ ಲೋಕಸಭಾ ಕ್ಷೇತ್ರದ ಮತದಾರರಾಗಿದ್ದು, ರಾಷ್ಟ್ರೀಯ ಮತ್ತು ರಾಜ್ಯ ಪಕ್ಷದ ಅಭ್ಯರ್ಥಿಯಾದಲ್ಲಿ ಒಬ್ಬ ಸೂಚಕರು ಮತ್ತು ನೋಂದಾಯಿತ ಪಕ್ಷ ಮತ್ತು ಪಕ್ಷೇತರರಾದಲ್ಲಿ 10 ಸೂಚಕರ ಸಹಿ ಇರಬೇಕು.

ನಮೂನೆ 26ರಲ್ಲಿ ₹100 ಛಾಪಾ ಕಾಗದದಲ್ಲಿ ಅಫಿಡವಿಟ್ ಸಲ್ಲಿಸಬೇಕು. ಅಫಿಡವಿಟ್‌ನ ಎಲ್ಲ ಪುಟಗಳಿಗೆ ಸಹಿ ಮಾಡಬೇಕು ಮತ್ತು ಯಾವುದೇ ಕಾಲಂ ಖಾಲಿ ಬಿಡಬಾರದು. ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾದಲ್ಲಿ ಫಾರಂ ಎ ಮತ್ತು ಬಿ ಗಳ ಮೂಲ ಪ್ರತಿಗಳನ್ನು ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕದ ಮಧ್ಯಾಹ್ನ 3 ಗಂಟೆಯೊಳಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.

ಅಭ್ಯರ್ಥಿಯು ಕನಿಷ್ಠ 25 ವರ್ಷ ವಯೋಮಿತಿ ಹೊಂದಿದ್ದು, ಗರಿಷ್ಠ 4 ನಾಮಪತ್ರ ಸಲ್ಲಿಸಬಹುದು. ಸಾಮಾನ್ಯ ಅಭ್ಯರ್ಥಿಗೆ ₹25000 ಮತ್ತು ಪ. ಜಾತಿ ಪಂಗಡಕ್ಕೆ ಸೇರಿದ ಅಭ್ಯರ್ಥಿಗೆ ₹12500 ಠೇವಣಿ ಹಣ ನಿಗದಿಪಡಿಸಿದೆ. ನಾಮಪತ್ರ ಸಲ್ಲಿಸುವಾಗ ಚುನಾವಣಾಧಿಕಾರಿ ಕಚೇರಿಯ ಕಟ್ಟಡದ 100 ಮೀ. ವ್ಯಾಪ್ತಿಯಲ್ಲಿ ಕೇವಲ 3 ವಾಹನಗಳಿಗೆ ಮಾತ್ರ ಪ್ರವೇಶವಿದ್ದು, ಚುನಾವಣಾಧಿಕಾರಿ ಕೊಠಡಿಗೆ ಅಭ್ಯರ್ಥಿಯ ಜತೆಗೆ 4 ಜನರಿಗೆ ಮಾತ್ರ ಅವಕಾಶವಿದ್ದು, ಮಾಧ್ಯಮದವರಿಗೆ ಪ್ರವೇಶವಿಲ್ಲ. ವಾರ್ತಾ ಇಲಾಖೆಯ ಮೂಲಕ ನಾಮಪತ್ರ ಸಲ್ಲಿಕೆಯ ಫೋಟೋ ಮತ್ತು ವಿಡಿಯೋ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ವಿವಿಧ ಪಕ್ಷದ ಪ್ರತಿನಿಧಿಗಳು ಇದ್ದರು.