ಸಾರಾಂಶ
ಕನ್ನಡಪ್ರಭ ವಾರ್ತೆ ಭದ್ರಾವತಿ
ಹಬ್ಬಗಳನ್ನು ಆಚರಿಸುವುದು ನಾಗರಿಕರ ಹಕ್ಕು. ನಾಗರಿಕರು ತಮ್ಮ ಕರ್ತವ್ಯಗಳನ್ನು ನಿಭಾಯಿಸುವ ಜವಾಬ್ದಾರಿ ಹೊರಬೇಕಾಗಿದೆ. ಹಬ್ಬಗಳ ಆಚರಣೆಯಿಂದ ಇನ್ನೊಬ್ಬರಿಗೆ ತೊಂದರೆಯಾಗಬಾರದು ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಹೇಳಿದರು.ನಗರದ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಗೌರಿ-ಗಣೇಶ, ಈದ್ ಮಿಲಾದ್ ಹಬ್ಬದ ಅಂಗವಾಗಿ ಏರ್ಪಡಿಸಲಾಗಿದ್ದ ಶಾಂತಿಸಭೆ ನೇತೃತ್ವವಹಿಸಿ ಮಾತನಾಡಿದರು.
ಪ್ರತಿಯೊಂದು ಹಬ್ಬಕ್ಕೂ ಒಂದೊಂದು ಮಹತ್ವವಿದೆ. ಇದನ್ನು ಪ್ರತಿಯೊಬ್ಬರು ಮೊದಲು ಅರ್ಥಮಾಡಿಕೊಳ್ಳಬೇಕು. ಪ್ರತಿಷ್ಠೆಗಾಗಿ, ತೋರ್ಪಡಿಕೆಗಾಗಿ ಹಬ್ಬಗಳನ್ನು ಆಚರಿಸಬಾರದು ಎಂದರು.ಸಮಾಜದಲ್ಲಿ ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಬದುಕಬೇಕು. ಈ ನಿಟ್ಟಿನಲ್ಲಿ ಇಲಾಖೆ ಎಲ್ಲಾ ರೀತಿಯ ಕಾರ್ಯಕ್ಕೂ ಸಿದ್ದವಿದೆ. ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡುವ ಕಿಡಿಗೇಡಿಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಪದೇ ಪದೇ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿರುವ, ಅಪರಾಧ ಪ್ರಕರಣಗಳ ಹಿನ್ನಲೆಯುಳ್ಳ ಒಟ್ಟು ೮೬ ಮಂದಿ ಗಡಿಪಾರಿಗೆ ಆದೇಶವಾಗಿದ್ದು, ಇನ್ನಷ್ಟು ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದರು.
ನಗರದ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಸ್ಥಳಗಳಲ್ಲಿ ಈಗಾಗಲೇ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಈ ಬಾರಿ ಸರ್ಕಾರ ಡಿಜೆ ಬಳಸದಂತೆ ನಿಷೇಧ ಆದೇಶ ಹೊರಡಿಸಿದೆ. ಈ ಹಿನ್ನಲೆಯಲ್ಲಿ ಡಿಜೆ ಬಳಕೆಗೆ ಅನುಮತಿ ನೀಡುವುದಿಲ್ಲ. ಹಬ್ಬಗಳ ಯಶಸ್ವಿಗೆ ತಾಲೂಕು ಆಡಳಿತ, ನಗರಸಭೆ, ಶಾಸಕರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಹೆಚ್ಚಿನ ಸಹಕಾರ ನೀಡಬೇಕೆಂದರು.ಸಭೆಯಲ್ಲಿ ಪ್ರಮುಖರಾದ ಅಂಜುಮನ್ ಇಸ್ಲಾಹುಲ್ ಮುಸ್ಲಿಮೀನ್ ತಾಲೂಕು ಅಧ್ಯಕ್ಷ ಅಯೂಬ್ ಖಾನ್, ಕಾಂಗ್ರೆಸ್ ಅಲ್ಪಸಂಖ್ಯಾರ ಘಟಕದ ಮುಖಂಡ ಸಿ.ಎಂ ಖಾದರ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ನಗರಸಭೆ ಸದಸ್ಯರಾದ ಬಿ.ಟಿ ನಾಗರಾಜ್, ಚನ್ನಪ್ಪ, ಮಾಜಿ ಸದಸ್ಯ ಬಾಬಾ ಜಾನ್, ಹಿಂದೂ ಮಹಾಸಭಾ ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ವಿ. ಕದಿರೇಶ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಚುನಾಯಿತ ಪ್ರತಿನಿಧಿಗಳು ಮಾತನಾಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಹಸೀಲ್ದಾರ್ ಪರುಸಪ್ಪ ಕುರುಬರ, ನಗರಸಭೆ ಪೌರಾಯುಕ್ತ ಕೆ.ಎನ್ ಹೇಮಂತ್, ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ರತ್ನಪ್ರಭ, ಪೇಪರ್‌ಟೌನ್ ಪೊಲೀಸ್ ಠಾಣೆ ನಿರೀಕ್ಷಕಿ ನಾಗಮ್ಮ ಇನ್ನಿತರರು ಉಪಸ್ಥಿತರಿದ್ದರು.ಪ್ರಮುಖರಾದ ಮುತುರ್ಜಾಖಾನ್, ಲತಾ ಚಂದ್ರಶೇಖರ್, ಮಣಿ ಎಎನ್‌ಎಸ್, ನಾಗೇಶ್, ಬಸವರಾಜ ಬಿ. ಆನೇಕೊಪ್ಪ, ದಿಲ್‌ದಾರ್, ಬಿ. ಮೂರ್ತಿ, ಎಂ.ಎಸ್ ರವಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಚುನಾಯಿತ ಜನಪ್ರತಿನಿಧಿಗಳು, ವಿವಿಧ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.
ನಗರವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್ ಸ್ವಾಗತಿಸಿ, ಗ್ರಾಮಾಂತರ ವೃತ್ತ ನಿರೀಕ್ಷಕ ಜಗದೀಶ್ ಹಂಚಿನಾಳ ವಂದಿಸಿದರು.