ವಿಷಯಗಳನ್ನು ಜಯಂತಿ ಆಚರಣೆಗೆ ಸಿಮೀತಗೊಳಿಸಬೇಡಿ

| Published : Sep 08 2025, 01:00 AM IST

ವಿಷಯಗಳನ್ನು ಜಯಂತಿ ಆಚರಣೆಗೆ ಸಿಮೀತಗೊಳಿಸಬೇಡಿ
Share this Article
  • FB
  • TW
  • Linkdin
  • Email

ಸಾರಾಂಶ

ರಕ್ತ ಕ್ರಾಂತಿ ಇಲ್ಲದೆ, ತಮ್ಮ ವಿಚಾರಗಳ ಮೂಲಕವೇ ಸಮಾಜ ಪರಿವರ್ತನೆಗೆ ಕಾರಣರಾದವರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಗ್ರೇಡ್ -2 ತಹಸೀಲ್ದಾರ್ ಬಿ.ಎಂ ಶಶಿಕಲಾ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ರಕ್ತ ಕ್ರಾಂತಿ ಇಲ್ಲದೆ, ತಮ್ಮ ವಿಚಾರಗಳ ಮೂಲಕವೇ ಸಮಾಜ ಪರಿವರ್ತನೆಗೆ ಕಾರಣರಾದವರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಗ್ರೇಡ್ -2 ತಹಸೀಲ್ದಾರ್ ಬಿ.ಎಂ ಶಶಿಕಲಾ ತಿಳಿಸಿದರು. ತಾಲೂಕು ಕಚೇರಿಯ ಕೋರ್ಟ್ ಹಾಲ್ ನಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕೇರಳದಲ್ಲಿ ಜನಿಸಿದ ಸಮಾಜ ಸುಧಾರಕರಲ್ಲಿ ಒಬ್ಬರಾಗಿದ್ದ ನಾರಾಯಣ ಗುರು, ಜಾತಿ ತಾರತಮ್ಯ ನಿವಾರಿಸಿ ಸಮಾನತೆ ತರಲು ಚಳವಳಿ ರೂಪಿಸಿದರು. ಗುರುಗಳ ತತ್ವ ಮತ್ತು ಆದರ್ಶ ಅಳವಡಿಸಿಕೊಳ್ಳಬೇಕು. ಜಯಂತಿ ಆಚರಣೆಗೆ ಮಾತ್ರ ಸೀಮಿತಗೊಳ್ಳಬಾರದು. ಶತಮಾನದ ಹಿಂದೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಜನರಿಗೆ ನ್ಯಾಯ ಒದಗಿಸಿಕೊಟ್ಟವರು ನಾರಾಯಣ ಗುರುಗಳು. ಅವರ ವಿಚಾರಗಳನ್ನು ಮುಂದಿನ ಪೀಳಿಗೆಗೂ ತಲುಪಿಸುವ ಕೆಲಸವಾಗಬೇಕು ಎಂದು ತಿಳಿಸಿದರು. ಈಡಿಗ ಸಮುದಾಯದ ಮಂಜುನಾಥ್ ಮಾತನಾಡಿ, ನಾರಾಯಣ ಗುರು ಒಬ್ಬ ವ್ಯಕ್ತಿ ಶ್ರೇಷ್ಠ ನಾಯಕನಾಗುವ ಅರ್ಹತೆ, ಜನಪರ-ಜನಸ್ನೇಹಿ ಚಿಂತನೆಗಳಿಗೆ ಬೆಳಕು ಚೆಲ್ಲುವ ಕಾರ್ಯಸ್ವರೂಪ ಮತ್ತು ಸಮಾಜವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರಬೇಕಾದರೆ ಆತನ ತತ್ವ-ಚಿಂತನೆಗಳು ಉನ್ನತವಾಗಿರಬೇಕು. ಆತನ ಧ್ಯೇಯದ ಮೇಲೆ ಬಲವಾದ ನಂಬಿಕೆ ಇರಬೇಕು. ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವ ಅದಮ್ಯ ಇಚ್ಛಾಶಕ್ತಿ ಇರಬೇಕು. ಇಂತಹ ಗುಣಗಳನ್ನು ಹೊಂದಿದ ವ್ಯಕ್ತಿ ಮಾತ್ರ ಮುಂದೆ ಗುರುವಾಗಬಲ್ಲ, ಉತ್ತಮ ನಾಯಕನಾಗಬಲ್ಲ. ಈ ಎಲ್ಲಾ ಗುಣಗಳನ್ನು ಹುಟ್ಟಿನಿಂದಲೇ ಮೈಗೂಡಿಸಿ ಕೊಂಡಿರುವವರು, ಜಾಗತಿಕ ಆಧ್ಯಾತ್ಮ ಸಂತ ಎಂದೇ ಖ್ಯಾತಿ ಪಡೆದಿರುವ ಬ್ರಹ್ಮಶ್ರೀ ನಾರಾಯಣ ಗುರುಗಳು. ಪ್ರಸ್ತುತ ವಿದ್ಯಾಮಾನಕ್ಕೆ ಮತ್ತು ಆಧುನಿಕ ಜಗತ್ತಿಗೆ ಗುರುಗಳು ಸಾರಿದ ಸಂದೇಶಗಳು ಅತ್ಯಗತ್ಯ. ಪುರುಷಾರ್ಥದಲ್ಲಿ ಮೋಕ್ಷವನ್ನು ಪಡೆಯಲು ಗುರುಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅನಿವಾರ್ಯತೆ ಇದ್ದೇ ಇದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಬಿಇಓ ನಟರಾಜ್, ತಾ.ಪಂ ಜಗನ್ನಾಥ್, ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಯಲ್ಲಪ್ಪ, ಸಮಾಜದ ಅಧ್ಯಕ್ಷ ಚೇಳೂರು ವೆಂಕಟೇಶ್, ಮಂಜಣ್ಣ , ಚರಣ್, ಉಪಾಧ್ಯಕ್ಷ ಮಂಜಣ್ಣ, ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.