ಸಾರಾಂಶ
ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಬೆಂಬಲಿಗರಾದ ತಾಲೂಕಿನ ಹೊರೆಯಾಲ ಗ್ರಾಪಂ ಬಿಜೆಪಿ ಬೆಂಬಲಿತ ಸದಸ್ಯ ರೇವಣ್ಣ ಸೇರಿದಂತೆ ಬಿಜೆಪಿಯ ಕೆಲವು ಮುಖಂಡರು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ಗುಂಡ್ಲುಪೇಟೆ : ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಬಗ್ಗೆ ಅಪಪ್ರಚಾರಕ್ಕೆ ಕಿವಿಗೊಡದೆ ಕಾಂಗ್ರೆಸ್‌ಗೆ ಹೆಚ್ಚಿನ ಮತ ನೀಡಬೇಕು ಎಂದು ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ತಾಲೂಕಿನ ಹೊರೆಯಾಲ, ಕೋಟೆಕೆರೆ ಹಾಗೂ ರಾಘವಾಪುರ ಗ್ರಾಮದಲ್ಲಿ ಪ್ರತ್ಯೇಕವಾಗಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಪ್ರಚಾರ ಸಭೆಯಲ್ಲಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಪರ ಮತಯಾಚಿಸಿ ಮಾತನಾಡಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೇಗೂರು ಭಾಗದಲ್ಲಿ ೭ಸಾವಿರಕ್ಕೂ ಹೆಚ್ಚು ಲೀಡ್ ನೀಡಿದ್ದೀರಿ. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಜೊತೆಗೆ ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿರುವ ಕಾರಣ ಕಾರ್ಯಕರ್ತರು ಪ್ರತಿ ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್‌ಗೆ ಹೆಚ್ಚು ಮತ ಕೊಡಿಸಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ನುಡಿದಂತೆ ನಡೆದಿದೆ. ಮುಂದೆಯೂ ನಡೆಯಲಿದ್ದು ಮತದಾರರ ಮನವೊಲಿಸಿ ನನಗೆ ಬಂದ ಲೀಡ್‌ಗಿಂತಲೂ ಹೆಚ್ಚು ಲೀಡ್ ಬರಲು ಶ್ರಮಿಸಬೇಕು ಎಂದರು. ವಿಪಕ್ಷದವರ ಟೀಕೆಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಕಳೆದ ಚುನಾವಣೆಯಲ್ಲಿ ಮತದಾರ ತಕ್ಕ ಉತ್ತರ ನೀಡಿದ್ದಾರೆ. ಮತದಾರರಿಗೆ ನೀಡಿದ್ದ ಭರವಸೆಯನ್ನು ಸರ್ಕಾರ ಈಡೇರಿಸಿದೆ. ಕಾರ್ಯಕರ್ತರು ಸುಳ್ಳು ಹೇಳಿ ಮತ ಕೇಳಬೇಕಿಲ್ಲ ಎಂದು ಪರೋಕ್ಷವಾಗಿ ಬಿಜೆಪಿಗೆ ತಿರುಗೇಟು ನೀಡಿದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಸ್ಪರ್ಧಿಸಿದ್ದು ಕಾಲಾವಕಾಶ ಕಡಿಮೆ ಇರುವ ಕಾರಣ ಪ್ರತಿ ಹಳ್ಳಿಗೆ ಬರಲು ಆಗುವುದಿಲ್ಲ. ಸುನೀಲ್ ಬೋಸ್ ಕೂಡ ಯುವಕ, ಕೆಲಸ ಮಾಡುವ ಆಸಕ್ತಿ ಇರುವ ಕಾರಣ ಕ್ಷೇತ್ರದ ಮತದಾರರು ಆಯ್ಕೆ ಮಾಡಿದರೆ ಕಾಂಗ್ರೆಸ್‌ಗೆ ಶಕ್ತಿ ಬರಲಿದೆ ಎಂದರು.
ಗಂಡಸರಿಗೆ ಉಳಿತಾಯ:
ರಾಜ್ಯ ಸರ್ಕಾರ ಐದು ಗ್ಯಾರಂಟಿ ಜಾರಿಗೆ ತಂದ ಮೇಲೆ ಪುರುಷರಿಗೆ ಹಣ ಉಳಿತಾಯವಾಗಿದೆ. ಹೇಗೆ ಎಂದರೆ ಬಸ್‌ನಲ್ಲಿ ಪ್ರಯಾಣಿಸಲು ದುಡ್ಡು ಕೊಡಂಗಿಲ್ಲ. ಗೃಹಲಕ್ಷ್ಮೀ ಯೋಜನೆಯ ೨ ಸಾವಿರ ರು. ಬಂದರೆ ಸಣ್ಣ ಪುಟ್ಟ ಖರ್ಚಿಗೆ ಪುರುಷರ ಬಳಿ ದುಡ್ಡು ಕೇಳದ ಕಾರಣ ಪುರುಷರಿಗೆ ಹಣ ಉಳಿಯುತ್ತಿದೆ ಎಂದರು. ನಾನು ಅಧಿಕಾರ ಇಲ್ಲದೆ ಇದ್ದಾಗಲೂ ಕ್ಷೇತ್ರದ ಜನರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದೆ. ಅಧಿಕಾರ ಬಂದ ಬಳಿಕವೂ ಜನರೊಂದಿಗೆ ಸಂಪರ್ಕ ಕಳೆದುಕೊಂಡಿಲ್ಲ. ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತಿದ್ದೇನೆ. ಮುಂದೆಯೂ ನಿಮ್ಮ ಕಷ್ಟ ಸುಖಗಳಿಗೆ ಭಾಗಿಯಾಗುವೆ ಎಂದರು.
ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್. ನಂಜಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ಮುನಿರಾಜು, ಮೈಮುಲ್ ಮಾಜಿ ಅಧ್ಯಕ್ಷ ಎನ್. ಮಹದೇವಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್. ಮಹೇಶ್, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಜಿಪಂ ಮಾಜಿ ಸದಸ್ಯ ಕೆ.ಶಿವಸ್ವಾಮಿ, ತಾಪಂ ಮಾಜಿ ಸದಸ್ಯರಾದ ಡಿ. ಶ್ರೀನಿವಾಸಮೂರ್ತಿ, ಬಹೊರೆಯಾಲ ನೀಲಕಂಠಪ್ಪ, ಗ್ರಾಪಂ ಅಧ್ಯಕ್ಷ ತಗ್ಗಲೂರು ತಮ್ಮಯ್ಯಪ್ಪ, ಕಾಂಗ್ರೆಸ್ ಮುಖಂಡರಾದ ಹಸಗೂಲಿ ಮಹೇಶ್, ಅಶೋಕ್, ಬೆಟ್ಟದಮಾದಹಳ್ಳಿ ಮಹದೇವಸ್ವಾಮಿ, ದೊಡ್ಡಹುಂಡಿ ಅಂಬರೀಶ್, ಹೊರೆಯಾಲ ಶರತ್, ಗೋವಿಂದ, ಹೊರೆಯಾಲ, ರಾಘವಾಪುರ, ಕೋಟೆಕೆರೆ ಗ್ರಾಪಂ ವ್ಯಾಪ್ತಿಯ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.
ಬಿಜೆಪಿ ಬೆಂಬಲಿತ ಮುಖಂಡರು ಕೈ ಸೇರ್ಪಡೆ
ಗುಂಡ್ಲುಪೇಟೆ: ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಬೆಂಬಲಿಗರಾದ ತಾಲೂಕಿನ ಹೊರೆಯಾಲ ಗ್ರಾಪಂ ಬಿಜೆಪಿ ಬೆಂಬಲಿತ ಸದಸ್ಯ ರೇವಣ್ಣ ಸೇರಿದಂತೆ ಬಿಜೆಪಿಯ ಕೆಲವು ಮುಖಂಡರು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಗ್ರಾಪಂ ಬಿಜೆಪಿ ಬೆಂಬಲಿತ ಸದಸ್ಯ ರೇವಣ್ಣ, ಮುಖಂಡರಾದ ಮುದ್ದಯ್ಯ, ಪ್ರಕಾಶ್, ದೊಡ್ಡ ಮಹದೇವು ಬಿಜೆಪಿ ತೊರೆದರು. ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಮುಖಂಡರನ್ನು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಸ್ವಾಗತಿಸಿ ಮಾತನಾಡಿ, ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿ ಎಂದು ಕೇಳಿಕೊಂಡರು.