ಸಾರಾಂಶ
ರಾಮನಗರ : ಅರ್ಹರು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲಿ ಎಂಬ ಉದ್ದೇಶದಿಂದ ಅಧಿಕಾರಿಗಳೊಂದಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಗ್ಯಾರಂಟಿ ಯೋಜನೆಗಳ ಸಮಿತಿ ತಾಲೂಕು ಅಧ್ಯಕ್ಷ ವಿ.ಎಚ್. ರಾಜು ಹೇಳಿದರು.
ತಾಲೂಕಿನ ಕೈಲಾಂಚ ಹೋಬಳಿ ಹುಲಿಕೆರೆ-ಗುನ್ನೂರು ಹಾಗೂ ಹುಣಸನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಬುಧವಾರ ಗ್ಯಾರಂಟಿ ಯೋಜನೆಗಳ ಕುಂದುಕೊರತೆ ಸಭೆ ನಡೆಸಿ ಅವರು ಮಾತನಾಡಿ, ನಾನು ಕಳೆದ ಎರಡು ದಿನಗಳಿಂದ ವಿಭೂತಿಕೆರೆ, ಬನ್ನಿಕುಪ್ಪೆ, ಹುಲಿಕೆರೆ-ಗುನ್ನೂರು ಗ್ರಾಪಂಗಳಲ್ಲಿ ಸಭೆ ನಡೆಸಿ ಫಲಾನುಭವಿಗಳಿಂದ ದೂರುಗಳನ್ನು ಸ್ವೀಕರಿಸಿದ್ದೇನೆ. ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದರು.
ಹುಣಸನಹಳ್ಳಿ ಗ್ರಾಪಂನಲ್ಲಿ ಬಂದ ದೂರುಗಳ ಪೈಕಿ ಬಹುತೇಕ ಆದಾಯ ತೆರಿಗೆ ಮತ್ತು ಜಿಎಸ್‌ಟಿ ಸಮಸ್ಯೆಯಿಂದ ಗ್ಯಾರಂಟಿ ಯೋಜನೆಗೆ ಅರ್ಹರಿರುವವರು ತಿರಸ್ಕಾರವಾಗಿರುವ ಬಗ್ಗೆ ಅರ್ಜಿಗಳು ಬಂದಿವೆ. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.
ಮಹಿಳೆಯರು ಸಮಸ್ಯೆ ಹೊತ್ತು ತಾಲೂಕು ಕೇಂದ್ರಕ್ಕೆ ಬರುವ ಬದಲು ನಾವೇ ಪಂಚಾಯಿತಿ ಮಟ್ಟದಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆಯಲ್ಲಿ ಸಮಸ್ಯೆಗಳಿವೆ. ಪಡಿತರ ಚೀಟಿ ಸಮಸ್ಯೆ, ಐಟಿ, ಜಿಎಸ್‌ಟಿ ಸಮಸ್ಯೆಗಳಿಂದ ಯೋಜನೆಗೆ ಅರ್ಹರಾಗಿರುವವರು ವಂಚಿತರಾಗಿದ್ದಾರೆ. ಅವರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವುದು ನಮ್ಮೆಲ್ಲರ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ವೇಳೆ ಹುಣಸನಹಳ್ಳಿ ಗ್ರಾಪಂನಲ್ಲಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಡಿ ನಮಗೆ ಹಣ ಬಂದಿಲ್ಲ. ರೇಷನ್ ಕಾರ್ಡ್ ಸಮಸ್ಯೆಯಾಗಿದೆ. ಇದರಿಂದ ಹಣ ಬರುತ್ತಿಲ್ಲ ಸಮಸ್ಯೆಗೆ ಪರಿಹಾರ ನೀಡುವುದು ಸೇರಿದಂತೆ ಇತ್ಯಾದಿ ಮನವಿ ಪತ್ರಗಳನ್ನು ಗ್ಯಾರಂಟಿ ಸಮಿತಿ ಅಧ್ಯಕ್ಷರಿಗೆ ಸಲ್ಲಿಸಿದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರದೀಪ್, ಸಿಡಿಪಿಒ ಕಾಂತರಾಜು, ಹುಲಿಕೆರೆ-ಗುನ್ನೂರು ಗ್ರಾಪಂ ಅಧ್ಯಕ್ಷ ಗಿರೀಶ್, ಹುಣಸನಹಳ್ಳಿ ಪಿಡಿಒ ಕುಮಾರ್ , ಸದಸ್ಯರು ಹಾಗೂ ಮಹಿಳೆಯರು ಹಾಜರಿದ್ದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧವಿರುವ ಸಮಸ್ಯೆಗಳನ್ನು ಬಗೆಹರಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯೋಜನಾ ಸಮಿತಿ ಅಧ್ಯಕ್ಷರು ಕುಂದುಕೊರತೆ ಸಭೆ ನಡೆಸುತ್ತಿರುವುದು ಸೂಕ್ತವಾಗಿದೆ. ಇದರಿಂದ ಅರ್ಹರಿಗೆ ಆಗುತ್ತಿರುವ ಅನ್ಯಾಯವನ್ನು ಬಗೆಹರಿಸುವ ಜೊತಗೆ ಮುಕ್ತವಾಗಿ ಸಮಸ್ಯೆ ಬಗ್ಗೆ ಚರ್ಚೆ ನಡೆಸಲು ಸಹಕಾರಿಯಾಗಿದೆ.
ಗಿರೀಶ್, ಅಧ್ಯಕ್ಷರು, ಹುಲಿಕೆರೆ-ಗುನ್ನೂರು ಗ್ರಾಪಂ
ಕೂಲಿ ಮಾಡುವವರು ಸಮಸ್ಯೆ ಹೊತ್ತು ನಿಮ್ಮ ಕಚೇರಿಗಳ ಮುಂದೆ ಕುಳಿತು ಕಾಯುತ್ತಾರೆ. ಸಮಸ್ಯೆ ಹೊತ್ತು ಬರುವ ಫಲಾನುಭವಿಗಳಿಗೆ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಬದಲು ಹಾರಿಕೆ ಉತ್ತರ ಕೊಡುವುದನ್ನು ಬಿಡಬೇಕು. ಜನರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಇಲ್ಲದಿದ್ದಲ್ಲಿ ಕೂಲಿಕಾರರೇ ನಿಮ್ಮ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಿದ್ದಾರೆ.
ಪುಟ್ಟಸ್ವಾಮಿ, ಅಧ್ಯಕ್ಷರು, ಹುಣಸನಹಳ್ಳಿ ಗ್ರಾಪಂ