ಸಾರಾಂಶ
- ಆಕಾಶದ ಕೌತುಕ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಚಾರ್ಯ ಡಾ. ಜೆ.ಬಿ.ರಾಜ್- - - ಕನ್ನಡಪ್ರಭ ವಾರ್ತೆ ದಾವಣಗೆರೆ ಜಗತ್ತಿನಲ್ಲಿ ನಡೆಯುವ ಕೌತುಕಗಳನ್ನು ನೋಡುವ ಅದ್ಭುತ ಅವಕಾಶಗಳನ್ನು ಯಾರೂ ಕಳೆದುಕೊಳ್ಳಬಾರದು ಎಂದು ಧರಾಮ ವಿಜ್ಞಾನ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ. ಜೆ.ಬಿ. ರಾಜ್ ಹೇಳಿದರು.
ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಕರ್ನಾಟಕ ವಿಜ್ಞಾನ ಪರಿಷತ್ತು, ಜಿಲ್ಲಾ ಬಾಲಭವನ, ಎ.ವಿ.ಕೆ. ಮಹಿಳಾ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಆಕಾಶದ ಕೌತುಕ- 2024ರ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ವಿದ್ಯಾವಂತ ಜನರಲ್ಲಿಯೇ ಅತಿಹೆಚ್ಚು ಮೌಢ್ಯಾಚರಣೆ ಕಾಣುತ್ತಿದ್ದೇವೆ. ನಾವು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಂಡು, ಇತರರಿಗೂ ಮಾದರಿ ಆಗಬೇಕಿದೆ. ಇಂತಹ ವೈಜ್ಞಾನಿಕ ಮನೋಭಾವನೆ ಬೆಳೆಸುವಲ್ಲಿ ರಾಜ್ಯ ವಿಜ್ಞಾನ ಪರಿಷತ್ತು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು, ವೀಕ್ಷಿಸಿದಾಗ ಜಗತ್ತಿನ ಕೌತುಕಗಳನ್ನು ಗಮನಿಸಬಹುದು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯಕ್ರಮ ನಿರೂಪಣಾಧಿಕಾರಿ ಗುರುಪ್ರಸಾದ್ ಮಾತನಾಡಿ, ಸ್ಟೀಫನ್ ಹಾಕಿಂಗ್ ದೈಹಿಕ ವಿಕಲತೆಯ ನಡುವೆಯೂ ಅದ್ಭುತ ಸಾಧನೆ ಮಾಡಿದರು. ಚಂದ್ರನ ಮೇಲೆ ವಿಶ್ವದಲ್ಲೇ ಯಾರೂ ಇಳಿಸದ ದಕ್ಷಿಣ ಧ್ರುವದಲ್ಲಿ ನಮ್ಮ ಇಸ್ರೋ ನೌಕೆಯನ್ನು ಇಳಿಸಿ, ಅದ್ಭುತ ಸಾಧನೆ ಮಾಡಿದೆ. ಹಾಗಾಗಿ, ನಾವು ಯಾವಾಗಲೂ ಆಶಾವಾದಿಗಳಾಗಿರಬೇಕು. ಉತ್ತಮ ಕಾರ್ಯಗಳಲ್ಲಿ ತೊಡಗಬೇಕು ಎಂದರು.ನಾವು ಪ್ರತಿದಿನ ಆಕಾಶ ನೋಡುತ್ತೇವೆ. ಅದರ ಬಗ್ಗೆ ಕೌತುಕಭರಿತ ಅಂಶಗಳ ಕುರಿತು ಯೋಚಿಸುವುದು ಕಡಿಮೆ. ಆದರೆ, ಆಕಾಶ ಎಷ್ಟು ವಿಶಾಲವಾಗಿದೆಯೋ ಅಷ್ಟೇ ಕೌತುಕವಾಗಿದೆ. ಅದನ್ನು ನೋಡುವ ನಮ್ಮ ಒಳದೃಷ್ಟಿ ಕುತೂಹಲಭರಿತ ಆಗಿರಬೇಕು. ಆಗ ನಾವು ಪ್ರತಿದಿನ ಹೊಸ ವಿದ್ಯಮಾನಗಳನ್ನು ಗುರುತಿಸಬಲ್ಲೆವು ಎಂದು ಹೇಳಿದರು.
ನಗರದ ಖಗೋಳ ತಜ್ಞ ಎಂ.ಟಿ. ಶರಣಪ್ಪ ಮಾತನಾಡಿ, ಬಹುತೇಕರು ಗ್ರಹಣ ಸಮಯದಲ್ಲಿ ತುಂಬಾ ಮೌಢ್ಯಗಳ ಪ್ರದರ್ಶಿಸುತ್ತಾರೆ. ಆದರೆ ಗ್ರಹಣಗಳು ಬಾಹ್ಯಾಕಾಶದಲ್ಲಿ ನಡೆಯುವ ಸಾಮಾನ್ಯ ಚಟುವಟಿಕೆಗಳು. ಕೆಲವು ಜ್ಯೋತಿಷಿಗಳು ಮೌಢ್ಯವನ್ನೇ ಬಂಡವಾಳ ಮಾಡಿಕೊಂಡು, ಇಲ್ಲಸಲ್ಲದ ಆಚರಣೆಗಳಿಗೆ ಪ್ರೋತ್ಸಾಯಿಸುತ್ತಾರೆ. ಆದರೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ದಾವಣಗೆರೆ ಜಿಲ್ಲಾ ಘಟಕದವರು ಗ್ರಹಣದ ಸಮಯದಲ್ಲಿಯೇ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಜನರ ಮೌಢ್ಯ ತೊಲಗಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.ಇಂದು ಜಿಲ್ಲೆಯಲ್ಲಿ ಮೌಢ್ಯಗಳ ಹಾಗೂ ಮೌಢ್ಯ ಬಿತ್ತುವವರ ಕುರಿತು ಜನಸಾಮನ್ಯರು ಹೆಚ್ಚು ಜಾಗೃತರಾಗಿದ್ದಾರೆ. ಬಾಹ್ಯಾಕಾಶದಲ್ಲಿ ನಡೆಯುವ ಕೌತುಕಭರಿತ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕಾರ್ಯಕ್ರಮಗಳು ಇಂದಿನ ದಿನಗಳಲ್ಲಿ ಕಡಿಮೆಯಾಗಿವೆ. ಆದ್ದರಿಂದ ಬಹುತೇಕರು ಬಾಹ್ಯಾಕಾಶ ವಿಸ್ಮಯಗಳನ್ನು ವೀಕ್ಷಿಸುವ ಅದ್ಭುತ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಆದರೆ, ಈ ತಿಂಗಳಲ್ಲಿ ಒಂದಲ್ಲ ಎರಡಲ್ಲ, ಮೂರು ಬಾಹ್ಯಾಕಾಶ ವಿಸ್ಮಯಗಳು ಜರುಗುತ್ತಿವೆ. ಇಂತಹ ಕೌತುಕಗಳನ್ನು ಮತ್ತೆ ಜೀವಮಾನದಲ್ಲಿ ಕಾಣಲಾರೆವು. ಆದ್ದರಿಂದ ಇಂತಹ ಬಾಹ್ಯಾಕಾಶ ಕೌತುಕಗಳ ಬಗೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಇಂದಿನ ಅಗತ್ಯಗಳಾಗಿವೆ ಎಂದು ತಿಳಿಸಿದರು.
ಎ.ವಿ. ಕಮಲಮ್ಮ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶಿವಕುಮಾರ, ಕರಾವಿಪ ಕಾರ್ಯದರ್ಶಿ ಎಂ.ಗುರುಸಿದ್ದಸ್ವಾಮಿ, ಕರಾವಿಪ ಜಿಲ್ಲಾ ಸಮಿತಿ ಸದಸ್ಯ ಸಿದ್ದೇಶ್ ಕತ್ತಲಗೆರೆ, ಬಾಲಭವನದ ಸಂಯೋಜಕಿ ಶಿಲ್ಪ ಹಾಗೂ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.- - -
ಬಾಕ್ಸ್ * 12ರಂದು ಧೂಮಕೇತು ಸಿ/2023 ಎ3 ಭೂಮಿಗೆ ಅತಿ ಹತ್ತಿರಕ್ಕೆ ಬರಲಿದೆದಾವಣಗೆರೆ: ಅ.12ರಂದು ಧೂಮಕೇತು ಸಿ/2023 ಎ3 (ಸುಚೇಶನ್-ಅಟ್ಲಾಸ್) ಭೂಮಿಗೆ ಅತಿ ಹತ್ತಿರಕ್ಕೆ ಬರಲಿದೆ. ಹಾಗಾಗಿ, ನಾವೆಲ್ಲರೂ ಅಂದಿನಿಂದ ಸಂಜೆ 6 ಗಂಟೆ 46 ನಿಮಿಷದಿಂದ ಬರಿಗಣ್ಣಿನಿಂದ ನೋಡಬಹುದು ಎಂದು ಖಗೋಳ ತಜ್ಞ ಎಂ.ಟಿ.ಶರಣಪ್ಪ ಹೇಳಿದರು.
ನಗರದ ಎವಿಕೆ ಮಹಿಳಾ ಕಾಲೇಜಿನಲ್ಲಿ ಕರಾವಿಪ, ಜಿಲ್ಲಾ ಬಾಲಭವನ ಸಹಯೋಗದಲ್ಲಿ ನಡೆದ ಆಕಾಶದ ಕೌತುಕ - 2024 ರ ಉಪನ್ಯಾಸ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು. ಧೂಮಕೇತು ಸಿ/2023 ಎ3 ಮತ್ತೊಮ್ಮೆ ನಮ್ಮ ಭೂಮಿ ಹತ್ತಿರಕ್ಕೆ ಬರುವುದು ಇನ್ನು 80,000 ವರ್ಷಗಳ ನಂತರ. ಹಾಗೆಯೇ, ಇದೇ ತಿಂಗಳ 14ರಂದು ರಾತ್ರಿ 12 ಗಂಟೆ 18 ನಿಮಿಷದಿಂದ 1 ಗಂಟೆ 20 ನಿಮಿಷದವರೆಗೆ ಶನಿಗ್ರಹವು ಚಂದ್ರನ ಹಿಂದಕ್ಕೆ ಚಲಿಸುತ್ತದೆ. ಇದನ್ನು ವೈಜ್ಞಾನಿಕ ಭಾಷೆಯಲ್ಲಿ ಅಚ್ಛಾದನೆ (Occultation) ಎನ್ನುವರು ಎಂದರು.ದೊಡ್ಡದಾಗಿ ಕಾಣುವ ಚಂದ್ರನ ಮರೆಗೆ ಸರಿಯುವ ಹಾಗೂ ಚಂದ್ರನ ಮರೆಯಿಂದ ಹೊರಬರುವ ಶನಿಗ್ರಹವನ್ನು ನೋಡುವುದೇ ಅದ್ಭುತ. ಬರಿಗಣ್ಣಿಗೆ ಗೋಚರಿಸುವ ಈ ವಿದ್ಯಮಾನವನ್ನು ಸಾಧಾರಣ ಬೈನಾಕ್ಯುಲರ್ ಇದ್ದಲ್ಲಿ ಇನ್ನೂ ಸ್ಪಷ್ಟವಾಗಿ ವೀಕ್ಷಿಸಬಹುದು. ಮೂರನೆಯ ಕೌತುಕವೆಂದರೆ, 1986 ರಲ್ಲಿ ನಮಗೆ ಕಾಣಿಸಿದ್ದ ಹ್ಯಾಲಿ ಧೂಮಕೇತು ಉಳಿಸಿಹೋದ ಅದರ ತ್ಯಾಜ್ಯಗಳ ಉಲ್ಕಾವರ್ಷ ಒರಾಯನ್ ನಕ್ಷತ್ರ ಪುಂಜದಲ್ಲಿ ಅಕ್ಟೋಬರ್ 21ರಂದು ಕಂಡುಬರುತ್ತದೆ. ಗಂಟೆಗೆ 25ರಿಂದ 30 ಉಲ್ಕೆಗಳು ಉರಿದುಬೀಳುತ್ತವೆ. ಇದೊಂದು ಕಣ್ಣಿಗೆ ಹಬ್ಬ. ಹಾಗಾಗಿ, ಯಾರೂ ಇಂತಹ ಅದ್ಭುತ ಅವಕಾಶಗಳನ್ನು ನೋಡಲು ಮರೆಯದಿರಿ ಎಂದರು.
- - - -8ಕೆಡಿವಿಜಿ34ಃ:ದಾವಣಗೆರೆಯಲ್ಲಿ ಕರಾವಿಪದಿಂದ ನಡೆದ ಆಕಾಶದ ಕೌತುಕ- 2024ರ ಉಪನ್ಯಾಸ ಕಾರ್ಯಕ್ರಮವನ್ನು ಡಾ. ಜೆ.ಬಿ.ರಾಜ್ ಉದ್ಘಾಟಿಸಿದರು. -8ಕೆಡಿವಿಜಿ35ಃ:
ದಾವಣಗೆರೆಯಲ್ಲಿ ಕ.ರಾ.ವಿ.ಪ.ದಿಂದ ನಡೆದ ಆಕಾಶದ ಕೌತುಕ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಜೆ.ಬಿ. ರಾಜ್ ಅವರನ್ನು ಸನ್ಮಾನಿಸಲಾಯಿತು.