ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಡೆಂಘೀ ರೋಗ ಬಂದಲ್ಲಿ ಭೀತಿಗೆ ಒಳಗಾಗುವುದು ಬೇಡ. ಸಕಾದಲ್ಲಿ ಚಿಕಿತ್ಸೆ ಪಡೆಯುವಂತೆ ಆರೋಗ್ಯ ನಿರೀಕ್ಷಣಾಧಿಕಾರಿ ಡಿ.ಮಹೇಶ್ ಸಲಹೆ ಮಾಡಿದರು.ತಾಲೂಕಿನ ಗೊನೂರು ಪಂಚಾಯತಿಯ ಬೊಮ್ಮೆನಹಳ್ಳಿ ಗ್ರಾಮದಲ್ಲಿ ಗುರುವಾರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳಗಟ್ಟ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಡೆಂಘೀ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಡೆಂಘೀ ರೋಗ ಸಾಮಾನ್ಯವಾಗಿ ಸೋಂಕು ತಗುಲಿದ ನಂತರ ಮೂರು ರಿಂದ ಹದಿನಾಲ್ಕು ದಿನಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ದೇಹದಲ್ಲಿ ಹೆಚ್ಚಿನ ಜ್ವರ, ತಲೆನೋವು, ವಾಂತಿ, ಸ್ನಾಯು ಮತ್ತು ಸಂಧಿ ನೋವು ಹಾಗೂ ಚರ್ಮದ ಮೇಲೆ ದದ್ದುಗಳು ಕಾಣಿಸಿಕೊಂಡಾಗ ತಕ್ಷಣ ವೈದ್ಯರಲ್ಲಿ ಚಿಕಿತ್ಸೆ ಪಡೆಯುವುದು ಒಳ್ಳೆಯದು ಎಂದರು .
ಬಚ್ಚಬೋರಯ್ಯನಹಟ್ಟಿ ಉಪ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಮಂಜುಶ್ರೀ ಮಾತನಾಡಿ, ಡೆಂಗ್ಯೂ ಹರಡಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಮನೆಗಳಲ್ಲಿ ಎಲ್ಲಾ ನೀರಿನ ತೊಟ್ಟಿ, ಡ್ರಮ್ಮು, ಬ್ಯಾರೆಲ್, ಏರ್ ಕೂಲರ್ ಇತ್ಯಾದಿಗಳನ್ನು ವಾರಕೊಮ್ಮೆ ಖಾಲಿ ಮಾಡಿ, ಒಣಗಿಸಿ ಮತ್ತೆ ಭರ್ತಿ ಮಾಡಿಕೊಳ್ಳಬೇಕು. ನೀರು ಖಾಲಿ ಮಾಡಲು ಸಾಧ್ಯವಿಲ್ಲದ ತೊಟ್ಟಿ ಮುಂತಾದವುಗಳಲ್ಲಿ ಸೊಳ್ಳೆಗಳು ಒಳಗೆ ನುಸುಳದಂತೆ ಸರಿಯಾದ ಮುಚ್ಚಳದಿಂದ ಮುಚ್ಚಬೇಕು. ಬಯಲಿನಲ್ಲಿರುವ ತ್ಯಾಜ್ಯವಸ್ತುಗಳಾದ ಟೈರು, ಎಳೆನೀರಿನ ಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ಮಳೆನೀರು ಸಂಗ್ರಹವಾಗದಂತೆ ಎಚ್ಚರವಹಿಸುವುದು ಅಥವಾ ಸೂಕ್ತ ವಿಲೇವಾರಿ ಮಾಡುವುದು ಸೂಕ್ತವೆಂದರು.ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಕಗಳನ್ನು ಹಾಗೂ ಸೊಳ್ಳೆ ಪರದೆಯನ್ನು ಬಳಸಿ, ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸುವುದು. ಕರ್ಪೂರ ಮಿಶ್ರಿತ ಬೇವಿನ ಎಣ್ಣೆಯ ದೀಪ ಹಚ್ಚುವುದರಿಂದ ಸೊಳ್ಳೆಗಳ ಸಾಂದ್ರತೆ ನಿಯಂತ್ರಿಸಬಹುದು. ಮುಸ್ಸಂಜೆಯ ವೇಳೆಯಲ್ಲಿ ಪ್ರತಿನಿತ್ಯ ಮನೆಯ ಒಳಗೆ ಮತ್ತು ಹೊರಗೆ ಬೇವಿನಸೊಪ್ಪಿನ ಹೊಗೆ ಹಾಕುವುದರಿಂದ ಸೊಳ್ಳೆಗಳ ಸಾಂದ್ರತೆ ನಿಯಂತ್ರಿಸಬಹುದು. ಮಕ್ಕಳಿಗೆ ಕೈ-ಕಾಲುಗಳಿಗೆ ಕೊಬ್ಬರಿ ಎಣ್ಣೆ ಹಚ್ಚುವುದರಿಂದ ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸಬಹುದಾಗಿದೆ ಎಂದರು.
ಆರೋಗ್ಯ ಅಧಿಕಾರಿ ಶುಭಶ್ರೀ, ಯೋಗ ತರಬೇತಿದಾರ ರವಿಕೆ ಅಂಬೇಕರ್, ಆಶಾ ಕಾರ್ಯಕರ್ತೆ ಉಮಾಕ್ಷಿ, ಅಂಗನವಾಡಿ ಕಾರ್ಯಕರ್ತೆ ಶರಣಮ್ಮ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಸಾರ್ವಜನಿಕರಿಗೆ ಮುಂಜಾಗ್ರತ ಕ್ರಮಗಳನ್ನು ತಿಳಿಸುವ ಕರಪತ್ರಗಳನ್ನು ಹಂಚಲಾಯಿತು.ರಾಂಪುರದಲ್ಲಿ ಡೆಂಗ್ಯೂ ಜಾಗೃತಿ ಜಾಥಾಮೊಳಕಾಲ್ಮುರು: ತಾಲೂಕಿನ ರಾಂಪುರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಡೆಂಘೀ ದಿನಾಚರಣೆ ಕಾರ್ಯಕ್ರಮಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ.ಮಧುಕುಮಾರ್ ಚಾಲನೆ ನೀಡಿದರು.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಜಿಲ್ಲಾ ಪಂಚಾಯತಿ. ತಾಲೂಕು ಪಂಚಾಯತಿ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಹಯೋಗದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯ ಕರ್ತರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಡೆಂಗ್ಯೂ ಮಲೇರಿಯಾ ಕುರಿತು ಜಾಗೃತಿ ಮೂಡಿಸಿದರು.ಮನೆಯ ಸುತ್ತಲಿನ ಪ್ರದೇಶದಲ್ಲಿ ಪರಿಸರ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಡೆಂಘೀ ಕುರಿತು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಮನೆಗಳಲ್ಲಿ ನೀರು ಸಂಗ್ರಹ ತೊಟ್ಟಿಗಳನ್ನು ಆಗಾಗ್ಗೆ ಸ್ವಚ್ಛಗೊಳಿಸಬೇಕು. ನೀರು ನಿಲ್ಲದಂತೆ ಕ್ರಮವಹಿಸಬೇಕು. ಸೊಳ್ಳೆಗಳು ಉತ್ಪತ್ತಿಯಾಗುವುದನ್ನು ತಡೆಗಟ್ಟಬೇಕೆಂದು ಸಾರ್ವಜನಿಕರಿಗೆ ಅರಿವನ್ನು ಮೂಡಿಸಿದರು.ಈ ವೇಳೆ ಡಾ.ಮಧುಕುಮಾರ್ ಮಾತನಾಡಿ, ಡೆಂಘೀ ಮಲೇರಿಯಾ ಕಾಯಿಲೆ ಮಾರಣಾಂತಿಕವಾಗಿದೆ. ಹಗಲಲ್ಲಿ ಕಚ್ಚುವ ಈಡಿಸ್ ಸೊಳ್ಳೆಯಿಂದ ಡೆಂಗ್ಯೂ ಬರಲಿದೆ. ಈ ಕಾಯಿಲೆ ಒಬ್ಬರಿಂದ ಮತ್ತೊಬ್ಬರಿಗೆ ಹರಡಲಿದೆ. ಸಾರ್ವಜನಿಕರು ಜಾಗೃತರಾಗಬೇಕು.ಡೆಂಗ್ಯೂ ಮಲೇರಿಯಾದಂತ ಕಾಯಿಲೆಗಳ ನಿಯಂತ್ರಣಕ್ಕೆ ಮನೆಯ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ತ್ಯಾಜ್ಯ ವಸ್ತುಗಳ ವಿಲೇವಾರಿ ಮಾಡಬೇಕು. ಮಲಗುವ ಸಮಯದಲ್ಲಿ ಸೊಳ್ಳೆ ಪರದೆಗಳನ್ನು ಬಳಸಿಕೊಂಡು ಡೆಂಘೀ ಮಲೇರಿಯಾ ಚಿಕನ್ ಗುನ್ಯಾ ಕಾಯಿಲೆಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದರು.