ಗೆದ್ದ ಹುರುಪಿನಲ್ಲಿ ಬಾಯಿಗೆ ಬಂದಂತೆ ಮಾತನಾಡದಿರಿ: ಡಾ.ಎಂ.ಸಿ.ಸುಧಾಕರ್

| Published : Jul 05 2024, 12:54 AM IST / Updated: Jul 05 2024, 01:20 PM IST

ಗೆದ್ದ ಹುರುಪಿನಲ್ಲಿ ಬಾಯಿಗೆ ಬಂದಂತೆ ಮಾತನಾಡದಿರಿ: ಡಾ.ಎಂ.ಸಿ.ಸುಧಾಕರ್
Share this Article
  • FB
  • TW
  • Linkdin
  • Email

ಸಾರಾಂಶ

ಸಂಸದ ಕೆ.ಸುಧಾಕರ್‌ಗೆ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿರುಗೇಟು ನೀಡಿದ್ದಾರೆ.

 ಚಿಂತಾಮಣಿ :  ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾಗ ಚಿಕ್ಕಬಳ್ಳಾಪುರಕ್ಕೆ ಎಂ.ಆರ್.ಐ ಸ್ಕ್ಯಾನಿಂಗ್ ತರಲು ಯೋಗ್ಯತೆಯಿಲ್ಲದ ಸಚಿವ, ಕಾನೂನಿನ ಅರಿವೇ ಇಲ್ಲದ ನೀವು, ಅದೃಷ್ಟವಶಾತ್ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೀರಿ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚಿಸಿದರೆ ಉತ್ತಮ. ಅದುಬಿಟ್ಟು ಗೆದ್ದ ಹುರುಪಿನಲ್ಲಿ ಬಾಯಿಗೆ ಬಂದಂತೆ ಮಾತನಾಡಿದರೆ ನಿಮಗೆ ಸಂಬಂಧಿಸಿದ ವಿಚಾರಗಳನ್ನು ಬಹಿರಂಗ ಪಡಿಸಬೇಕಾಗುತ್ತದೆ ಎಂದು ಸಂಸದ ಕೆ.ಸುಧಾಕರ್‌ಗೆ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿರುಗೇಟು ನೀಡಿದ್ದಾರೆ.

ನಗರದ ಮಹಿಳಾ ಕಾಲೇಜಿನ ವಾರ್ಷಿಕೋತ್ಸವದ ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಡಾ.ಎಂ.ಸಿ.ಸುಧಾಕರ್, ಲೋಕಸಭಾ ಚುನಾವಣೆ ಗೆದ್ದ ನಂತರ ಅಜ್ಞಾತವಾಸದಿಂದ ಹೊರಗೆ ಬಂದಿದ್ದೇನೆಂದು ಹೇಳುತ್ತಿರುವ ಸಂಸದರು, ಮಾನಸಿಕವಾಗಿ ಅಸ್ವಸ್ಥರಾಗಿರಬಹುದು. ತಪಾಸಣೆ ಮಾಡಿಸಿಕೊಂಡರೆ ಉತ್ತಮ ಎಂದು ಲೇವಡಿ ಮಾಡಿದ್ದಾರೆ.

ನನ್ನ ರಾಜೀನಾಮೆ ಬಗ್ಗೆ ಮಾತನಾಡುವ ನೀವೂ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಮೆಡಿಕಲ್ ಕಾಲೇಜಿಗಾಗಿ ೪೨೫ ಕೋಟಿ ರು. ಮಂಜೂರಾಗಿದ್ದನ್ನು ತಿಳಿದುಕೊಳ್ಳದೇ, ೨೫೦ ಪ್ರವೇಶಾತಿಗೆ ೮೧೦ ಕೋಟಿಗೆ ಏರಿಸಿದ್ದೀರಲ್ಲ, ನಿಮ್ಮ ಸರ್ಕಾರ ಇದ್ದಾಗ ಹೆಚ್ಚುವರಿ ಕಾಮಗಾರಿಗೆ ಅನುಮೋದನೆ ಪಡೆದುಕೊಳ್ಳಲಿಲ್ಲವೇಕೆ? ಆಗ ನೀವು ರಾಜೀನಾಮೆ ಕೊಡಲಿಲ್ಲವೇಕೆ? ಎಂದು ಗುಡುಗಿದರು.

ಪ್ರಭಾವಿ ಮಂತ್ರಿಯಾಗಿದ್ದವರು ನೀವು. ನಗರಕ್ಕೆ ಹತ್ತಿರದಲ್ಲಿ ೧೦೦-೧೫೦ ಎಕರೆ ಜಮೀನನ್ನು ಭೂ ಸ್ವಾಧೀನಪಡಿಸಿಕೊಂಡು ಬಡಾವಣೆ ಮಾಡಿ ನಗರ ವಾಸಿಗಳಿಗೆ ಹಕ್ಕು ಪತ್ರಗಳನ್ನೇಕೆ ಕೊಡಲಿಲ್ಲ? ನಿಮ್ಮ ಸ್ವಾರ್ಥಕ್ಕಾಗಿ ಚುನಾವಣೆಯಲ್ಲಿ ಮತದಾರರನ್ನು ವಂಚಿಸಲು ಕೊಟ್ಟಿರುವ ಹಕ್ಕು ಪತ್ರಗಳಿಗೂ ರಾಜೀವ್ ಗಾಂಧಿ ವಸತಿ ನಿಗಮದವರಿಗೂ ಸಂಬಂಧವೇ ಇಲ್ಲ ಎಂದು ನಿಗಮದವರೇ ಹೇಳುತ್ತಿದ್ದಾರೆ. ನಿಮ್ಮಂತೆ ಕೀಳು ಮಟ್ಟದ ರಾಜಕಾರಣ ಮಾಡುವವನು ನಾನಲ್ಲವೆಂದು ತಿರುಗೇಟು ನೀಡಿದರು.

ನೀವು 10 ವರ್ಷಗಳ ಕಾಲ ಶಾಸಕ, ಸಚಿವರಾಗಿದ್ದವರು. ಚಿಕ್ಕಬಳ್ಳಾಪುರದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಬೇಕೆಂಬ ಆಲೋಚನೆ ನಿಮಗೆ ಆಗ ಬರಲಿಲ್ಲವೇ? ಡೀಮ್ಡ್ ಫಾರೆಸ್ಟ್ ನಿಮ್ಮ ಗಮನಕ್ಕೆ ಬಂದಿಲ್ಲವೇ? ಸಭೆಯಲ್ಲಿ ಅಧಿಕಾರಿಗಳು ನನ್ನ ಮಾತು ಕೇಳಲಿಲ್ಲ ಎಂದು ಹೇಳುವ ನೀವು ಆಗಲೇ ರಾಜೀನಾಮೆ ಬಿಸಾಕಬೇಕಾಗಿತ್ತೆಂದು ಸವಾಲೆಸೆದರು.

ನಾನು ಸಚಿವನಾದ ಮೇಲೆ ಮಹಿಳಾ ಕಾಲೇಜು ಆರಂಭಿಸಿ, ಅದೇ ಕಾಲೇಜಿಗೆ ಮತ್ತೆ ನಾನೇ ೫ ಕೋಟಿ, ಬಾಲಕರ ಕಾಲೇಜಿಗೆ 4 ಕೋಟಿ ರು.ಅನುದಾನ ಕೊಟ್ಟಿದ್ದೇನೆ. ನೀವು ಜಿಲ್ಲಾ ಉಸ್ತುವಾರಿಯಾಗಿದ್ದಾಗ ಜಿಲ್ಲಾಡಳಿತದಿಂದ ವಸೂಲಿ ನಡೆಯುತ್ತಿತ್ತು. ಈಗ ಅದೆಲ್ಲಾ ನಿಂತುಹೋಗಿದೆ. ಅಧಿಕಾರಿಗಳನ್ನು ನೀವು ಯಾವ ರೀತಿ ಮಾತನಾಡಿಸುತ್ತಿದ್ದೀರಿ, ಈಗಿನ ಜಿಲ್ಲಾ ಸಚಿವರು ಯಾವ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳ ಬಳಿಯೇ ಪಡೆದುಕೊಳ್ಳಿ, ನಾನು ಯಾವ ವೇದಿಕೆಗೆ ಬೇಕಾದರೂ ಬಂದು ಮಾತನಾಡುವುದಕ್ಕೆ ಸಿದ್ಧನಿದ್ದೇನೆ. ಜನರು ನಿಮ್ಮನ್ನು ಸಂಸದರಾನ್ನಾಗಿ ಆಯ್ಕೆ ಮಾಡಿದ್ದಾರೆ, ನೀವು ಜವಾಬ್ದಾರಿಯಿಂದ ನಡೆದುಕೊಂಡರೆ ಒಳ್ಳೆಯದು. ಗೆದ್ದಿರುವ ಗುಂಗಿನಲ್ಲಿ ದಾಖಲೆ ರಹಿತವಾಗಿ ಏನೇನೋ ಮಾತನಾಡಿದರೆ, ನಿಮ್ಮ ಘನತೆ-ಗೌರವ ಕಡಿಮೆಯಾಗುತ್ತದೆ ಎಂದರು.

ವಿರೋದ ಪಕ್ಷದ ನಾಯಕ ಆರ್.ಅಶೋಕ್ ಬಗ್ಗೆ ನನಗೆ ಗೌರವವಿದೆ. ವಿರೋದ ಪಕ್ಷದ ಸ್ಥಾನ ಉಳಿಸಿಕೊಳ್ಳಲು ನಾಲಿಗೆಯ ಮೇಲೆ ಹಿಡಿತವಿಲ್ಲದೇ ಏನು ಮಾತನಾಡುತ್ತಿದ್ದೇನೆಂದು ಅವರಿಗೇ ಅರ್ಥವಾಗಬೇಕು. ವಿರೋಧ ಪಕ್ಷದ ನಾಯಕರಾಗಿ ಅಶೋಕ್ ನಾಲಾಯಕ್ ಆಗಿದ್ದಾರೆಂದು ಅವರ ಪಕ್ಷದವರೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದರು.