ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರನ್ನು ಅಲೆದಾಡಿಸಬೇಡಿ: ಶಾಸಕಿ ರೂಪಕಲಾ

| Published : Jul 04 2024, 01:06 AM IST

ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರನ್ನು ಅಲೆದಾಡಿಸಬೇಡಿ: ಶಾಸಕಿ ರೂಪಕಲಾ
Share this Article
  • FB
  • TW
  • Linkdin
  • Email

ಸಾರಾಂಶ

ಒಬ್ಬ ರೈತ ತನ್ನೆಲ್ಲಾ ಕಷ್ಟದ ದಿನಗಳನ್ನು ಬದಿಗೊತ್ತಿ ಬಿಸಿಲು, ಮಳೆ ಎನ್ನದೇ ಕೃಷಿ ಚಟುವಟಿಕೆಗಳನ್ನು ಮಾಡದೇ ಹೋದಲ್ಲಿ ನಾವು ಮೂರು ಹೊತ್ತು ಹೊಟ್ಟೆ ತುಂಬ ಅನ್ನವನ್ನು ತಿನ್ನಲು ಸಾಧ್ಯವಾಗುವುದಿಲ್ಲ, ಆದ್ದರಿಂದ ರೈತರು ತಮ್ಮ ಜಮೀನುಗಳಿಗೆ ಸಂಬಂಧಿಸಿ ಪಹಣಿ, ಸರ್ವೇ ಮತ್ತಿತರ ಕೆಲಸ- ಕಾರ್ಯಗಳಿಗೆಂದು ನಿಮ್ಮ ಬಳಿ ಬಂದಲ್ಲಿ ಅವರ ಕಷ್ಟಗಳಿಗೆ ಸ್ಪಂದಿಸಿ.

ಕನ್ನಡಪ್ರಭ ವಾರ್ತೆ ಕೆಜಿಎಫ್

ರೈತರು, ಬಡವರು, ಅಮಾಯಕರನ್ನು ಕಚೇರಿಗೆ ಅಲೆದಾಡಿಸಬೇಡಿ. ಎಷ್ಟೋ ಮಂದಿ ತಿಂಗಳಿಗೊಮ್ಮೆ ಬರುವ ಪಿಂಚಣಿಯನ್ನು ನಂಬಿಕೊಂಡು ಜೀವನ ನಡೆಸುತ್ತಿರುತ್ತಾರೆ. ಪಿಂಚಣಿ ಹಣದಿಂದಲೇ ತಮಗೆ ಬೇಕಾದ ಔಷಧಿಗಳನ್ನು ಖರೀದಿಸುತ್ತಿರುತ್ತಾರೆ. ಅಂತಹವರ ನೋವು ಅರ್ಥ ಮಾಡಿಕೊಂಡು ಮುತುವರ್ಜಿಯಿಂದ ವರ್ತಿಸಿ ಎಂದು ಶಾಸಕಿ ರೂಪಕಲಾ ಶಶಿಧರ್ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ತಾಲೂಕು ಆಡಳಿತ ಭವನದಲ್ಲಿ ಜಿಲ್ಲಾಡಳಿತದಿಂದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಏನೇ ಆಗಲಿ ಅಧಿಕಾರಿಗಳ ಕಾರ್ಯವೈಖರಿ ಚುರುಕಾದಾಗ ಮಾತ್ರ ನಾವು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲು ಸಾಧ್ಯ, ಕೆಲವೊಬ್ಬರು ಮಾಡುವ ಸಣ್ಣಪುಟ್ಟ ತಪ್ಪುಗಳಿಂದ ಇಡೀ ಇಲಾಖೆ ತಲೆ ತಗ್ಗಿಸುವಂತಾಗುತ್ತದೆ. ಹೀಗೆ ಆಗದ ಹಾಗೆ ಎಚ್ಚರಿಕೆಯಿಂದ ಜನಸ್ನೇಹಿಯಾಗಿ ಕೆಲಸ ನಿರ್ವಹಿಸುವಂತೆ ತಾಕೀತು ಮಾಡಿದರು.

ನೋಡಲು ಮಾತ್ರ ೧೦ ಕೋಟಿ ರು. ವೆಚ್ಚದಲ್ಲಿ ಸಕಲ ಸೌಲಭ್ಯಗಳನ್ನೊಳಗೊಂಡ ತಾಲೂಕು ಆಡಳಿತ ಭವನ ನಿರ್ಮಿಸಿ ರೈತರು, ಬಡವರು, ಕಾರ್ಮಿಕರು, ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದಾಗ ಅಧಿಕಾರಿಗಳು ಅವರ ಅಹವಾಲುಗಳನ್ನು, ಸಮಸ್ಯೆಗಳನ್ನು ಆಲಿಸುವುದನ್ನು ಮತ್ತು ಪರಿಹಾರ ಹುಡುಕಲು ಪ್ರಯತ್ನಿಸುವುದನ್ನು ಮಾಡದೇ ಇದ್ದಲ್ಲಿ ಏನು ಪ್ರಯೋಜನವಾಗಲು ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು.

ಒಬ್ಬ ರೈತ ತನ್ನೆಲ್ಲಾ ಕಷ್ಟದ ದಿನಗಳನ್ನು ಬದಿಗೊತ್ತಿ ಬಿಸಿಲು, ಮಳೆ ಎನ್ನದೇ ಕೃಷಿ ಚಟುವಟಿಕೆಗಳನ್ನು ಮಾಡದೇ ಹೋದಲ್ಲಿ ನಾವು ಮೂರು ಹೊತ್ತು ಹೊಟ್ಟೆ ತುಂಬ ಅನ್ನವನ್ನು ತಿನ್ನಲು ಸಾಧ್ಯವಾಗುವುದಿಲ್ಲ, ಆದ್ದರಿಂದ ರೈತರು ತಮ್ಮ ಜಮೀನುಗಳಿಗೆ ಸಂಬಂಧಿಸಿ ಪಹಣಿ, ಸರ್ವೇ ಮತ್ತಿತರ ಕೆಲಸ- ಕಾರ್ಯಗಳಿಗೆಂದು ನಿಮ್ಮ ಬಳಿ ಬಂದಲ್ಲಿ ಅವರ ಕಷ್ಟಗಳಿಗೆ ಸ್ಪಂದಿಸಿ, ಆ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡಬೇಕೆಂದರು.

ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಬಿಡಲು ಹೋಗುವಾಗ, ರೋಗಿಗಳು ತುರ್ತು ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗುತ್ತಿರುವಾಗ, ರೈತರು ತೋಟಗಳಿಗೆ ಸಿಂಪಡಿಸಲು ಔಷಧಿ ತೆಗೆದುಕೊಳ್ಳಲು ಹೋಗುವಾಗ ಅಚಾತುರ್ಯವಾಗಿ ಡ್ರೈವಿಂಗ್ ಲೈಸೆನ್ಸ್, ಹೆಲ್ಮೆಟ್ ಮತ್ತು ವಾಹನದ ಇತರ ದಾಖಲೆಗಳನ್ನು ತಮ್ಮೊಡನೆ ಕೊಂಡೊಯ್ಯಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಪೊಲೀಸರು ವಾಹನ ತಪಾಸಣೆಗೆಂದು ನಿಲ್ಲಿಸಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ದಂಡ ವಿಧಿಸದೇ ಅವರ ಪರಿಸ್ಥಿತಿಗಳನ್ನು ತಿಳಿದು ಮುಂದುವರಿಯಬೇಕೆಂದು ಸಲಹೆ ನೀಡಿದರು.

ಮುಂದಿನ ದಿನಗಳಲ್ಲಿ ಹೋಬಳಿ ಕೇಂದ್ರಸ್ಥಾನಗಳಾದ ಕ್ಯಾಸಂಬಳ್ಳಿ, ಬೇತಮಂಗಲದಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ನಮ್ಮ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಯಾವುದೇ ವೈಫಲ್ಯಗಳಾಗದಂತೆ ಅಭಿವೃದ್ಧಿ ಕಾರ್ಯಗಳಾಗಬೇಕು ಮತ್ತು ಸರ್ಕಾರದ ಯೋಜನೆಗಳು ಜನರ ಮನೆಬಾಗಿಲಿಗೆ ತಲುಪುವಂತಾಗಬೇಕು. ಹಾಗಾದಲ್ಲಿ ಮಾತ್ರ ಜನಸ್ಪಂದನಾ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದರು.

ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಮಾತನಾಡಿ, ಜಿಲ್ಲಾಡಳಿತದಿಂದ ತಾಲೂಕು ಮಟ್ಟದಲ್ಲಿ ನಡೆಸುತ್ತಿರುವ ಜನಸ್ಪಂದನ ಕಾರ್ಯಕ್ರಮದ ಮುಖ್ಯ ಉದ್ದೇಶವು ಸರ್ಕಾರದ ಯೋಜನೆಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವುದು ಮತ್ತು ತ್ವರಿತ ಗತಿಯಲ್ಲಿ ಅವರ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿಕೊಡುವುದಾಗಿದೆ. ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೆಲ್ಲರೂ ಒಂದೇ ಸೂರಿನಡಿ ಲಭ್ಯವಿರುವುದರಿಂದ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಬರಹದ ಮೂಲಕ ಸಲ್ಲಿಸಿಕೊಂಡಲ್ಲಿ ಸ್ಥಳದಲ್ಲೇ ಸಮಸ್ಯೆಗಳ ಇತ್ಯರ್ಥಪಡಿಸುವಿಕೆಗೆ ಪ್ರಯತ್ನಿಸಲಾಗುವುದು, ಇಲ್ಲವೇ ಕೆಲವು ದಿನಗಳ ಕಾಲಾವಧಿಯಲ್ಲಿ ಆ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಸಾರ್ವಜನಿಕರು ಕಾರ್ಯಕ್ರಮದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕಂದಾಯ ಇಲಾಖೆ ಮತ್ತು ಸರ್ವೇ ಇಲಾಖೆ ೮೨, ನಗರಸಭೆ ೧೪, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ೭, ಇತರೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ೧೪ ಒಟ್ಟಾರೆ ೧೧೭ ಅಹವಾಲುಗಳು ಸಲ್ಲಿಕೆಯಾದವು.

ಕೆಜಿಎಫ್ ಎಸ್‌ಪಿ ಶಾಂತರಾಜು, ತಹಸೀಲ್ದಾರ್ ನಾಗವೇಣಿ, ಇಒ ಮಂಜುನಾಥ ಹರ್ತಿ, ಡಿವೈಎಸ್‌ಪಿ ಪಾಂಡುರಂಗ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಧರ್ಮೇಂದ್ರ ಪ್ರಸಾದ್, ಬಿಇಒ ಮುನಿವೆಂಕಟರಾಮಾಚಾರಿ, ಆಹಾರ ನಾಗರಿಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್, ಸಿಡಿಪಿಒ ರಾಜೇಶ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನರಸಿಂಹಮೂರ್ತಿ ಇದ್ದರು.