ತಂದೆ, ತಾಯಿ, ಗುರು-ಹಿರಿಯರನ್ನು ಗೌರವಿಸಿ, ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು.

ವಿಶ್ವದರ್ಶನದಲ್ಲಿ ತಾರುಣ್ಯಸಿಂಧು ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಯಲ್ಲಾಪುರಕಬ್ಬಿಣದಂತಹ ಮಾಂಸಖಂಡಗಳು, ಉಕ್ಕಿನಂತಹ ನರಮಂಡಲ, ವಿದ್ಯುತ್ ಶಕ್ತಿಯಂತಹ ಇಚ್ಛಾಶಕ್ತಿ ನಮ್ಮ ಯುವಜನಾಂಗಕ್ಕೆ ಇದ್ದಾಗ ಜೀವನದಲ್ಲಿ ಎಂತಹ ಸವಾಲು ಬಂದರೂ ಹಿಮ್ಮೆಟ್ಟಿ ಮುನ್ನಡೆಯಲು ಸಾಧ್ಯ. ನಾವು ಸ್ವಾಭಿಮಾನಿಗಳಾಗಬೇಕು. ತಂದೆ, ತಾಯಿ, ಗುರು-ಹಿರಿಯರನ್ನು ಗೌರವಿಸಿ, ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು. ಏನೋ ಬಣ್ಣದ ಮಾತುಗಳಿಗೆ ಮಾರು ಹೋಗಿ ಜೀವನ ವ್ಯರ್ಥ ಮಾಡಿಕೊಳ್ಳಬಾರದು ಎಂದು ವಾಗ್ಮಿ, ಬರಹಗಾರ್ತಿ ಡಾ. ಆರತಿ ಬಿ.ವಿ. ಹೇಳಿದರು. ಶನಿವಾರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಮೂಹದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ರಾಷ್ಟ್ರ ಸೇವಿಕಾ ಸಮಿತಿ ಶಿರಸಿ ಹಮ್ಮಿಕೊಂಡ ತಾರುಣ್ಯಸಿಂಧು ಶಕ್ತಿ-ಯುಕ್ತಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.ನಮ್ಮ ವೇಷಭೂಷಣ, ಶರೀರದ ಸೌಂದರ್ಯಕ್ಕೆ ಆದ್ಯತೆ ನೀಡದೇ ನಮ್ಮ ಅಂತಃಶಕ್ತಿ ಜಾಗೃತಗೊಳಿಸುತ್ತ ಸಾತ್ವಿಕ ನಡೆ-ನುಡಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆಯುವ ಜೀವನ ಪದ್ಧತಿ ನಮ್ಮದಾಗಬೇಕು. ಸ್ತ್ರೀ ಎಂದರೆ ಮನೆಯ ಅಡಿಪಾಯ. ದೇಶ ಉಳಿಯಬೇಕು, ಸಂಸ್ಕೃತಿ ಉಳಿಯಬೇಕು ಎಂದಾದರೆ ನಾವೆಲ್ಲ ಸ್ತ್ರೀಯರು ನಮ್ಮತನ ಉಳಿಸಿಕೊಂಡು, ದೇಶಾಭಿಮಾನ ಬೆಳೆಸಿಕೊಂಡು, ನಾನು ದೇಶಕ್ಕಾಗಿ ಇದ್ದೇನೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.ಶ್ರೀಹರಿಕೋಟಕ್ಕೊಮ್ಮೆ ಹೋಗಿದ್ದೆ. ಶೇ.೫೦ರಷ್ಟು ಸ್ತ್ರೀವಿಜ್ಞಾನಿಗಳು ಅಲ್ಲಿದ್ದಾರೆ. ಅವರ ಸೀರೆ, ಕುಂಕುಮ, ಭಾರತೀಯ ಉಡುಗೆ ನೋಡಿ ಆಶ್ಚರ್ಯವೆನಿಸಿತು. ಇಂದಿನ ಯುವತಿಯರು ಬೆಂಗಳೂರು ಎಂ.ಜಿ. ರಸ್ತೆಯಲ್ಲಿ ಅರ್ಧ ಬಟ್ಟೆ ಹಾಕಿಕೊಂಡು ಓಡಾಡುವ ಸಂಸ್ಕೃತಿಗೆ ತಲುಪಿರುವುದನ್ನು ನೋಡಿದರೆ ದೇಶದ ಸಂಸ್ಕೃತಿ ಉಳಿದೀತೇ ? ಎಂಬ ದುಃಖವಾಗುತ್ತದೆ. ನಮ್ಮ ಪ್ರಾಚೀನರು ಸಂಸ್ಕೃತ, ಮಾತೃಭಾಷೆ, ಸಂಸ್ಕೃತಿ, ಮೌಲ್ಯದ ಜೊತೆ ನಮ್ಮ ಮಜ್ಜಿಗೆ ತಂಬುಳಿ ಇವೇ ನಮ್ಮ ಬದುಕಿನ ಜೀವಾಳವಾಗಿತ್ತು. ಆದರೆ ಇಂದು ನಾವು ಬಾಲಿವುಡ್ಡಿನ ಕಸದ ರಾಶಿಯಲ್ಲಿರುವ ಬ್ರೆಡ್ಡು, ಫಿಜ್ಜಾ, ಮ್ಯಾಗಿ ಇಂತಹ ವಿಷಕಾರಿ ಆಹಾರವೇ ಆಕರ್ಷಣೆಗೊಳಗಾಗುತ್ತಿವೆ. ನಮಗೆ ಝಾನ್ಸಿರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಚೆನ್ನಭೈರಾದೇವಿ ಇಂತಹವರು ಆದರ್ಶರಾಗಬೇಕೇ ವಿನಃ ಮೌಲ್ಯವನ್ನು ನಾಶಮಾಡುವ ವ್ಯಕ್ತಿಗಳು ನಮಗಾದರ್ಶವಾಗಬಾರದು ಎಂದು ಹೇಳಿದರು. ರಾಷ್ಟ್ರಸೇವಿಕಾ ಸಮಿತಿಯ ಜಿಲ್ಲಾ ಮುಖ್ಯಸ್ಥೆ ಶ್ರೀದೇವಿ ದೇಶಪಾಂಡೆ ಮಾತನಾಡಿ, ನಮ್ಮ ಸಂಸ್ಥೆ ಪ್ರಾರಂಭವಾಗಿ ೯೦ ವರ್ಷ ಕಳೆದಿದೆ. ಇಂದು ನಮ್ಮಲ್ಲಿ ಹುಟ್ಟುಹಬ್ಬಕ್ಕೆ ಕೇಕ್ ಕಟ್ ಮಾಡುವ ಸಂಪ್ರದಾಯ ಬೆಳೆದಿದೆ. ಅದು ವಿಕೃತಿಯೋ, ಸುಕೃತಿಯೋ ಎಂದು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ. ನೀವೆಲ್ಲ ದೇಶದ ಆಸ್ತಿಯಾಗಬೇಕು ಎಂದರು. ಡಾ. ಜಲಜಾ ಕಣ್ಣಿ ಕಾರ್ಯಕ್ರಮ ಉದ್ಘಾಟಿಸಿದರು. ಚರ್ಚಾ ಕಾರ್ಯಕ್ರಮವನ್ನು ವಿಶ್ವದರ್ಶನ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ, ತಾಳಮದ್ದಲೆ ಅರ್ಥಧಾರಿ ಚಂದ್ರಕಲಾ ಇಡಗುಂದಿ, ಅ.ಭಾ.ಸಾ.ಪ.ದ ಮಹಿಳಾ ಪ್ರಮುಖರಾದ ಸುಜಾತಾ ಹೆಗಡೆ ಮತ್ತು ವಿವಿಧ ಪ್ರಬಂಧಕರು ನಡೆಸಿಕೊಟ್ಟರು.ನಂದಿನಿ ರಾಯಭಾಗ ಸ್ವಾಗತಿಸಿದರು. ತಾಲೂಕಾ ಪ್ರಮುಖರು, ಸಂಘಟಕರಾದ ಅಪರ್ಣಾ ಘಟ್ಟಿ ವಂದಿಸಿದರು.