ಸಾರಾಂಶ
ಹಿಂದೂ ಮಹಾ ಸಮಿತಿಯ ರಜತ ಮಹೋತ್ಸವದ ಅಂಗವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು, ಡಾ.ಜಾಧವ್ ದೀಪ ಬೆಳಗಿಸಿ ಶಿಬಿರಕ್ಕೆ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ,ಶಿರಾಳಕೊಪ್ಪ
ರಕ್ತದಾನ ಮಾಡಿದವರ ಆರೋಗ್ಯ ಉತ್ತಮವಾಗುವುದರ ಜೊತೆಗೆ ಬೇರೆಯವರ ಜೀವವನ್ನೂ ಉಳಿಸಿದ ಪುಣ್ಯದ ಕಾರ್ಯ ಮಾಡಿದಂತಾಗುತ್ತದೆ ಎಂದು ಬಿಳಿಕಿ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಜಾಧವ ತಿಳಿಸಿದರು.ಹಿಂದೂ ಮಹಾ ಗಣಪತಿ ಸೇವಾ ಸಮಿತಿ ಶಿರಾಳಕೊಪ್ಪ ಹಾಗೂ ಆಶಾಜ್ಯೋತಿ ಸ್ವಯಂ ಪ್ರೇರಿತ ರಕ್ತಕೇಂದ್ರ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಮಹಾಗಣಪತಿ ಸೇವಾ ಸಮಿತಿಯ ರಜತ ಮಹೋತ್ಸವದ ಅಂಗವಾಗಿ ನಡೆದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪುರಸಭೆ ಮಾಜಿ ಸದಸ್ಯ ಶಿವಾನಂದಸ್ವಾಮಿ ಮಾತನಾಡಿ, ಇಂದು ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ನಾವು ಏನ್ನನ್ನಾ ದರೂ ಕಂಡು ಹಿಡಿಯಬಹುದು. ಆದರೆ ರಕ್ತವನ್ನು ನಾವು ಉತ್ಪಾದಿಸಲು ಆಗುತ್ತಿಲ್ಲ. ದೇವರ ದಯೆಯಿಂದ ನಾವು ಎಷ್ಟೇ ರಕ್ತಕೊಟ್ಟರೂ ಪುನಃ ದೇಹದಲ್ಲಿ ರಕ್ತ ಉತ್ಪತ್ತಿ ಆಗುತ್ತದೆ.ಅಯ್ಯಪ್ಪಸ್ವಾಮಿ ದೇವಸ್ಥಾನದ ಗುರುಸ್ವಾಮಿ ಮಲ್ಲಿಕಾರ್ಜುನ ಮಾತನಾಡಿ, ಅನ್ನದಾನ ವ್ಯಕ್ತಿಯ ಹೊಟ್ಟೆ ತುಂಬಿಸಲು ಹಾಗೂ ಶ್ರೇಷ್ಠದಾನ ರಕ್ತದಾನ ಇನ್ನೊಬ್ಬರ ಜೀವವನ್ನು ಉಳಿಸಲು ಸಹಾಯ ಮಾಡುತ್ತದೆ ಎಂದರು.
ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಚೆನ್ನವೀರ ಶೆಟ್ಟಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಶ್ರೀಕಾಂತ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಂಚಿ ಶಿವಣ್ಣ, ಗುರುಸ್ವಾಮಿ, ಮಲ್ಲಿಕಾರ್ಜುನ್, ವೀರಶೈವ ಸಮಾಜದ ಅಧ್ಯಕ್ಷ ಪ್ರಭುಸ್ವಾಮಿ, ಬಿಳವಾಣಿ ಗ್ರಾಪಂ ಅಧ್ಯಕ್ಷ ಬಸಣ್ಣ, ಪಪಂ ಮಾಜಿ ಅಧ್ಯಕ್ಷ ಮನೋಹರ್, ಮಾಜಿ ಸದಸ್ಯ ಶಿವಪುತ್ರಪ್ಪ, ಡಾ.ವರುಣ್, ಗಣಪತಿ ಸೇವಾ ಸಮಿತಿ ಕಾರ್ಯ ದರ್ಶಿ ಮಾಲತೇಶ್ ಸೇರಿದಂತೆ ಹಲವಾರು ಪ್ರಮುಖರಿದ್ದರು.