ಸಾರಾಂಶ
ಭಟ್ಕಳ: ದಾನಗಳಲ್ಲಿ ಭೂದಾನ ಶ್ರೇಷ್ಠ ದಾನವಾಗಿದೆ. ದೇವಸ್ಥಾನಕ್ಕೆ ಭೂದಾನ ಮಾಡಿದರೆ ಅದು ಸೂರ್ಯ ಚಂದ್ರ ಇರುವ ವರೆಗೂ ಶಾಶ್ವತವಾಗಿರುತ್ತದೆ. ಹೀಗಾಗಿ ದೇವಸ್ಥಾನಕ್ಕೆ ಭೂದಾನ ನೀಡುವುದು ಅತಿ ಶ್ರೇಷ್ಠ ಎಂದು ಆನೆಗುಂದಿಯ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ತಿಳಿಸಿದರು.
ಪಟ್ಟಣ ಚೌಥನಿಯ ಕಾಳಿಕಾಂಬಾ ದೇವರ ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ದಿವ್ಯ ಉಪಸ್ಥಿತಿ ಹೊಂದಿ ಆಶೀರ್ವಚನ ನೀಡಿದರು.ದೇವಸ್ಥಾನಕ್ಕೆ ಭೂದಾನ ನೀಡಿದರೆ ವಿದ್ಯಾದಾನ, ಅನ್ನದಾನಕ್ಕಿಂತಲೂ ಅದು ಶ್ರೇಷ್ಠವಾದದ್ದು. ಚೌಥನಿಯ ಕಾಳಿಕಾಂಬಾ ದೇವಸ್ಥಾನ ಸಮಾಜದವರ ಸಹಕಾರದಿಂದ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದ್ದು, ದೇವಸ್ಥಾನಕ್ಕೆ ಎರಡು ಕಡೆ ಜಾಗ ಖರೀದಿ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ. ಕಡಿಮೆ ಜನಸಂಖ್ಯೆ ಇರುವ ಸ್ಥಳಗಳಲ್ಲಿ ಸಮಾಜದವರು ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ.
ಪ್ರತಿಯೊಬ್ಬರೂ ದೇವರ ಬಗ್ಗೆ ಶ್ರದ್ಧೆ, ಭಕ್ತಿ, ಭಾವ ಹೊಂದಿರಬೇಕು. ದೇವರ ಸೇವೆಯನ್ನು ಪ್ರಾಮಾಣಿಕ ಮತ್ತು ನಿಸ್ವಾರ್ಥವಾಗಿ ಮಾಡಿದರೆ ಖಂಡಿತ ಪುಣ್ಯದ ಫಲ ಸಿಗುತ್ತದೆ. ದೇವಸ್ಥಾನದ ಮತ್ತಷ್ಟು ಅಭಿವೃದ್ಧಿಗೆ ಸಮಾಜದವರು ಕೈಜೋಡಿಸಬೇಕು. ವಿಶ್ವಕರ್ಮ ಸಮಾಜದವರು ತಮ್ಮ ವೃತ್ತಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮುಂದೆ ಬರಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಆಡಳಿತ ಮೊಕ್ತೇಸರ ಗಜಾನನ ಆಚಾರ್ಯ ವೆಂಕಟಾಪುರ ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸಿ ಸಮಾಜದವರಿಗೆ ಕೃತಜ್ಞತೆ ಸಲ್ಲಿಸಿದರು.
ಬೀನಾ ವೈದ್ಯ, ಅಳ್ವೆಕೋಡಿ ಮಾರಿ ಜಾತ್ರಾ ಮಹೋತ್ಸವದ ಅಧ್ಯಕ್ಷ ರಾಮಾ ಎಂ. ಮೊಗೇರ, ಕಾಸ್ಮುಡಿ ದೇವಸ್ಥಾನದ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಪತ್ರಕರ್ತ ರಾಧಾಕೃಷ್ಣ ಭಟ್ಟ, ಬಾರ್ಕೂರು ಕಾಳಿಕಾಂಬಾ ದೇವಸ್ಥಾನದ ಅಧ್ಯಕ್ಷ ಶ್ರೀಧರ ಆಚಾರ್ಯ, ಪ್ರಮುಖರಾದ ರಾಜಗೋಪಾಲಾಚಾರ್ಯ, ಚಂದ್ರಯ್ಯ ಆಚಾರ್ಯ, ಜಗದೀಶ ಆಚಾರ್ಯ, ಮೃತ್ಯುಂಜಯ ಆಚಾರ್ಯ, ಭಾಸ್ಕರ ಆಚಾರ್ಯ, ಮಾರುತಿ ಆಚಾರ್ಯ, ಉಮೇಶ ಆಚಾರ್ಯ, ಚಿತ್ರನಟಿ ವೃಂದಾ ಆಚಾರ್ಯ, ಗೋಪಾಲ ಆಚಾರ್ಯ ಮಂತಾದವರು ಮಾತನಾಡಿದರು.ಮೂಡಬಿದರೆಯ ಅಂಕಸಾಲೆಯ ಎನ್. ಕೇಶವ ಪುರೋಹಿತ ಅವರು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವಾಸುದೇವ ಶಾಸ್ತ್ರಿ, ವೆಂಕಟೇಶ ಆಚಾರ್ಯ, ರಾಮಕೃಷ್ಣ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ಸುರೇಶ ಆಚಾರ್ಯ ಮತ್ತು ಜಯಶ್ರೀ ಆಚಾರ್ಯ ನಿರೂಪಿಸಿದರು.
ರಾತ್ರಿ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕಲಾಸಂಗಮ ಕಲಾವಿದರಿಂದ ನಡೆದ ಶಿವದೂತ ಗುಳಿಗ ವಿಭಿನ್ನ ಶೈಲಿಯ ನಾಟಕ ಪ್ರೇಕ್ಷಕರ ಮನರಂಜಿಸಿತು.