ಸಂಡೂರು: ತಾಲೂಕಿನ ದೊಡ್ಡ ಅಂತಾಪುರ ಗ್ರಾಮದ ಚಂದ್ರಶೇಖರ ಅವರ ಹೊಲದ ಬದುವಿನ ಉತ್ತರಾಭಿಮುಖವಾಗಿ ಇರುವ ಹುಟ್ಟು ಬಂಡೆಯ ಮೇಲೆ ಕೆತ್ತಲಾಗಿರುವ ದಳವಾಯಿ-ಗೌಡರ ದಾನ ಶಾಸನವನ್ನು ವಿಜಯನಗರ ತಿರುಗಾಟ ಸಂಶೋಧನ ತಂಡವು ಪತ್ತೆ ಹಚ್ಚಿದೆ.

ಸಂಶೋಧನಾ ತಂಡದ ಪ್ರೊ.ಎಚ್. ತಿಪ್ಪೇಸ್ವಾಮಿ, ಡಾ.ಗೋವಿಂದ, ಡಾ.ಕೃಷ್ಣೇಗೌಡ, ಸಂಶೋಧಕರಾದ ಎಚ್.ರವಿ, ಅಶೋಕ ನಾಯಕ್ ದಿದ್ದಿಗಿ, ಇಸ್ಮಾಯಿಲ್ ಸಿದ್ದೀಕಿ ಹಾಗೂ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳಾದ ಮಾರುತಿ ಜಿ.ವಿ. ಹಾಗೂ ತಾಯಪ್ಪ ಅವರು ಸ್ಥಳೀಯರಾದ ತಾಯಪ್ಪ, ರಾಗಿ ಶಿವರಾಮಪ್ಪ, ಬಂಡ್ರಿ ಪಾಪಯ್ಯ, ಬಾಬಣ್ಣ ಅವರ ಸಹಕಾರದಿಂದ ಪತ್ತೆ ಹಚ್ಚಿದ್ದಾರೆ.

ದಾನ ಶಾಸನವು ವಿಜಯನಗರೋತ್ತರ ಕಾಲದ ಗ್ರಾಮೀಣ ಆಡಳಿತ, ಧಾರ್ಮಿಕ ವ್ಯವಸ್ಥೆ, ದಾನ ಸಂಸ್ಕೃತಿಯ ಕುರಿತು ಮಹತ್ವದ ಮಾಹಿತಿ ನೀಡುವ ಅಪರೂಪದ ಶಾಸನವಾಗಿದೆ. ಇದು ಕೇವಲ ಒಂದು ಶಾಸನದ ಪತ್ತೆಯಲ್ಲ. ಒಂದು ಗ್ರಾಮದ ಮರೆತುಹೋದ ಇತಿಹಾಸವನ್ನು ಮರುಜೀವಗೊಳಿಸಿದ ಮಹತ್ವದ ಸಂಶೋಧನೆಯಾಗಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟರು.

ಶಾಸನದ ಶಿಲ್ಪಕಲೆ ಹಾಗೂ ಭಕ್ತಿ ಕಲೆಯ ಸಂಗಮ:

ಈ ಶಾಸನವು ಸುಮಾರು ೪ ಅಡಿ ಎತ್ತರ ಹಾಗೂ ಮೂರು ಅಡಿ ಅಗಲವಾಗಿರುವ ಗ್ರಾನೈಟ್ ಬಂಡೆಯ ಮೇಲೆ ಕೆತ್ತಲಾಗಿದೆ. ಶಾಸನದ ಎಡ ಭಾಗದಲ್ಲಿ ಚಂದ್ರ, ಬಲಬದಿಗೆ ಸೂರ್ಯನ ಚಿಹ್ನೆಗಳನ್ನು ಕೆತ್ತಲಾಗಿದೆ. ಮಧ್ಯದಲ್ಲಿ ಶಿವಲಿಂಗದ ಎದುರು ಭಕ್ತಿಭಾವದಿಂದ ಕುಳಿತಿರುವ ನಂದಿಯ ಸುಂದರ ಶಿಲ್ಪವನ್ನು ಕೆತ್ತಲಾಗಿದೆ. ಅದರ ಕೆಳಭಾಗದಲ್ಲಿ ದೊಡ್ಡ ಗಾತ್ರದ ಶಿವಲಿಂಗವನ್ನು ಕೆತ್ತಿರುವುದು ಈ ಶಾಸನದ ಧಾರ್ಮಿಕ ಮಹತ್ವವನ್ನು ಎತ್ತಿ ಹಿಡಿಯುತ್ತದೆ. ಶಾಸನವನ್ನು ಬರೆಸಿದವರು ಶೈವ ಧರ್ಮದವರೆಂದು ತಿಳಿದು ಬರುತ್ತದೆ.


ಶಾಸನವನ್ನು ಕನ್ನಡ ಭಾಷೆಯ ಲಿಪಿಯಲ್ಲಿ ಬರೆಯಲ್ಪಟ್ಟಿದ್ದು, ಒಟ್ಟು ಎಂಟು ಸಾಲುಗಳನ್ನು ಒಳಗೊಂಡಿವೆ. ಶುಭಮಸ್ತು ಎಂಬ ಮಂಗಳ ಪದದಿಂದ ಆರಂಭವಾಗುವ ಈ ಶಾಸನದಲ್ಲಿ ಅಂತಾಪುರದ ದಳವಾಯಿ ತಿರುಮಲಯ್ಯ ಮತ್ತು ಗೌಡ ಹನುಮಿನಾಯಕರು ಮಲ್ಲಿಕಾರ್ಜುನ ದೇವಾಲಯಕ್ಕೆ ಭೂಮಿಯನ್ನು ದಾನವಾಗಿ ನೀಡಿದ ವಿಷಯವನ್ನು ದಾಖಲಿಸಲಾಗಿದೆ. ಈ ಭೂಮಿಯಿಂದ ಬರುವ ಆದಾಯದಿಂದ ದೇವರಿಗೆ ನಿತ್ಯಪೂಜೆ ಮತ್ತು ಅಮೃತ ಪಡಿ ನೈವೇದ್ಯ ನಿರಂತರವಾಗಿ ನಡೆಯಬೇಕು ಎಂಬ ಸ್ಪಷ್ಟ ಉಲ್ಲೇಖವಿದೆ ಎಂದು ಹಂಪಿ ಕನ್ನಡ ವಿವಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಶ್ರೇಣಿ ಪ್ರಾಧ್ಯಾಪಕ ಡಾ. ಗೋವೀಂದ ಅಭಿಪ್ರಾಯಪಟ್ಟಿದ್ದಾರೆ.

ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಎಚ್. ತಿಪ್ಪೇಸ್ವಾಮಿ, ಈ ಶಾಸನದ ಅತ್ಯಂತ ಕುತೂಹಲಕಾರಿ ಅಂಶವೆಂದರೆ, ಅದರ ಕೊನೆಯಲ್ಲಿ ಕಂಡುಬರುವ ಶಾಪಾಶಯ. ದಾನವು ನಿರಂತರವಾಗಿ ಮುಂದುವರೆಯಬೇಕು. ಯಾರಾದರೂ ಈ ದಾನವನ್ನು ನಿಲ್ಲಿಸಿದರೆ ಅಥವಾ ಶಾಸನವನ್ನು ನಾಶಪಡಿಸಿದರೆ, ಅವರು ವಾರಣಾಸಿಯಲ್ಲಿ ತಮ್ಮ ತಾಯಿಯನ್ನು ಕೊಂದ ಪಾಪಕ್ಕೆ ಗುರಿಯಾಗುತ್ತಾರೆ ಎಂಬ ಕಠಿಣ ಎಚ್ಚರಿಕೆ ದಾಖಲಿಸಲಾಗಿದೆ ಎಂದರು.