ಸಾರಾಂಶ
ಅಘೋಷಿತ ವನ್ಯಜೀವಿ-ಪ್ರಾಣಿಗಳ ಅಂಗಾಂಗಗಳ ಪದಾರ್ಥಗಳು, ಟ್ರೋಫಿಗಳು ಮತ್ತು ಸಂಸ್ಕರಿಸಿದ ಟ್ರೋಫಿಗಳನ್ನು ಸರ್ಕಾರಕ್ಕೆ ಅಧ್ಯರ್ಪಿಸಲು 90 ದಿನಗಳ ಗಡುವು ನೀಡಲಾಗಿತ್ತು. ಈ ಅವಧಿಯಲ್ಲಿ ಅಂದರೆ, 2024ರ ಏಪ್ರಿಲ್ 9 ರವರೆಗೆ ಒಟ್ಟು 192 ಜನರು ಸದರಿ ಅವಕಾಶವನ್ನು ಉಪಯೋಗಿಸಿಕೊಂಡಿದ್ದಾರೆ.
ಮಂಡ್ಯ : ಮಂಡ್ಯ ರಾಜ್ಯದಲ್ಲಿ ಒಟ್ಟು 192 ಮಂದಿ ತಮ್ಮ ಬಳಿ ಇರಿಸಿಕೊಂಡಿದ್ದ ಹುಲಿ ಉಗುರು, ಆನೆ ದಂತ, ಜಿಂಕೆ, ಹುಲಿ, ಚಿರತೆ ಸೇರಿದಂತೆ ಇತರೆ ಪ್ರಾಣಿಗಳ ಚರ್ಮವು ಒಳಗೊಂಡಂತೆ ಒಟ್ಟು 703 ವನ್ಯಜೀವಿ ಅಂಗಾಂಗ-ಪದಾರ್ಥಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಮಾಹಿತಿ ನೀಡಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಶಾಸಕ ಮಧು ಜಿ.ಮಾದೇಗೌಡರ ಚುಕ್ಕೆ ರಹಿತ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಮಾಲೀಕತ್ವದ ಪ್ರಮಾಣಪತ್ರವಿಲ್ಲದೆ ಸಾರ್ವಜನಿಕರು ತಮ್ಮ ಬಳಿ ಇರಿಸಿಕೊಂಡಿದ್ದ ಅಘೋಷಿತ ವನ್ಯಜೀವಿ-ಪ್ರಾಣಿಗಳ ಅಂಗಾಂಗಗಳ ಪದಾರ್ಥಗಳು, ಟ್ರೋಫಿಗಳು ಮತ್ತು ಸಂಸ್ಕರಿಸಿದ ಟ್ರೋಫಿಗಳನ್ನು ಸರ್ಕಾರಕ್ಕೆ ಅಧ್ಯರ್ಪಿಸಲು 90 ದಿನಗಳ ಗಡುವು ನೀಡಲಾಗಿತ್ತು. ಈ ಅವಧಿಯಲ್ಲಿ ಅಂದರೆ, 2024ರ ಏಪ್ರಿಲ್ 9 ರವರೆಗೆ ಒಟ್ಟು 192 ಜನರು ಸದರಿ ಅವಕಾಶವನ್ನು ಉಪಯೋಗಿಸಿಕೊಂಡಿದ್ದಾರೆ ಎಂದು ವಿವರಿಸಿದ್ದಾರೆ.
ಅವಧಿ ವಿಸ್ತರಣೆ ಇಲ್ಲ:
ಕರ್ನಾಟಕ ವನ್ಯಜೀವಿ (ರಕ್ಷಣೆ-ಅಘೋಷಿತ ವನ್ಯಜೀವಿ/ ಪ್ರಾಣಿಗಳ ಅಂಗಾಂಗಗಳ ಪದಾರ್ಥಗಳು, ಟ್ರೋಫಿಗಳು ಮತ್ತು ಸಂಸ್ಕರಿಸಿದ ಟ್ರೋಫಿಗಳ ಅಧ್ಯರ್ಪಿಸಲು ಅವಕಾಶ) ನಿಯಮಗಳು, 2024 ರನ್ವಯ ನಿಗದಿಪಡಿಸಿದ್ದ ಅವಧಿಯು ಮುಕ್ತಾಯಗೊಂಡಿದ್ದು, ಕಾಲಾವಕಾಶ ವಿಸ್ತರಿಸುವ ಪ್ರಸ್ತಾವನೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.
14 ಪ್ರಕರಣ ದಾಖಲು:
ವನ್ಯಜೀವಿ/ ಪ್ರಾಣಿಗಳ ಅಂಗಾಂಗಗಳ ಪದಾರ್ಥಗಳನ್ನು ತಮ್ಮ ಬಳಿ ಇರಿಸಿಕೊಂಡ ಕಾನೂನುಬಾಹಿರ ಕೃತ್ಯಕ್ಕೆ ಸಂಬಂಧಿಸಿದಂತೆ ಒಟ್ಟು 14 ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಲು ಬಾಕಿ -01 ಪ್ರಕರಣ, ದೋಷಾರೋಪಣಾ ಪಟ್ಟಿ ಸಲ್ಲಿಸಿರುವ-01, ತನಿಖೆ ಹಂತದಲ್ಲಿ-01, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ-02 ಹಾಗೂ ವಿಚರಣಾ ಹಂತದಲ್ಲಿ 09 ಪ್ರಕರಣಗಳಿವೆ ಎಂದು ವಿವರಿಸಿದ್ದಾರೆ.
66 ಹುಲಿಗಳು ಹಾಗೂ 373 ಆನೆಗಳು ಸಾವು:
ರಾಜ್ಯದಲ್ಲಿ 2020-21 ನೇ ಸಾಲಿನಿಂದ 2024ರ ಜೂನ್ ಅಂತ್ಯದವರೆಗೆ ರಾಜ್ಯದಲ್ಲಿ ಒಟ್ಟು 66 ಹುಲಿಗಳು ಹಾಗೂ 373 ಆನೆಗಳು ಮೃತಪಟ್ಟಿವೆ. ಮೃತಪಟ್ಟ ಹುಲಿಗಳ ಪೈಕಿ 48 ಸಹಜ, 07 ಅಸಹಜ ಮತ್ತು 11 ಸಾವಿಗೆ ನಿಖರ ಕಾರಣ ತಿಳಿದಿಲ್ಲ. ಹಾಗೇ ಮೃತಪಟ್ಟ ಆನೆಗಳ ಪೈಕಿ 305 ಸಹಜ, 67 ಅಸಹಜ ಸಾವಿಗೀಡಾಗಿವೆ ಎಂದು ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದ್ದಾರೆ.
2020-21ರಲ್ಲಿ 13 ಹುಲಿ, 74 ಆನೆ; 2021-22ರಲ್ಲಿ 19 ಹುಲಿ, 89 ಆನೆ; 2022-23ರಲ್ಲಿ 16 ಹುಲಿ, 74 ಆನೆ; 2023-24ರಲ್ಲಿ 12 ಹುಲಿ, 101 ಆನೆ ಹಾಗೂ 2024-25ರಲ್ಲಿ (ಜೂನ್ ಅಂತ್ಯಕ್ಕೆ) 6 ಹುಲಿ, 34 ಆನೆಗಳು ಮೃತಪಟ್ಟಿವೆ ಎಂದು ವಿವರ ನೀಡಿದ್ದಾರೆ.
2021-22ರ ಅವಧಿಯಲ್ಲಿ ಕೈಗೊಂಡ ಹುಲಿ ಗಣತಿ ಪ್ರಕಾರ, ರಾಜ್ಯವು ಅಂದಾಜು ಒಟ್ಟು 563 ಹುಲಿಗಳನ್ನು ಹೊಂದಿದ್ದು ರಾಷ್ಟ್ರದಲ್ಲಿ ಎರಡನೇ ಸ್ಥಾನ ಪಡೆದಿರುತ್ತದೆ. ಹಾಗೇ, 2023ರಲ್ಲಿ ನೇರ ವೀಕ್ಷಣೆಯಿಂದ ನಡೆಸಲಾದ ಆನೆ ಗಣತಿ ಪ್ರಕಾರ, ರಾಜ್ಯವು 6,395 ಆನೆಗಳನ್ನು ಹೊಂದಿದ್ದು, ರಾಷ್ಟ್ರದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ.