ಕಾರ್ಕಳ: ಸುಶಿಕ್ಷಿತ ಸಮಾಜ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸುವ ವಿದ್ಯಾಲಯ, ಧಾರ್ಮಿಕ ಪ್ರಜ್ಞೆ ಮೂಡಿಸುವ ದೇಗುಲ ಇವುಗಳೆರಡು ಸರಿಸಮಾನವಾಗಿದ್ದು, ಮಾತನಾಡುವ ದೇವರು ಇರುವ ವಿದ್ಯಾಲಯಕ್ಕೆ (ಸರಕಾರಿ ಶಾಲೆ) ಕೊಟ್ಟ ದೇಣಿಗೆ ವಿದ್ಯೆಯ ಮೂಲಕ ಸಾರ್ಥಕ್ಯ ಪಡೆಯುತ್ತದೆ ಎಂದು ಉದ್ಯಮಿ, ದಾನಿ ಸತೀಶ್ ಪೈ ತಿಳಿಸಿದ್ದಾರೆ.ಅವರು ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರಕ್ಕೆ ದಿ. ಹೆಬ್ರಿ ಪ್ರಫುಲ್ಲಾ ಪೈ ಅವರ ಸ್ಮರಣಾರ್ಥ ಸುಶೀಲಾ ಆನಂದ್ರಾಯ ಪೈ ಮತ್ತು ಮಕ್ಕಳು 5 ಲಕ್ಷ ರು. ವೆಚ್ಚದಲ್ಲಿ ಕೊಡಮಾಡಿದ ಕಾಲೇಜಿನ ಸಭಾಂಗಣ ಹಾಗೂ ವೇದಿಕೆ ಸಂಪೂರ್ಣ ವಿದ್ಯುದ್ದೀಕರಣ ಮತ್ತು ಫ್ಯಾನ್‌ಗಳ ಆಳವಡಿಕೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಪ್ರಸ್ತುತ ಸರ್ಕಾರಿ ಶಾಲಾ ಕಾಲೇಜುಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದಿದ್ದು, ಉತ್ತಮ ಬೋಧಕ, ಬೋಧಕೇತರ ಸಿಬ್ಬಂದಿ ವೃಂದವಿದೆ. ಕೆಲವೊಂದು ಮೂಲಭೂತ ಅಭಾವಗಳನ್ನು ದಾನಿಗಳು, ಹಳೆಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ನೀಗಿಸುವ ಕೆಲಸ ಮಾಡಬೇಕು. 2026-27 ನೇ ಕಾಲೇಜಿಗೆ ಬೇಕಾಗಿರುವ ಸೌಲಭ್ಯಗಳ ಬಗ್ಗೆ ಪಟ್ಟಿ ಮಾಡಿದರೆ ಇದಕ್ಕೆ ಬೇಕಾದ ಸಂಪೂರ್ಣ ಸಹಕಾರ ನೀಡುವುದಕ್ಕೆ ನಮ್ಮ ಫ್ಯಾಮಿಲಿ ಬದ್ಧವಾಗಿದೆ ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಹೆಬ್ರಿ ತಹಸೀಲ್ದಾರ್ ಎಸ್.ಎ. ಪ್ರಸಾದ್ ಮಾತನಾಡಿ, ಸಮಾಜದ ಆಶೋತ್ತರ, ಸರಕಾರಿ ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಇಂತಹ ದಾನಿಗಳನ್ನು ವಿದ್ಯಾರ್ಥಿಗಳು ನೆನಪಿನಲ್ಲಿ ಇಡಬೇಕು. ಸಮಾಜದ ಬಗ್ಗೆ ತುಡಿತ ಇಟ್ಟುಕೊಂಡಿರುವ ಸತೀಶ್ ಪೈ ಅವರು ಅಭಿನಂದನೀಯರು ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ವಿದ್ಯಾಧರ್ ಹೆಗ್ಡೆ ಎಸ್. ಮಾತನಾಡಿ, ಗ್ರಾಮೀಣ, ಹಳ್ಳಿಗಾಡಿನ ಸಹಸ್ರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಕಲ್ಪಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ನಮ್ಮ ಕಾಲೇಜು ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಪದವಿ, ಸ್ನಾತಕೋತ್ತರ ಶಿಕ್ಷಣವನ್ನು ಅತ್ಯುತ್ತಮ ಸೌಲಭ್ಯದೊಂದಿಗೆ ನೀಡುವ ಕಾಲೇಜಿಗೆ ವಿದ್ಯಾರ್ಥಿಗಳ ಸೇರ್ಪಡೆಯ ಹೆಚ್ಚಿಸುವ ನಿಟ್ಟಿನಲ್ಲಿ ನಾವೆಲ್ಲ ಒಟ್ಟಾಗಿ ಕಾರ್ಯಪ್ರವೃತ್ತರಾಗೋಣ ಎಂದರು.ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ ಶ್ಯಾಮಲಾ ವಿಠಲ್ ಶೆಟ್ಟಿ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಸುಷ್ಮಾ ರಾವ್ ಕೆ. ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಸುಧೀರ್ ಜೈನ್ ವಂದಿಸಿದರು. ಕನ್ನಡ ಉಪನ್ಯಾಸಕಿ ಮಮತಾ ನಿರೂಪಿಸಿದರು.