ಸಾರಾಂಶ
ಅರಹತೊಳಲು ಕೆ.ರಂಗನಾಥ್
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು“ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ” ಎಂಬುದು ಹಳೆಯ ಗಾದೆ; ಈಗ ಕತ್ತೆಗೂ ಕಾಲ ಬಂದಿದೆ. ಸಾಮಾನ್ಯವಾಗಿ ಓದದ ಮಕ್ಕಳನ್ನು ‘ಕತ್ತೆ ಕಾಯೋಕೆ ಹೋಗು’ ಎಂದು ಮೂದಲಿಸುತ್ತಿದ್ದ ನಿವೃತ್ತ ಶಿಕ್ಷಕರೇ ಕತ್ತೆ ಕಾಯ್ದರೆ ಲಾಭವೇ ಹೆಚ್ಚು ಎಂಬದನ್ನು ಇಲ್ಲಿ ರುಜುವಾತುಪಡಿಸಿದ್ದಾರೆ, ಎಲ್ಲರ ಬೈಗುಳ ಕೇಳುತ್ತಿದ್ದ ಕತ್ತೆಗಳಿಗೆ ಇದೀಗ ಒಂದು ಫಾರಂ ಆರಂಭಿಸಿ ಲಾಭದ ಹಾದಿಯಲ್ಲಿ ಮುನ್ನಡೆದಿದ್ದಾರೆ.
ಎಲ್ಲೆಡೆ ಕತ್ತೆ ಹಾಲಿಗೆ ಈಗ ಭಾರೀ ಡಿಮ್ಯಾಂಡ್ ಬಂದಿದೆ. ಕತ್ತೆಯ ಹಾಲು ಮತ್ತು ಮೂತ್ರ ಹಲವು ರೋಗಗಳಿಗೆ ರಾಮಬಾಣವಾಗಿದ್ದು, ಭದ್ರಾವತಿ ತಾಲೂಕಿನ ಅತ್ತಿಗುಂದ ಗ್ರಾಮದಲ್ಲಿ ನಿವೃತ್ತ ಶಿಕ್ಷಕ ಡಿ.ಕರಿಯಪ್ಪ ಎಂಬುವರು ಶಿವಮೊಗ್ಗ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಕತ್ತೆಗಳ ಫಾರ್ಮ್ ಮಾಡಿ ಯಶಸ್ವಿಯಾಗಿದ್ದಾರೆ.ನಿವೃತ್ತ ಶಿಕ್ಷಕ ಡಿ.ಕರಿಯಪ್ಪ 6 ಕತ್ತೆಗಳನ್ನು ತಂದು ಸಾಕುತ್ತಿದ್ದಾರೆ. ಒಂದು ಕತ್ತೆಯಿಂದ ದಿನವೊಂದಕ್ಕೆ 700 ರಿಂದ 750 ಮಿ.ಲೀ. ಹಾಲು ದೊರೆಯುತ್ತದೆ. ಒಂದು ಲೀಟರ್ ಹಾಲಿನ ಮಾರುಕಟ್ಟೆ ದರ 2350 ರು.ಗಳು. ಕೆಲವೊಂದು ಬಾರಿ ಹಾಲಿನ ಪ್ರಮಾಣ 50 ರಿಂದ 100 ಮಿ.ಲೀ. ಕಡಿಮೆಯಾಗುವ ಸಾಧ್ಯತೆ ಇದೆ. 6 ಕತ್ತೆಗಳಿಂದ ದಿನಕ್ಕೆ ಕಡಿಮೆ ಎಂದರೂ 4 ಲೀಟರ್ ಹಾಲು ದೊರೆಯುತ್ತದೆ. ಅಂದರೆ ದಿನಕ್ಕೆ 9400 ರು. ಆದಾಯ ದೊರೆಯುತ್ತದೆ ಎಂದು ಬಹಳ ಹೆಮ್ಮೆಯಿಂದ ಹೇಳುತ್ತಾರೆ ಕರಿಯಪ್ಪ. ಜೊತೆಗೆ 15 ನಾಟಿ ಕೋಳಿ, 15 ಬಾತುಕೋಳಿ ಮತ್ತು 5 ಕುರಿಗಳನ್ನು ಉಪಕಸುಬಾಗಿ ಸಾಕುತ್ತಿದ್ದಾರೆ.ಕತ್ತೆಗಳು ದೊರೆಯುವ ಸ್ಥಳ:ಹೊಸಪೇಟೆಯಲ್ಲಿರುವ ಜೆನ್ನಿ ಮಿಲ್ಕ್ ಎಂಬ ಕಂಪನಿಯು ಹಾಲು ಕರೆಯುವಂತಹ ಕತ್ತೆಗಳನ್ನು ಸಾಕಾಣಿಕೆದಾರರಿಗೆ ನೀಡುತ್ತಿದೆ. ಇವುಗಳಲ್ಲಿ ಹಲವಾರು ತಳಿಯ ಕತ್ತೆಗಳಿದ್ದು, ಪ್ರಮುಖವಾಗಿ ರಾಜಸ್ತಾನಿ ಡಾಂಕಿ ಮತ್ತು ಕಟ್ವಾಡಿ ಡಾಂಕಿ ಎಂಬ ಹೆಸರಿನ ಎರಡು ತಳಿಗಳನ್ನು ಪೂರೈಕೆ ಮಾಡುತ್ತಿದೆ.ಹಾಲಿನ ಸಂಸ್ಕರಣೆ, ಮಾರುಕಟ್ಟೆ :ಪ್ರತೀ ದಿನ ಕತ್ತೆಗಳಿಂದ ಕರೆದ ಹಾಲನ್ನು ಕೆಡದಂತೆ ಇಡಲು ಜೆನ್ನಿ ಮಿಲ್ಕ್ ಕಂಪನಿಯು ಪ್ರೀಜರ್ ಅನ್ನು ನೀಡುತ್ತದೆ. ಇದರಲ್ಲಿ ಹಾಲನ್ನು ತಿಂಗಳುಗಳ ಕಾಲ ಕೆಡದಂತೆ ಇಡ ಬಹುದು. ಹೀಗೆ ಸಂಸ್ಕರಿಸಿದ ಹಾಲನ್ನು ಕಂಪನಿಯು 15 ರಿಂದ 30 ದಿನಗಳಿಗೊಮ್ಮೆ ಬಂದು ತೆಗೆದುಕೊಂಡು ಹೋಗುವುದು. ಫ್ರೀಜರ್ ದೊಡ್ಡದಾಗಿದ್ದು, 100 ರಿಂದ 150 ಲೀಟರ್ ಹಾಲನ್ನು ಸಂಗ್ರಹಿಸಿ ಇಡಬಹುದಾಗಿದೆ. ಪ್ರತೀ ಹತ್ತು ದಿನಗಳಿಗೊಮ್ಮೆ ಕಂಪನಿಯು ಎಷ್ಟು ಲೀಟರ್ ಹಾಲು ಇದೆ ಎಂದು ತಿಳಿದುಕೊಂಡು ಇರುವಷ್ಟು ಹಾಲಿನ ಮೊತ್ತ ವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡುತ್ತದೆ. ರೈತರು ಯಾವುದೇ ಕಾರಣಕ್ಕೂ ಹಾಲನ್ನು ಬೇರೆಯವರಿಗೆ ಮಾರುವಂತಿಲ್ಲ. ಇದೆಲ್ಲದರ ಒಪ್ಪಂದ ಮೊದಲೇ ಮಾಡಿಕೊಂಡು ಇಬ್ಬರೂ ಒಪ್ಪಿ ಒಡಂಬಡಿಕೆಗೆ ಸಹಿ ಹಾಕಿರಬೇಕು.
-----------------------ಕೋಟ್.ಶಿಕ್ಷಕನಾಗಿರುವಾಗ ನಾನೇ ಅದೆಷ್ಟೋ ವಿದ್ಯಾರ್ಥಿಗಳಿಗೆ ಸರಿಯಾಗಿ ಓದದೇ ಇದ್ದಾಗ ಕತ್ತೆ ಕಾಯೋಕೆ ಹೋಗು ಎಂದು ಬೈದಿರುವುದು ಉಂಟು. ಆದರೆ ಇದೇ ಕತ್ತೆಗಳನ್ನು ಸಾಕಿದರೆ ಇಷ್ಟೊಂದು ಆದಾಯ ಬರುತ್ತದೆ ಎಂಬುದು ಈಗ ತಿಳಿಯಿತು. ಮನುಷ್ಯ ಇನ್ನೊಬ್ಬರಿಗೆ ಮೋಸ ಮಾಡುವ, ಕಳ್ಳತನ ಮಾಡುವ ಬದಲು ಕತ್ತೆ ಕಾಯುವುದು ವಾಸಿ ಎಂಬುದು ನನ್ನ ಅಭಿಪ್ರಾಯ.
- ಡಿ.ಕರಿಯಪ್ಪ, ನಿವೃತ್ತ ಶಿಕ್ಷಕರು, ಅತ್ತಿಗುಂದ.---------------------------------ಪೋಟೋ. 14ಎಚ್ ಎಚ್ ಆರ್ ಪಿ 1 ಡಿ.ಕರಿಯಪ್ಪ ಮೇಷ್ಟ್ರು
------------------ಪೋಟೋ. 14ಎಚ್ ಎಚ್ ಆರ್ ಪಿ 2: ಸಾಕಿದ ಕತ್ತೆಗಳೊಂದಿಗೆ ಕರಿಯಪ್ಪ ಮೇಷ್ಟ್ರು.
---------------------