ಜೆನ್ನಿ ಮಿಲ್ಕ್‌ ಪ್ರಕರಣದ ಕತ್ತೆಗಳು: ಕಡಿಮೆ ಬೆಲೆಗೆ ಹರಾಜು!

| Published : Dec 07 2024, 12:30 AM IST

ಜೆನ್ನಿ ಮಿಲ್ಕ್‌ ಪ್ರಕರಣದ ಕತ್ತೆಗಳು: ಕಡಿಮೆ ಬೆಲೆಗೆ ಹರಾಜು!
Share this Article
  • FB
  • TW
  • Linkdin
  • Email

ಸಾರಾಂಶ

ಸಿಐಡಿ ಪೊಲೀಸರು ನಡೆಸಿದ ಹರಾಜಿನಲ್ಲಿ ಕತ್ತೆಗಳಿಗೆ ಡಿಮ್ಯಾಂಡ್‌ ಭಾರೀ ಕಡಿಮೆ ಆಗಿತ್ತು.

ಹೊಸಪೇಟೆ: ಕತ್ತೆಗಳು ಎಂದರೆ ಸಾಕು, ವಿಜಯನಗರ ಜಿಲ್ಲೆಯಲ್ಲಿ ಭಾರೀ ಡಿಮ್ಯಾಂಡ್‌ ಬಂದು ಬಿಟ್ಟಿತ್ತು. ಕತ್ತೆಗಳ ಹಾಲು ಖರೀದಿ ಮಾಡುತ್ತಾರೆ ಎಂದು ಕತ್ತೆ ಖರೀದಿ ಮಾಡಿಕೊಂಡು ಆ ಬಳಿಕ ವಂಚನೆಗೊಳಗಾಗಿದ್ದರಿಂದ ಈಗ ಕತ್ತೆಗಳನ್ನು ಸಿಐಡಿ ಪೊಲೀಸರು ಹರಾಜು ಹಾಕಿದರು!

ಜೆನ್ನಿ ಮಿಲ್ಕ್‌ ಕಂಪನಿ ಮೂರು ಕತ್ತೆ ಹಾಗೂ ಮೂರು ಕತ್ತೆ ಮರಿಗಳನ್ನು ₹3 ಲಕ್ಷ ಮಾರಾಟ ಮಾಡಿತ್ತು. ಆದರೆ, ಸಿಐಡಿ ಪೊಲೀಸರು ನಡೆಸಿದ ಹರಾಜಿನಲ್ಲಿ ಕತ್ತೆಗಳಿಗೆ ಡಿಮ್ಯಾಂಡ್‌ ಭಾರೀ ಕಡಿಮೆ ಆಗಿತ್ತು.

ತಾಲೂಕಿನ ಗಾಳೆಮ್ಮನ ಗುಡಿ ಸಮೀಪದ ಜಮೀನೊಂದರಲ್ಲಿ ಶೆಡ್‌ನಲ್ಲಿದ್ದ ಜೆನ್ನಿಮಿಲ್ಕ್ ಕಂಪನಿಗೆ ಸಂಬಂಧಿಸಿದ ಕತ್ತೆಗಳನ್ನು ಸಿಐಡಿ ಕಲಬುರಗಿ ವಿಭಾಗದ ಡಿವೈಎಸ್ಪಿ ಅಸ್ಲಂ ಬಾಷಾ ಅವರು, ನ್ಯಾಯಾಲಯದ ಆದೇಶದಂತೆ ಶುಕ್ರವಾರ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಿದರು. ಒಟ್ಟು 42 ಕತ್ತೆಗಳು ಮತ್ತು 2 ಮರಿ ಕತ್ತೆಗಳು ಸೇರಿ ಒಟ್ಟು ₹2.75 ಲಕ್ಷ ರು.ಗಳಿಗೆ ಹರಾಜಾದವು. ಹರಾಜು ಪ್ರಕ್ರಿಯೆಯಲ್ಲಿ ಕೇವಲ ಮೂವರು ಪಾಲ್ಗೊಂಡಿದ್ದರು. ತುಮಕೂರಿನ ಶಿರಾದ ಪ್ರಹ್ಲಾದ್, ಆಂಧ್ರದ ರಾಯದುರ್ಗದ ಸುರೇಶ್ ಮತ್ತು ಗುಳ್ಯಂನ ಗಾದಿಲಿಂಗ ಎಂಬ ಮೂವರು ಮಾತ್ರ ಹರಾಜು ಪ್ರಕ್ರಿಯೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು.

ಸಿಐಡಿ ಡಿವೈಎಸ್ಪಿ ಅಸ್ಲಂ ಬಾಷಾ ಅವರು ಆರಂಭದಲ್ಲಿ ಹರಾಜು ಪ್ರಕ್ರಿಯೆಯ ನಿಯಮಗಳನ್ನು ತಿಳಿಸಿ, ಕತ್ತೆಗಳ ಪ್ರಕರಣದ ಹಿನ್ನೆಲೆಯ ಮಾಹಿತಿ ನೀಡಿ ಹರಾಜು ಆರಂಭಿಸಿದರು. ಪ್ರಾರಂಭದಲ್ಲಿ ತಲಾ ಒಂದು ಕತ್ತೆಗೆ ಸರ್ಕಾರದ ಸವಾಲ್ ₹10 ಸಾವಿರ ಕೂಗಲಾಯಿತು. ಇದಕ್ಕೆ ಪ್ರತಿಯಾಗಿ ಹರಾಜಿನಲ್ಲಿ ಪಾಲ್ಗೊಂಡಿದ್ದವರು ತಲಾ ಒಂದು ಕತ್ತೆ ₹4 ಸಾವಿರದಿಂದ ಹರಾಜು ಮೊತ್ತ ಕೂಗಿದರು. ಕೊನೆಯಲ್ಲಿ ರಾಯದುರ್ಗದ ಸುರೇಶ್ ಎಂಬವರು ₹6.5 ಸಾವಿರ ಮೊತ್ತ ಕೂಗಿದರು. ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಯಾರೂ ಕೂಗದ ಹಿನ್ನೆಲೆಯಲ್ಲಿ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಲಾಯಿತು.

ಹರಾಜಿನಲ್ಲಿ ಕತ್ತೆಗಳನ್ನು ಖರೀದಿಸಿದ ರಾಯದುರ್ಗದ ಸುರೇಶ್, ಕತ್ತೆಗಳು ಬಹಳ ಸೊರಗಿವೆ. ಅವುಗಳ ಆರೋಗ್ಯ ಸ್ಥಿತಿಯೂ ಬಹಳ ಹದಗೆಟ್ಟಿದೆ. ಇವುಗಳನ್ನು ಬಟ್ಟೆ ಸಾಗಿಸಲು ಬಳಸುತ್ತೇವೆ. ನಮ್ಮ 15 ಕುಟುಂಬಗಳು ಇದೇ ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.

ಜೆನ್ನಿ ಮಿಲ್ಕ್‌ ಎಂಬ ಕಂಪನಿ ರೈತರಿಗೆ ₹13 ಕೋಟಿಗೂ ಅಧಿಕ ಮೊತ್ತ ವಂಚನೆ ಮಾಡಿದ್ದು, ರಾಜ್ಯದ ವಿವಿಧ ಭಾಗಗಳ ರೈತರು ವಂಚನೆಗೊಳಗಾಗಿದ್ದಾರೆ. ಈ ಕುರಿತು ಇಲ್ಲಿನ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಐಡಿ ತಂಡ ತನಿಖೆ ಕೂಡ ಕೈಗೊಂಡಿದೆ.