ಮಾಸ್ತಿ ಗ್ರಾಮದಲ್ಲಿ ಕೆಪಿಎಸ್ ಶಾಲೆ ಆರಂಭಿಸಲಾಗಿದೆ. ಓಸಾಟ್ ಸಂಸ್ಥೆಯವರು ೮ ಕೋಟಿ ವೆಚ್ಚದಲ್ಲಿ ಸುಸಜ್ಜಿತ ಶಾಲೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ, ಆ ಶಾಲೆಯಲ್ಲಿ ಪ್ರಸ್ತುತ ೧೫೦೦ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ, ತೂರ‍್ನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಸಹ ೪೨,೭೨,೦೦೦ ವೆಚ್ಚದಲ್ಲಿ ಶಾಲಾ ಕಾಂಪೌಂಡ್ ಆವರಣದಲ್ಲಿ ದೊಡ್ಡ ದೊಡ್ಡ ಹಳ್ಳಗಳನ್ನು ಮುಚ್ಚಲಾಗಿದೆ.

ಕನ್ನಡಪ್ರಭ ವಾರ್ತೆ ಮಾಲೂರು

ದಾನಿಗಳ ಸಹಕಾರ, ಸರ್ಕಾರದ ಅನುದಾನ ಹಾಗೂ ಕಂಪನಿಗಳ ಸಿಎಸ್‌ಆರ್ ಅನುದಾನವನ್ನು ಬಳಸಿಕೊಂಡು ತಾಲೂಕಿನಲ್ಲಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ಶಾಸಕ ಕೆ ವೈ ನಂಜೇಗೌಡ ಹೇಳಿದರು.ಅವರು ತಾಲೂಕಿನ ತೂರ‍್ನಹಳ್ಳಿ ಗ್ರಾಮದಲ್ಲಿ ಹೋಂಡಾ ಇಂಡಿಯಾ ಪೌಂಡೇಶನ್ ವತಿಯಿಂದ ಸಿಎಸ್‌ಆರ್‌ ಅನುದಾನದಡಿ ನಿರ್ಮಿಸಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ನೂತನ ಕಟ್ಟಡದ ನಾಲ್ಕು ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು.

ಹೋಂಡಾ ಕಂಪನಿ ನೆರವು

ಹೋಂಡಾ ಕಂಪನಿಯಿಂದ ಸರ್ಕಾರ ಮಾಡದ ಕೆಲಸವನ್ನು ಮಾಡಿಸಿಕೊಂಡಿದ್ದೇವೆ ನಗರದಲ್ಲಿ ೮ ರಿಂದ ೯ ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಿ ಕೊಟ್ಟಿದ್ದಾರೆ. ಕರೋನಾ ಸಂದರ್ಭದಲ್ಲಿ ಆಸ್ಪತ್ರೆಗೆ ಆಕ್ಸಿಜನ್, ಐಸಿಯು ಬೆಡ್‌ಗಳನ್ನು ಮಾಡಿಕೊಟ್ಟಿದ್ದಾರೆ. ಗ್ರಾಮಗಳಲ್ಲಿ ಶುದ್ಧಕುಡಿಯುವ ನೀರಿನ ಘಟಕಗಳು ಹೈಮಾಸ್ ಲೈಟ್‌ ಗಳನ್ನು ಶಾಲಾ ಕೊಠಡಿಗಳನ್ನು ಸಹ ನಿರ್ಮಿಸಿ ಕೊಟ್ಟಿದ್ದಾರೆ. ಜೊತೆಗೆ ಹೊಸ ಕಂಪನಿಯು ಸಹ ಶಾಲಾ ಕಟ್ಟಡಗಳನ್ನು ನಿರ್ಮಿಸಿ ಕೊಟ್ಟಿದೆ. ಒಂದೇ ಕಂಪೌಂಡಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರೌಢಶಾಲೆಗಳನ್ನು ನಿರ್ಮಾಣ ಮಾಡಬಹುದಾಗಿದೆ ಎಂದರು.

ಇಲ್ಲಿನ ರಮಾ ಮಾಧವ ಅನುದಾನಿತ ಶಾಲೆ ಸರ್ಕಾರಿ ಶಾಲೆಯಾಗಿ ಪರಿವರ್ತನೆ ಮಾಡಿ ಎಲ್‌ಕೆಜಿ ಯಿಂದ ೧೦ನೇ ತರಗತಿವರೆಗೂ ಆರಂಭಿಸಲು ಶಿಕ್ಷಣ ಸಚಿವರ ಬಳಿ ಚರ್ಚಿಸಲಾಗುವುದು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿರುವುದರಿಂದ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ, ಆದರೆ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧೮೬ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ, ಪೋಷಕರಿಗೆ ಸರ್ಕಾರಿ ಶಾಲೆಗಳ ಬಗ್ಗೆ ನಂಬಿಕೆ ಬರುವಂತಹ ಶಿಕ್ಷಣವನ್ನು ಶಿಕ್ಷಕರು ನೀಡಬೇಕು ಎಂದರು.

ಮಾಸ್ತಿಯಲ್ಲಿ ಓಸಾಟ್ ಸಂಸ್ಥೆ ನೆರವುಮಾಸ್ತಿ ಗ್ರಾಮದಲ್ಲಿ ಕೆಪಿಎಸ್ ಶಾಲೆ ಆರಂಭಿಸಲಾಗಿದೆ. ಓಸಾಟ್ ಸಂಸ್ಥೆಯವರು ೮ ಕೋಟಿ ವೆಚ್ಚದಲ್ಲಿ ಸುಸಜ್ಜಿತ ಶಾಲೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ, ಆ ಶಾಲೆಯಲ್ಲಿ ಪ್ರಸ್ತುತ ೧೫೦೦ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ, ತೂರ‍್ನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಸಹ ೪೨,೭೨,೦೦೦ ವೆಚ್ಚದಲ್ಲಿ ಶಾಲಾ ಕಾಂಪೌಂಡ್ ಆವರಣದಲ್ಲಿ ದೊಡ್ಡ ದೊಡ್ಡ ಹಳ್ಳಗಳನ್ನು ಮುಚ್ಚಲಾಗಿದೆ. ಚುನಾಯಿತ ಪ್ರತಿನಿಧಿಗಳು ಸ್ಥಳೀಯರು ಸರ್ಕಾರಿ ಶಾಲೆಗಳನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯ ಎಂದರು.ಹೋಂಡಾ ಇಂಡಿಯಾ ಫೌಂಡೇಶನ್ ಕಂಪನಿಯ ಉಪಾಧ್ಯಕ್ಷ ಥಕಾಯಕಿ ಸುಜುಕಿ ಮಾತನಾಡಿ, ಸಿಎಸ್‌ಆರ್ ಅನುದಾನದಲ್ಲಿ ಶಾಲಾ ಕಟ್ಟಡ ನಿರ್ಮಿಸಲಾಗಿದ್ದು ಇದು ಕಾಂಕ್ರೀಟ್ ಕಟ್ಟಡವಲ್ಲ ಇದೊಂದು ಶಿಕ್ಷಣ ಕೇಂದ್ರ ದೇವಾಲಯದಂತಾಗಿದೆ. ಮುಂದಿನ ಪೀಳಿಗೆಗೆ ಮಕ್ಕಳನ್ನು ಬೆಳೆಸುವ ದೇವಾಲಯವಾಗಿದ್ದು, ಕಂಪನಿಯ ಸಮಾಜ ಬಯಸುವರೂ ಅಲ್ಲಿಯವರೆಗೂ ಸಾಮಾಜಿಕ ಕೆಲಸ ಕಾರ್ಯಗಳನ್ನು ನಡೆಯುತ್ತಿರುತ್ತವೆ ಎಂದರು.

ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ

ಸಿ.ಎಸ್.ಆರ್. ಅನುದಾನದಡಿ ಗ್ರಾಮಾಂತರ ಭಾಗದಲ್ಲಿ ಬಡ ಹಾಗೂ ಮಧ್ಯಮವರ್ಗದ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಮೂಲಭೂತ ಸೌಲತ್ತುಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ, ಶಾಲಾ ಕಟ್ಟಡ ನೂತನವಾಗಿ ನಿರ್ಮಿಸಲಾಗಿದ್ದು, ಮಕ್ಕಳ ಕಲಿಕೆಗೆ ಉತ್ತೇಜಿಸುವ ಆಲೋಚನ ಶಕ್ತಿ ವೃದ್ಧಿಸುವ ಅವಕಾಶದ ಬಾಗಿಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಥಮ್ಮ, ರಾಮಯ್ಯ, ತಹಶೀಲ್ದಾರ್ ಎಂ.ವಿ.ರೂಪ, ಹೋಂಡಾ ಇಂಡಿಯಾ ಫೌಂಡೇಶನ್‌ನ ಆಪರೇಟರ್ ಆಫೀಸರ್ ಸುನಿಲ್ ಕುಮಾರ್ ನಿತ್ತಾಲ್, ಎಚ್ ಆರ್ ಜಯಂತ ಶೆಟ್ಟಿ, ರಾಘವೇಂದ್ರ ಪೂಜಾರಿ, ಮಲ್ಲಿಕಾರ್ಜುನ್, ಬಿ ಓ ಬಿ.ಪಿ.ಕೆಂಪಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಂಜಿನಪ್ಪ ಮತ್ತಿತರರು ಇದ್ದರು.