ಸಾರಾಂಶ
ಸಿದ್ದಾಪುರ: ಸಂಪತ್ತಿಗೆ ವಿಪತ್ತು ಇರುತ್ತದೆ. ಬೇರೆ ಆಕರ್ಷಣೆ ಹಿಂದೆ ಓಡದೇ ಧರ್ಮಾನುಷ್ಠಾನದ ಜತೆ ಸಾಗಬೇಕು. ಧರ್ಮ, ದೇವಕೃಪೆಯೊಂದೇ ಶಾಶ್ವತ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.ತಾಲೂಕಿನ ಕಲಗದ್ದೆಯ ಶ್ರೀ ನಾಟ್ಯ ವಿನಾಯಕ ದೇವಸ್ಥಾನದಲ್ಲಿ ಸಮಾರೋಪಗೊಂಡ ೩೭೨ ದಿನಗಳ ಕಾಲ ನಿರಂತರವಾಗಿ ನಡೆದ ಗಾಯತ್ರಿ ಮಹಾ ಸತ್ರ ಸಂಪನ್ನ ಸಮಾರಂಭದಲ್ಲಿ ಪೂರ್ಣಾಹುತಿಯಲ್ಲಿ ಸಾನ್ನಿಧ್ಯ ನೀಡಿ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.ಬುದ್ಧಿ ಸರಿಯಾದ ದಾರಿಯಲ್ಲಿ ಇರಬೇಕು. ಸಾವಿರ ಬುದ್ಧಿವಂತಿಕೆ ಇದ್ದರೂ ಪ್ರಯೋಜನ ಇಲ್ಲ. ಕಲಗದ್ದೆ ಕಲೆಯ ಗದ್ದೆಯೋ, ಕಲ್ಯಾಣ ಗದ್ದೆಯೋ ಎಂಬಂತೆ ಆಗಿದೆ. ಕಲೆ ಇಲ್ಲದೇ ಬದುಕಲು ಸಾಧ್ಯವಿಲ್ಲ. ಶರೀರಕ್ಕೆ ಶಿರಸ್ಸಿನಷ್ಟೇ ಬದುಕಿಗೆ ಗಾಯತ್ರಿ ದೇವಿ ಉಪಾಸನೆ ಮುಖ್ಯ. ಅನರ್ಥ ಮಾಡುವ ಮನಸ್ಸುಗಳಿಗೆ ಅದು ಬಾರದೇ ಇರುವಂತೆ ಇದು ಪ್ರೇರಕ. ಗಾಯತ್ರಿ ಮಹಾಮಂತ್ರ ಸರಿಯಾಗಿ ಬಂದರೆ, ಅನುಷ್ಠಾನ ಮಾಡಿದರೆ ಪಾಪ ಇಲ್ಲ, ಬದುಕಿನ ತುಂಬಾ ನೆಮ್ಮದಿ ಸಮೃದ್ಧಿ ಎಂದರು.
ಇಂದು ಜನ ಸಂಪತ್ತಿನ ಹಿಂದೆ ಇದ್ದಾರೆ. ಆದರೆ, ಬುದ್ಧಿಯ ಹಿಂದೆ, ಗಾಯತ್ರಿ ಆರಾಧನೆ ಹಿಂದೆ ಇರಬೇಕು. ಹವನವನ್ನು ದೊಡ್ಡದಾಗಿ ಮಾಡುವ ಜತೆ ದೀರ್ಘವಾಗಿ ಗಾಯತ್ರಿ ಅನುಷ್ಠಾನ ಇಲ್ಲಿ ಆಗಿದೆ. ನಿರಂತರವಾಗಿ ನಡೆದು ಇದು ಮಹಾ ಸತ್ರವಾಗಿದೆ ಎಂದರು.ಶ್ರೀಕ್ಷೇತ್ರದಿಂದ ಕೊಡಮಾಡಲ್ಪಟ್ಟ ರಾಜಮಾನ್ಯ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಅವರು, ಕಲಗದ್ದೆಯಲ್ಲಿ ಹಲವಾರು ಪವಿತ್ರ, ಒಳ್ಳೆಯ ಕಾರ್ಯ ಸಮಾಜದ ಪರವಾಗಿ ಮಾಡಲಾಗುತ್ತಿದೆ. ಸಾನ್ನಿಧ್ಯ ನೀಡಿದ ಗುರುಗಳು ಕೇವಲ ಒಂದು ಸಮಾಜಕ್ಕೆ ಆಶೀರ್ವಾದ ಕೊಡದೇ ಎಲ್ಲರಿಗೂ ಆಶೀರ್ವಾದ ಬಯಸುತ್ತಾರೆ. ಅಂಥ ಗುರುಗಳು ನಮ್ಮ ಹೆಮ್ಮೆ, ನಮ್ಮ ಭಾಗ್ಯ. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಸಿಗಬೇಕು ಎಂದರು.ಸಿಂಧೂರ ಶ್ರೀ ಪ್ರಶಸ್ತಿ ಪುರಸ್ಕೃತ, ಪ್ರಸಿದ್ಧ ಜ್ಯೋತಿಷಿ ಡಾ. ಗೋಪಾಲಕೃಷ್ಣ ಶರ್ಮಾ ಮಾತನಾಡಿ, ನಾಟ್ಯ ಗಣಪತಿ ವಿಶ್ವ ಗಣಪತಿಯಾಗುತ್ತಾನೆ. ಇಲ್ಲಿ ಯಕ್ಷಗಾನ ಕೂಡ ನಿತ್ಯ ಹವನದಂತೆ ನಡೆಯುವ ಕಾಲ ಬರಲಿ ಎಂದರು.ಗಾನ ಶ್ರೀ ಪ್ರಶಸ್ತಿ ಸ್ವೀಕರಿಸಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಭಾಗವತ ಕೇಶವ ಹೆಗಡೆ ಕೊಳಗಿ ಅವರು, ಗುರುಗಳು, ದೇವರ ಸನ್ನಿಧಾನಲ್ಲಿ ಗಾನಶ್ರೀ ಪ್ರಶಸ್ತಿ ಸಿಕ್ಕಿದ್ದು ಪುಣ್ಯ ಎಂದರು.ಶಾಸಕ ಭೀಮಣ್ಣ ನಾಯ್ಕ, ಹವ್ಯಕ ಮಹಾ ಮಂಡಳದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಸಮಿತಿ ಕಾರ್ಯಾಧ್ಯಕ್ಷ ಡಾ. ಜಿ.ಎಲ್. ಹೆಗಡೆ ಕುಮಟಾ, ಗೌರವಾಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಇತರರು ಇದ್ದರು. ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ ಪ್ರಾಸ್ತಾವಿಕ ಮಾತನಾಡಿದರು.