ಸಾರಾಂಶ
ಧಾರವಾಡ:
ಲೋಕಾಯುಕ್ತದ ಬಗ್ಗೆ ಅನಗತ್ಯ ಭಯ, ಆತಂಕ ಪಡದೆ ಕಾನೂನಾತ್ಮಕವಾಗಿ ಕರ್ತವ್ಯ ನಿರ್ವಹಿಸಿ, ವೃತ್ತಿ ನಿಷ್ಠೆ ತೋರಬೇಕು. ಲೋಕಾಯುಕ್ತ ಕಾಯ್ದೆ, ಕಾರ್ಯಗಳ ಬಗ್ಗೆ ಅರಿವು ಹೊಂದುವುದು ಅಗತ್ಯ ಎಂದು ಉಪ ಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಹೇಳಿದರು.ಜಿಲ್ಲಾ ಪಂಚಾಯಿತಿಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಶುಕ್ರವಾರ ಆಯೋಜಿಸಿದ್ದ ಲೋಕಾಯುಕ್ತ ಕಾಯ್ದೆಯ ಕಾನೂನು ಅರಿವು ಉದ್ಘಾಟಿಸಿದ ಅವರು, ಲೋಕಾಯುಕ್ತ ಸಾರ್ವಜನಿಕ ನೌಕರರ ಕರ್ತವ್ಯ, ದುರ್ನಡತೆಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸಲು ಮತ್ತು ವರದಿ ಮಾಡಲು ಸ್ಥಾಪಿಸಲಾಗಿರುವ ಸಂಸ್ಥೆ. ಸಾರ್ವಜನಿಕ ಆಡಳಿತದ ಗುಣಮಟ್ಟ ಸುಧಾರಿಸುವುದು, ಸಾರ್ವಜನಿಕ, ಸರ್ಕಾರಿ ನೌಕರರ ದುರ್ನಡತೆಯಿಂದ ಸಂಭವಿಸಿದ ಕುಂದು-ಕೊರತೆ ನಿವಾರಣೆ, ತಪ್ಪಿತಸ್ಥರ ವಿರುದ್ಧ ಶಿಸ್ತಿನ ಕ್ರಮಕ್ಕೆ ಸರ್ಕಾರಕ್ಕೆ, ಸಕ್ಷಮ ಪ್ರಾಧಿಕಾರಕ್ಕೆ ಶಿಫಾರಸು ಮಾಡುವುದು ಈ ಸಂಸ್ಥೆಯ ಕಾರ್ಯ ವ್ಯಾಪ್ತಿಗೆ ಒಳಪಡುತ್ತದೆ ಎಂದರು.
ಯಾವುದೇ ವ್ಯಕ್ತಿ ಆಡಳಿತ ನಿರ್ವಹಣೆಯಲ್ಲಿ ಭ್ರಷ್ಟಾಚಾರ ಮಾಡಿದ್ದರೆ, ದುರ್ನಡತೆ, ಅಶಿಸ್ತು ತೋರಿದ್ದರೆ ಸಾರ್ವಜನಿಕ, ಸರ್ಕಾರಿ ನೌಕರರ ವಿರುದ್ಧ ಮಾತ್ರ ದೂರು ನೀಡಬಹುದಾಗಿದೆ. ಈ ಸಂಬಂಧ ಲೋಕಾಯುಕ್ತ ಕಚೇರಿಯ ಆವರಣದಲ್ಲಿ ಸ್ಥಾಪಿಸಿರುವ ಲೋಕಾಯುಕ್ತ ಪೊಲೀಸ್ ಠಾಣಿಗೆ ದೂರು ಕೊಡಬಹುದು. ಸರ್ಕಾರಿ ನೌಕರ ತಪ್ಪಿತಸ್ಥ ಎಂದು ಕಂಡುಬಂದಲ್ಲಿ, ಆತನಿಗೆ ಸೂಕ್ತ ಶಿಕ್ಷೆ ಮತ್ತು ದಂಡನೆ ವಿಧಿಸುತ್ತದೆ. ಅಲ್ಲದೇ ಶಿಕ್ಷೆಗೆ ಒಳಪಟ್ಟ ವ್ಯಕ್ತಿಯನ್ನು ಕೆಲಸದಿಂದ ವಜಾ ಮಾಡಬೇಕಾಗುತ್ತದೆ. ನೌಕರ ತನಗೆ ಸುಳ್ಳು ದೂರುಗಳಿಂದ ತೊಂದರೆ ಆದಾಗ ಲೋಕಾಯುಕ್ತದಲ್ಲಿ ಪ್ರಕರಣ ಸಹ ದಾಖಲಿಸಬಹುದು. ಹೆಚ್ಚಿನ ಮಾಹಿತಿಯನ್ನು ಅಂತರ್ಜಾಲ https://lokayukta.kar.nic.in ಮತ್ತು ದೂ. 080-22258767, 080-22250278 ಪಡೆಯಬಹುದು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ಜಿ. ರಮಾ, ಪ್ರತಿಯೊಬ್ಬ ಅಧಿಕಾರಿಯು ಲೋಪವಿಲ್ಲದಂತೆ ಕರ್ತವ್ಯ ನಿರ್ವಹಿಸಬೇಕು. ಪ್ರತಿ ಹಂತದಲ್ಲಿ ಕೆಲಸ ಮಾಡುವಾಗ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದರು.
ಜಿಲ್ಲಾಧಿಕಾರಿ ದಿವ್ಯಪ್ರಭು, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಜಿಪಂ ಸಿಇಒ ಸ್ವರೂಪ ಟಿ.ಕೆ., ಉಪ ಪೊಲೀಸ್ ಆಯುಕ್ತ ಸಿ.ಆರ್. ರವೀಶ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಪಿ. ಶ್ರೀನಿವಾಸ, ನರಸಿಂಹಸಾ ಎಂ.ವಿ., ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ, ಸಿವಿಲ್ ನ್ಯಾಯಾಧೀಶ ಕಿರಣ ಪಿ.ಎಂ. ಪಾಟೀಲ್, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಹನುಮಂತರಾಯ ಇದ್ದರು.ಶಿಕ್ಷಕಿ ಜಯಲಕ್ಷ್ಮಿ ನಿರೂಪಿಸಿದರು. ತಹಸೀಲ್ದಾರ್ ಡಾ. ಡೊಡ್ಡಪ್ಪ ಹೂಗಾರ ವಂದಿಸಿದರು.