ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆ ಮುಖ್ಯವಾಗಿದೆ. ಕೆಪಿಎಂಇ ಕಾಯ್ದೆಯಡಿ ನೋಂದಣಿ ಆಗಿರುವ ಆಸ್ಪತ್ರೆಗಳ ಸಹಕಾರಬೇಕು. ನಕಲಿ ವೈದ್ಯರ, ನಕಲಿ ಆಸ್ಪತ್ರೆ, ನಕಲಿ ಜೌಷಧಿ ತಡೆಗಟ್ಟಲು ಅಧಿಕಾರಿಗಳ ಪ್ರತ್ಯೇಕ ತಂಡ ರಚಿಸಿ ಕ್ರಮಕೈಗೊಳ್ಳಲಾಗುತ್ತಿದೆ.
ಧಾರವಾಡ:
ಸಾರ್ವಜನಿಕರಿಂದ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ವಿರುದ್ಧ ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ, ಸಮರ್ಪಕ ಚಿಕಿತ್ಸೆ ಸಿಗದ ಕುರಿತು ದೂರುಗಳು ಬಂದಲ್ಲಿ ಕೆಪಿಎಂಇ ಕಾಯ್ದೆ ಅನುಸಾರ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಎಚ್ಚರಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಪಿಎಂಇ ಕಾಯ್ದೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಗಳ ಸಭೆ ಜರುಗಿಸಿದ ಅವರು, ಎಲ್ಲ ಆಸ್ಪತ್ರೆಗಳು ಕೆಪಿಎಂಇ ಕಾಯ್ದೆ ಪಾಲನೆ ಮಾಡುವುದು ಕಡ್ಡಾಯ. ಅವಳಿ ನಗರದಲ್ಲಿ ಕೆಲವು ಆಸ್ಪತ್ರೆಗಳು ರೋಗಿಗಳಿಂದ ಹೆಚ್ಚು ದರ ವಸೂಲಿ ಮಾಡುತ್ತಿರುವುದು, ಸಮರ್ಪಕ ಚಿಕಿತ್ಸೆ ನೀಡದೆ ಕೊನೆಯ ಹಂತದಲ್ಲಿ ಬೇರೆ ಆಸ್ಪತ್ರೆಗಳಿಗೆ ಶಿಫಾರಸು ಮಾಡುವುದು, ಇದರಿಂದ ರೋಗಿಗಳಿಗೆ ತೊಂದರೆ ಆಗುತ್ತಿದೆ ಎಂಬ ದೂರುಗಳು ಬಂದಿವೆ. ಸಾರ್ವಜನಿಕರಿಂದ ಇಂತಹ ದೂರುಗಳು ಬಂದಲ್ಲಿ ಕಠಿಣ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆ ಮುಖ್ಯವಾಗಿದೆ. ಕೆಪಿಎಂಇ ಕಾಯ್ದೆಯಡಿ ನೋಂದಣಿ ಆಗಿರುವ ಆಸ್ಪತ್ರೆಗಳ ಸಹಕಾರಬೇಕು. ನಕಲಿ ವೈದ್ಯರ, ನಕಲಿ ಆಸ್ಪತ್ರೆ, ನಕಲಿ ಜೌಷಧಿ ತಡೆಗಟ್ಟಲು ಅಧಿಕಾರಿಗಳ ಪ್ರತ್ಯೇಕ ತಂಡ ರಚಿಸಿ ಕ್ರಮಕೈಗೊಳ್ಳಲಾಗುತ್ತಿದೆ. ನಕಲಿ ವೈದ್ಯರು, ಆಸ್ಪತ್ರೆಗಳು ಇದ್ದಲ್ಲಿ ಸಾರ್ವಜನಿಕರು ಮತ್ತು ವೈದ್ಯರು ಆರೋಗ್ಯ ಇಲಾಖೆಗೆ ಅಥವಾ ಜಿಲ್ಲಾಧಿಕಾರಿ ಕಚೇರಿಗೆ ಮಾಹಿತಿ ನೀಡಬಹುದು. ಮುಖ್ಯವಾಗಿ ಎಲ್ಲ ಆಸ್ಪತ್ರೆಗಳು ಜನರಿಗೆ ಎದ್ದು ಕಾಣುವಂತೆ ಆಸ್ಪತ್ರೆಯ ಮುಖ್ಯಸ್ಥಳದಲ್ಲಿ ತಾವು ನೀಡುವ ಚಿಕಿತ್ಸೆಗಳ ದರಪಟ್ಟಿ ಪ್ರದರ್ಶಿಸಬೇಕು. ಬೈಯೊಮೆಡಿಕಲ್ ವೇಸ್ಟ್ ನಿರ್ವಹಣೆ, ಆಸ್ಪತ್ರೆ ವೈದ್ಯರು, ಡ್ಯೂಟಿ ಡಾಕ್ಟರ್, ಕನ್ಸಲಟೆಂಟ್ ಡಾಕ್ಟರ್, ಬೆಡ್, ಅಗ್ನಿಶಾಮಕ ಸುರಕ್ಷತಾ ಕ್ರಮ, ಎಸ್‌ಟಿಪಿ ಬಗ್ಗೆ ಮತ್ತು ಸಾಂಕ್ರಾಮಿಕ, ಅಧಿಸೂಚಿತ ರೋಗಿಗಳ ಮಾಹಿತಿ ನಿರ್ವಹಿಸಬೇಕು ಎಂದು ಹೇಳಿದರು.ಇನ್ನು, ಕೆಪಿಎಂಇ ಕಾಯ್ದೆಯಡಿ ಖಾಸಗಿ ಆಸ್ಪತ್ರೆಗಳ ನೋಂದಣಿಗಾಗಿ ಹಾಗೂ ನೋಂದಣಿ ನವೀಕರಣಕ್ಕಾಗಿ ಯಾರಿಗೂ ವಿನಂತಿಸುವ ಅಗತ್ಯವಿಲ್ಲ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಪರಿಶೀಲಿಸಿ, ಕೆಪಿಎಂಇ ನಿಯಮಾನುಸಾರ ಇದ್ದಲ್ಲಿ 90 ದಿನಗಳಲ್ಲಿ ಪ್ರಮಾಣಪತ್ರ ನೀಡಲಾಗುತ್ತದೆ. ಎಲ್ಲವನ್ನು ಪಾರದರ್ಶಕತೆಯಿಂದ ಮಾಡಲಾಗುತ್ತದೆ. ಆಸ್ಪತ್ರೆಗಳ ನೋಂದಣಿ, ನವೀಕರಣ ಹಾಗೂ ಸಾರ್ವಜನಿಕ ದೂರುಗಳ ಪರಿಶೀಲನೆಗೆ ಪ್ರತ್ಯೇಕ ತಪಾಸಣಾ ಸಮಿತಿ ರಚಿಸಲಾಗಿದೆ. ದರ ಪರಿಷ್ಕರಣೆ, ಅನುದಾನ ಬಿಡುಗಡೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಭಾರತೀಯ ವೈದ್ಯಕೀಯ ಸಂಘ ಹಾಗೂ ಇತರರು ಸಲ್ಲಿಸಿರುವ ಮನವಿ ಪರಿಶೀಲಿಸಿ, ಸೂಕ್ತ ಶಿಫಾರಸುಗಳೊಂದಿಗೆ ಸರ್ಕಾರಕ್ಕೆ ರವಾನಿಸಲಾಗುತ್ತದೆ. ಆರೋಗ್ಯ ಹಾಗೂ ವೈದ್ಯಕೀಯ ಸಚಿವರ ಗಮನಕ್ಕೆ ತಂದು ಬೇಡಿಕೆ ಈಡೇರಿಸಲು ಕ್ರಮ ವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ ಕೆಪಿಎಂಇ ಕಾಯ್ದೆಯ ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಿದರು. ಜಿಪಂ ಸಿಇಒ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪ ವಿಭಾಗಾಧಿಕಾರಿ ಶಾಲಂ ಹುಸೇನ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಗಣೇಶ ಕಬಾಡಿ, ಡಾ. ದೇವರಾಜ ವಿರೂಪಾಕ್ಷಯ್ಯ ರಾಯಚೂರು ಇದ್ದರು. ವಿವಿಧ ಖಾಸಗಿ ಆಸ್ಪತ್ರೆಗಳ ವೈದ್ಯರಿದ್ದರು. ಆಸ್ಪತ್ರೆ ಪರವಾನಗಿ ರದ್ದುವೈದ್ಯ ವೃತ್ತಿ ಬಗ್ಗೆ ಅಪಾರ ಗೌರವವಿದ್ದು, ಸಾರ್ವಜನಿಕರಿಗೆ ತೊಂದರೆ, ಕೆಪಿಎಂಇ ನಿಯಮಗಳ ಉಲ್ಲಂಘನೆ ಸಹಿಸುವುದಿಲ್ಲ. ಸಾರ್ವಜನಿಕರ ದೂರುಗಳ ತನಿಖೆಯಲ್ಲಿ ಸಾಬೀತಾದರೆ, ಕಾಯ್ದೆ ಪ್ರಕಾರ ಆಸ್ಪತ್ರೆಯ ಪರವಾನಗಿ ರದ್ದು ಮಾಡಿ, ದಂಡ ವಿಧಿಸಲಾಗುವುದು. ವೈದ್ಯರು ದೇವರ ಸಮಾನ ಎಂಬ ನಂಬಿಕೆಯನ್ನು ಎಲ್ಲ ಆಸ್ಪತ್ರೆಗಳ ವೈದ್ಯರು ಉಳಿಸಬೇಕು.
ದಿವ್ಯಪ್ರಭು, ಜಿಲ್ಲಾಧಿಕಾರಿ