ಸರ್ಕಾರದ ಈ ನಡೆಯನ್ನು ಎಐಡಿಎಸ್ಒ ತೀವ್ರವಾಗಿ ಖಂಡಿಸುತ್ತದೆ.

ಹೊಸಪೇಟೆ: ರಾಜ್ಯ ಸರ್ಕಾರ ಕೆಪಿಎಸ್-ಮ್ಯಾಗ್ನೆಟ್ ಹೆಸರಿನಲ್ಲಿ 25 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಉದ್ದೇಶಿಸಿದ್ದು, ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ವತಿಯಿಂದ ನಗರದ ತಹಸೀಲ್ದಾರ್‌ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಸಂಘಟನೆಯ ವಿಜಯನಗರ ಜಿಲ್ಲಾ ಸಂಚಾಲಕ ರವಿಕಿರಣ್ ಜೆ.ಪಿ. ಮಾತನಾಡಿ, ಮಹಾನ್ ಮಾನವತಾವಾದಿ ಜ್ಯೋತಿರಾವ್ ಫುಲೆ ಅವರ ಸ್ಮರಣ ದಿನದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಲು ಮತ್ತು ಬಲಪಡಿಸಲು ಕರ್ನಾಟಕದಾದ್ಯಂತ ನ. 21ರಿಂದ 28ರ ವರೆಗೆ ಹೋರಾಟದ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಶಿಕ್ಷಣ ದಿನದ ಸಂದರ್ಭದಲ್ಲಿ, ಕರ್ನಾಟಕದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ರಾಜ್ಯದಲ್ಲಿ 6000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) ಮ್ಯಾಗ್ನೆಟ್ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಸರ್ಕಾರದ ಈ ನಡೆಯನ್ನು ಎಐಡಿಎಸ್ಒ ತೀವ್ರವಾಗಿ ಖಂಡಿಸುತ್ತದೆ. ಈ ಹೊಸ ಯೋಜನೆ ಮತ್ತೊಂದು ವಂಚನೆಯ ಪ್ರಯತ್ನವಾಗಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಲು ಮತ್ತು ಮುಚ್ಚಲು ಇದನ್ನು ರೂಪಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರವು ಈ ಹಿಂದೆ, ಸಾರ್ವಜನಿಕ ಒತ್ತಡ ಹಾಗೂ ಶಿಕ್ಷಕರ, ವಿದ್ಯಾರ್ಥಿಗಳ, ಪೋಷಕರ ಮತ್ತು ಶಿಕ್ಷಣ ತಜ್ಞರಿಂದ ವ್ಯಾಪಕ ಪ್ರತಿಭಟನೆಗಳ ನಂತರ, ಯಾವುದೇ ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ ಅಥವಾ ವಿಲೀನಗೊಳಿಸುವುದಿಲ್ಲ ಎಂದು ಭರವಸೆ ನೀಡಿತ್ತು. ಆದಾಗ್ಯೂ, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದು ಕೆಪಿಎಸ್ ಮ್ಯಾಗ್ನೆಟ್ ಶಾಲೆಯನ್ನು ಸ್ಥಾಪಿಸುವ ಈ ಯೋಜನೆಯನ್ನು ಪರಿಚಯಿಸುವ ಮೂಲಕ, ಸರ್ಕಾರ ಮತ್ತೊಮ್ಮೆ ಸಂಪನ್ಮೂಲಗಳನ್ನು ಕೇಂದ್ರೀಕರಿಸಿ, ಸಣ್ಣ ಮತ್ತು ಗ್ರಾಮೀಣ ಶಾಲೆಗಳನ್ನು ಕೊನೆಗಾಣಿಸಲು ಮತ್ತು ಅಸ್ತಿತ್ವದಲ್ಲಿರುವ ಸರ್ಕಾರಿ ಶಾಲೆಯ ವ್ಯವಸ್ಥೆಯನ್ನೇ ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ದೂರಿದರು.

ಕೆಪಿಎಸ್ ಮ್ಯಾಗ್ನೆಟ್ ಯೋಜನೆ ತಕ್ಷಣ ಹಿಂಪಡೆಯಬೇಕು. ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಮತ್ತು ಎಲ್ಲ ಶಿಕ್ಷಣ-ಪ್ರೇಮಿ ನಾಗರಿಕರು ಸೇರಿದಂತೆ ಕರ್ನಾಟಕದ ಜನತೆ ಸಾರ್ವಜನಿಕ ಶಿಕ್ಷಣವನ್ನು ರಕ್ಷಿಸಲು ಒಂದಾಗಿ ಪ್ರಬಲ ಸಾಮೂಹಿಕ ಆಂದೋಲನ ನಿರ್ಮಿಸಬೇಕು ಎಂದರು.

ಮನವಿ ಸ್ವೀಕರಿಸಿದ ಶಿರಸ್ತೇದಾರ ನವೀನ್ ಕುಮಾರ್, ಮನವಿ ಪತ್ರವನ್ನು ಶಿಕ್ಷಣ ಸಚಿವರಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು. ಎಐಡಿಎಸ್‌ಒ ಸದಸ್ಯರಾದ ಉಮಾ, ಚಂದ್ರ, ಶಕುಂತಲಾ, ಮೇರಿ, ಸಿಂಧು, ಕೀರ್ತಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.