18ರಿಂದ 20ರ ವಯಸ್ಸು ತಂತಿ ಮೇಲಿನ ನಡಿಗೆ ಇದ್ದಂತೆ. ಈ ವಯಸ್ಸಿನ ಚಂಚಲತೆಯಿಂದ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಮಾರ್ಗದಲ್ಲಿ ನಡೆಯಿರಿ. ಕಾನೂನಿನ ಅರಿವು ಬೆಳೆಸಿಕೊಂಡು ಭವಿಷ್ಯದ ಉತ್ತಮ ಪ್ರಜೆಗಳಾಗಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಪುರುಷೋತ್ತಮ್ ಸಲಹೆ ನೀಡಿದರು.
ಕಾಪು: 18ರಿಂದ 20ರ ವಯಸ್ಸು ತಂತಿ ಮೇಲಿನ ನಡಿಗೆ ಇದ್ದಂತೆ. ಈ ವಯಸ್ಸಿನ ಚಂಚಲತೆಯಿಂದ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಮಾರ್ಗದಲ್ಲಿ ನಡೆಯಿರಿ. ಕಾನೂನಿನ ಅರಿವು ಬೆಳೆಸಿಕೊಂಡು ಭವಿಷ್ಯದ ಉತ್ತಮ ಪ್ರಜೆಗಳಾಗಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಪುರುಷೋತ್ತಮ್ ಸಲಹೆ ನೀಡಿದರು.
ಮಂಗಳವಾರ ಇಲ್ಲಿನ ದಂಡತೀರ್ಥ ಪಿಯು ಕಾಲೇಜಿನಲ್ಲಿ ಪೋಕ್ಸೊ ಕಾಯ್ದೆ ಕುರಿತು ವಿಶೇಷ ಉಪನ್ಯಾಸ ನೀಡಿದರು. 18 ವರ್ಷದೊಳಗಿನ ಗಂಡು ಅಥವಾ ಹೆಣ್ಣು ಮಗುವಿನ ಜೊತೆ ಯಾವುದೇ ರೀತಿಯಲ್ಲಿ ಅಸಭ್ಯವಾಗಿ ವರ್ತಿಸಿದರೂ ಅದು ಪೋಕ್ಸೊ ಕಾಯ್ದೆ ಅಡಿಯಲ್ಲಿ ಬರುವ ಪ್ರಕರಣವಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಪೋಕ್ಸೊ ಕಾಯ್ದೆ ಕುರಿತು ಅರಿತುಕೊಳ್ಳಬೇಕು. ಪ್ರೀತಿ ಪ್ರೇಮದ ಸಂದರ್ಭದಲ್ಲಿ ಹುಡುಗಿಯ ಪೋಷಕರು ಆಕೆಗಿನ್ನೂ 18 ತುಂಬಿಲ್ಲ ಎಂದು ದೂರು ಕೊಟ್ಟರೆ ಪೋಕ್ಸೊ ಪ್ರಕರಣದಲ್ಲಿ ಹುಡುಗ ಬಂಧನಕ್ಕೊಳಗಾಗುತ್ತಾನೆ. ಹೀಗಾಗಿ ವಿದ್ಯಾರ್ಥಿಗಳು ಹದಿಹರೆಯದ ಆಕರ್ಷಣೆಗಳಿಗೊಳಗಾಗದೆ ಉತ್ತಮ ವಿದ್ಯಾರ್ಥಿಗಳಿಗಾಗಿ, ದೇಶ ಪ್ರೇಮವನ್ನು ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.ಫೋಕ್ಸೊ ಪ್ರಕರಣದ ಬಗ್ಗೆ ತಿಳಿದು, ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡದೆ ಇರುವುದು, ಸುಳ್ಳು ಪ್ರಕರಣ ದಾಖಲಿಸುವುದು ಈ ಎಲ್ಲ ಕೃತ್ಯಗಳನ್ನು ತಪ್ಪು ಎಂದು ಕಾಯ್ದೆ ತಿಳಿಸಿದ್ದು, ಶಿಕ್ಷೆಯನ್ನು ವಿಧಿಸಲಾಗಿದೆ. ಆದ್ದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಈ ಕಾಯ್ದೆಯ ಬಗ್ಗೆ ತಿಳಿದುಕೊಂಡು, ಇತರರಿಗೂ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸಿ, ಕಾನೂನು ತಿಳಿದಿಲ್ಲ ಎಂದರೆ ರಿಯಾಯತಿ ಇರುವುದಿಲ್ಲ ಎಂದರು.
ಕಾಲೇಜಿನ ಸಂಚಾಲಕ ಡಾ. ಕೆ. ಪ್ರಶಾಂತ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹದಿಹರೆಯದಲ್ಲಿ ಮಕ್ಕಳಿಗೆ ಇಂತಹ ಕಾನೂನು ರೀತಿಯ ಮಾರ್ಗದರ್ಶನ ಅಗತ್ಯವಾಗಿ ದೊರಕಿದಾಗ ಮಕ್ಕಳು ಅಪರಾಧ ಮುಕ್ತ ಬದುಕಿನಲ್ಲಿ ಜೀವನ ನಡೆಸುತ್ತಾರೆ ಎಂದು ಹೇಳಿದರು.ಪತ್ರಕರ್ತ ರಕ್ಷಿತ್ ಬೆಳಪು, ಪ್ರಾಥಮಿಕ ವಿಭಾಗದ ಮುಖ್ಯಸ್ಥ ಗೇಬ್ರಿಯಲ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು. ಪ್ರಾಂಶುಪಾಲ ನೀಲಾನಂದ ನಾಯ್ಕ್ ಸ್ವಾಗತಿಸಿ, ಶಿಕ್ಷಣ ಸಂಯೋಜಕ ಶಿವಣ್ಣ ಬಾಯರ್ ನಿರೂಪಿಸಿದರು.