ಸಾರಾಂಶ
ಒಂದು ವೇಳೆ ಅವರಿಗೆ ನನ್ನ ಕಾರ್ಯಶೈಲಿ ಬಗ್ಗೆ ಅಸಮಾಧಾನವಿದ್ದರೆ ರಾಜೀನಾಮೆ ನೀಡಲು ಹೇಳಲಿ. ಅದು ಬಿಟ್ಟು ವಾಟ್ಸಪ್ ಯುನಿವರ್ಸಿಟಿಯ ಟೀಕೆಗಳು, ಅಭಿಯಾನಕ್ಕೆ ನಾನು ತಲೆಕೆಡಿಸಿಕೊಳ್ಳಲಾರೆ ಎಂದು ಹರೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ.ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡುವಂತೆ ಜಾಲತಾಣಗಳಲ್ಲಿ ಕಾರ್ಯಕರ್ತರ ಅಭಿಯಾನ ತೀವ್ರಗೊಂಡಿರುವಂತೆಯೇ ಸುದ್ದಿಗೋಷ್ಠಿ ಕರೆದು ಮಾತನಾಡಿದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ನಾನು ರಾಜಿನಾಮೆ ನೀಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಯಾರೋ ರಾಜಿನಾಮೆ ಕೇಳಿದ್ದಾರೆ ಎಂದು ರಾಜಿನಾಮೆ ನೀಡಲು ಸಾಧ್ಯವಿಲ್ಲ. ಪಕ್ಷದ ಜಿಲ್ಲಾ ಮಟ್ಟದ ಪದಾಧಿಕಾರಿಗಳು, ಮುಖಂಡರು ನನ್ನನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದಾರೆ. ಒಂದು ವೇಳೆ ಅವರಿಗೆ ನನ್ನ ಕಾರ್ಯಶೈಲಿ ಬಗ್ಗೆ ಅಸಮಾಧಾನವಿದ್ದರೆ ರಾಜೀನಾಮೆ ನೀಡಲು ಹೇಳಲಿ. ಅದು ಬಿಟ್ಟು ವಾಟ್ಸಪ್ ಯುನಿವರ್ಸಿಟಿಯ ಟೀಕೆಗಳು, ಅಭಿಯಾನಕ್ಕೆ ನಾನು ತಲೆಕೆಡಿಸಿಕೊಳ್ಳಲಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಸಾಮಾನ್ಯ ಕಾರ್ಯಕರ್ತನಾಗಿದ್ದು, ಹಂತಹಂತವಾಗಿ ನಾನಾ ಜವಾಬ್ದಾರಿ ವಹಿಸಿಕೊಂಡ ಬಳಿಕ ಜಿಲ್ಲಾಧ್ಯಕ್ಷನಾಗಿದ್ದೇನೆ. ಈ ಹಿಂದೆ ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ ಸೋತಾಗ ಯಾವ ಅಧ್ಯಕ್ಷರೂ ರಾಜಿನಾಮೆ ನೀಡಲಿಲ್ಲ ಎಂದರು.ಕೇಂದ್ರ ದ್ವೇಷ ರಾಜಕಾರಣ ಬಿಡಲಿ: ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನ ಪಡೆದ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೇರುವ ಸಿದ್ಧತೆಯಲ್ಲಿದೆ. ನೂತನ ಸರ್ಕಾರ ದ್ವೇಷ ರಾಜಕಾರಣ ಬಿಟ್ಟು ಆಡಳಿತ ನಡೆಸಲಿ. ಇಡಿ, ಐಟಿ ಸ್ವಾಯತ್ತ ಸಂಸ್ಥೆಗಳಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡಲಿ ಎಂದರು.ಬಿಜೆಪಿ ಹಿಂದೆ ಕಾಂಗ್ರೆಸ್ ಮುಕ್ತ ಭಾರತ ಘೋಷಣೆ ಮಾಡಿ ಈಗ ಸರ್ಕಾರ ರಚನೆಗೆ ಕಸರತ್ತು ಮಾಡುತ್ತಿದೆ. ಬಿಜೆಪಿಯವರು ಕಾಂಗ್ರೆಸ್‌ನ್ನು ದೂಷಣೆ ಮಾಡುವುದಕ್ಕಿಂತ ಚುನಾವಣೆಯಲ್ಲಿ ನೀಡಿದ ಭರವಸೆ ಈಡೇರಿಸಲಿ. ಬಡವರು, ಸಾಮಾನ್ಯ ಜನರ ಪರವಾಗಿ ಆಡಳಿತ ನಡೆಸಲಿ ಎಂದು ಅವರು ಹೇಳಿದರು.
ದ.ಕ. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಉಪಾಧ್ಯಕ್ಷ ಸುಭೋದಯ ಆಳ್ವ, ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರಜ್‌ಪಾಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಸುರೇಂದ್ರ ಕಂಬ್ಳಿ, ಪ್ರಧಾನ ಕಾರ್ಯದರ್ಶಿಗಳಾದ ಭರತೇಶ್ ಅಮೀನ್, ಜಿತೇಂದ್ರ ಸುವರ್ಣ, ಜಯಶೀಲ ಅಡ್ಯಂತಾಯ, ಎನ್‌ಎಸ್‌ಯುಐ ಅಧ್ಯಕ್ಷ ಸುಹಾನ್ ಆಳ್ವ ಇದ್ದರು.