ಸಾರಾಂಶ
ಬಳ್ಳಾರಿ: ಜಾನಪದ ಕಲಾ ಪ್ರಕಾರಗಳ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕಾದ ಜವಾಬ್ದಾರಿ ಜಾನಪದ ಕಲಾವಿದರ ಮೇಲಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಹೇಳಿದರು.ನಗರದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ದರೋಜಿಯ ನಾಡೋಜ ಬುರ್ರಕಥಾ ಈರಮ್ಮ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಈರಮ್ಮನವರ 10ನೇ ಪುಣ್ಯಸ್ಮರಣೆ, ನಾಡೋಜ ಬುರ್ರಕಥಾ ದರೋಜಿ ಈರಮ್ಮ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಆಧುನಿಕ ಮಾಧ್ಯಮಗಳ ಭರಾಟೆಯಲ್ಲಿ ಜಾನಪದ ಕಲೆಗಳ ಮೂಲಕ್ಕೆ ಧಕ್ಕೆಯಾಗುವ ಆತಂಕ ಎದುರಾಗಿದೆ. ಆದರೆ, ಇದಕ್ಕೆ ಆಸ್ಪದ ನೀಡಬಾರದು. ಒಂದು ವೇಳೆ ಮೂಲ ಕಲೆಗೆ ಧಕ್ಕೆಯಾದರೆ ಪಾರಂಪರಿಕ ಕಲೆಯ ನಾಶಕ್ಕೆ ನಾವೇ ಅಡಿಪಾಯ ಹಾಕಿದಂತಾಗುತ್ತದೆ ಎಂದು ಎಚ್ಚರಿಸಿದರು.ಇದೇ ವೇಳೆ ದರೋಜಿ ಈರಮ್ಮನವರ ಜೊತೆಗಿನ ಒಡನಾಟ ಹಾಗೂ ಈರಮ್ಮನವರಿಗಿದ್ದ ಅಗಾಧ ನೆನಪಿನ ಶಕ್ತಿ ಹಾಗೂ ಕಾವ್ಯಗಳನ್ನು ಹೇಳುವ ಪರಿಯನ್ನು ಸ್ಮರಿಸಿಕೊಂಡ ಪ್ರೊ.ಬಿ.ಕೆ.ರವಿ, ಜಾನಪದ ಕಲಾಪ್ರಕಾರಗಳ ಜೊತೆಗೆ ಕಲಾವಿದರನ್ನು ರಕ್ಷಣೆ ಮಾಡಿಕೊಳ್ಳುವ ತುರ್ತು ಅಗತ್ಯವಿದೆ. ಈ ವಿಚಾರದಲ್ಲಿ ದರೋಜಿ ಈರಮ್ಮನವರು ಮಂಡಿಸಿದ ಛಾಯಾಚಿತ್ರಗಳ ಸಂಗ್ರಹ, ಮಹಾಕಾವ್ಯಗಳು ದಾಖಲೀಕರಣಗೊಂಡಿರುವುದು ಒಂದಷ್ಟು ಸಮಾಧಾನ ಮೂಡಿಸಿದೆ ಎಂದು ಹೇಳಿದರು.
ಸಮಾರಂಭದ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಹಂಪಿ ಕನ್ನಡ ವಿವಿಯ ಬುಡಕಟ್ಟು ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಎಂ.ಮೇತ್ರಿ ಮಾತನಾಡಿ, ದರೋಜಿ ಈರಮ್ಮ ಊಹೆಗೂ ನಿಲುಕದ ಮಹಾಕಾವ್ಯ. ಸಾವಿರಾರು ಕಾವ್ಯಗಳನ್ನು ನಿರ್ಗಳವಾಗಿ ಹೇಳುತ್ತಿದ್ದ ಅವರು ಇಂದಿಗೂ ನಮಗೆ ಸೋಜಿಗದ ಸಂಗತಿಯಾಗಿಯೇ ಉಳಿದಿದ್ದಾರೆ ಎಂದರು.ಹಂಪಿ ಕನ್ನಡ ವಿವಿಯ ಸಮಾಜ ವಿಜ್ಞಾನಗಳ ನಿಕಾಯದ ಡೀನ್ ಪ್ರೊ.ಚಲುವರಾಜು ಬುರ್ರಕಥಾ ಪರಂಪರೆಯ ಅನನ್ಯತೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಧಾರವಾಡ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ.ನಿಂಗಪ್ಪ ಮುದೇನೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಅಧಿಕಾರಿ ಚೋರನೂರು ಕೊಟ್ರಪ್ಪ, ಅಧ್ಯಕ್ಷತೆ ವಹಿಸಿದ್ದ ವೀವಿ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್ ಹಾಗೂ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಆಡಳಿತ ಮಂಡಳಿ ಅಧ್ಯಕ್ಷ ಎಂ.ಶರಣ ಬಸವನಗೌಡ ಮಾತನಾಡಿದರು.
ಹಳೆ ದರೋಜಿಯ ಬುರ್ರಕಥಾ ಶಿವಮ್ಮ, ಡಾ.ನಿಂಗಪ್ಪ ಮುದೇನೂರು ಹಾಗೂ ಚೋರನೂರು ಕೊಟ್ರಪ್ಪ ಅವರಿಗೆ ಪ್ರಸಕ್ತ ಸಾಲಿನ ನಾಡೋಜ ಬುರ್ರಕಥಾ ಈರಮ್ಮ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕರ್ನಾಟಕ ಜಾನಪದ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಅಶ್ವರಾಮಣ್ಣ, ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿ.ಮಂಜುನಾಥ, ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಣ್ಣ ಮಾರೆಪ್ಪ, ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ವೀವಿ ಸಂಘದ ಮೇಟಿ ಪಂಪನಗೌಡ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ನಾಡೋಜ ಬುರ್ರಕಥಾ ಈರಮ್ಮ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷ ಡಾ.ಅಶ್ವರಾಮು ಪ್ರಾಸ್ತಾವಿಕ ಮಾತನಾಡಿದರು.ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಸತೀಶ್ ಹಿರೇಮಠ ಹಾಗೂ ಆಲಂಬಾಷಾ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮ ಮುನ್ನ ದೊಡ್ಡಬಸವ ಗವಾಯಿ ಡಿ.ಕಗ್ಗಲ್ ಅವರು ಕನ್ನಡಗೀತೆಗಳು ಹಾಗೂ ವಚನ ಗಾಯನ ಪ್ರಸ್ತುತಪಡಿಸಿದರು. ತಿಪ್ಪೇಸ್ವಾಮಿ ಮುದ್ದಟನೂರು ಹಾರ್ಮೋನಿಯಂ ಹಾಗೂ ಯೋಗೀಶ್ ಸಂಗನಕಲ್ಲು ತಬಲಾ ಸಾಥ್ ನೀಡಿದರು.ಚಿತ್ರಕಲಾವಿದ ಮಂಜುನಾಥ ಗೋವಿಂದವಾಡ ಅವರ ಕುಂಚದಲ್ಲಿ ಅರಳಿದ ದರೋಜಿ ಈರಮ್ಮನವರ ರೇಖಾಚಿತ್ರಗಳ ಪ್ರದರ್ಶನ ಗಮನ ಸೆಳೆಯಿತು.