ಸಿಎಂ ಸ್ಥಾನಕ್ಕೆ ಅವಮಾನ ಮಾಡಬೇಡಿ : ವಿಧಾನ ಪರಿಷತ್‌ ಸದಸ್ಯ ಸಿ. ಟಿ.ರವಿ ವ್ಯಂಗ್ಯ

| N/A | Published : Mar 07 2025, 11:46 PM IST / Updated: Mar 08 2025, 02:27 PM IST

ct ravi
ಸಿಎಂ ಸ್ಥಾನಕ್ಕೆ ಅವಮಾನ ಮಾಡಬೇಡಿ : ವಿಧಾನ ಪರಿಷತ್‌ ಸದಸ್ಯ ಸಿ. ಟಿ.ರವಿ ವ್ಯಂಗ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಪಕ್ಷಕ್ಕೆ ಜನ 138 ಸೀಟ್ ಕೊಟ್ಟಿದ್ದಾರೆ. ಇಳಿಸುವುದು ಏರಿಸುವುದು ಅವರ ಪಕ್ಷಕ್ಕೆ ಸಂಬಂಧಪಟ್ಟದ್ದು. ಆದರೂ ಸಿದ್ದರಾಮಯ್ಯ ಹಿರಿಯರು. ಅವರಿಗೆ ಅವಮಾನ ಆಗಬಾರದಲ್ವಾ ಎಂದರು.

ಹುಬ್ಬಳ್ಳಿ: ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಇಳಿಸುವುದಾದರೆ ಒಂದೇ ದಿನಕ್ಕೆ ಇಳಿಸಿಬಿಡಿ. ಆದರೆ, ಪ್ರತಿದಿನ ಅಪಮಾನ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯ ಅಂಥ ಹಿರಿಯರಿಗೆ ಈ ರೀತಿ ಅವಮಾನ ಮಾಡಬೇಡಿ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ವ್ಯಂಗ್ಯವಾಗಿ ನುಡಿದರು.

ಮಾಧ್ಯಮದ ಜತೆಗೆ ಮಾತನಾಡಿದ ಅವರು, ಸಿಎಂ ಅವರನ್ನು ಏರಿಸುವುದು ಇಳಿಸುವುದು ನಮಗೆ ಸಂಬಂಧಪಟ್ಟದ್ದಲ್ಲ. ಕಾಂಗ್ರೆಸ್ ಪಕ್ಷಕ್ಕೆ ಜನ 138 ಸೀಟ್ ಕೊಟ್ಟಿದ್ದಾರೆ. ಇಳಿಸುವುದು ಏರಿಸುವುದು ಅವರ ಪಕ್ಷಕ್ಕೆ ಸಂಬಂಧಪಟ್ಟದ್ದು. ಆದರೂ ಸಿದ್ದರಾಮಯ್ಯ ಹಿರಿಯರು. ಅವರಿಗೆ ಅವಮಾನ ಆಗಬಾರದಲ್ವಾ. ಅದಕ್ಕೆ ಈ ಮಾತನ್ನು ಹೇಳುತ್ತಿದ್ದೇನೆ ಎಂದರು.

ಕಾಂಗ್ರೆಸ್‌ ಕುಮ್ಮಕ್ಕು

ಹಳೇಹುಬ್ಬಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಹಾಕಿದಂತಹ ಬಾಂಧವರ ಕೇಸ್ ಹಿಂಪಡೆಯಲು ಶಿಫಾರಸು ಮಾಡಿ ಕೋರ್ಟಿಗೆ ಕಳುಹಿಸಿದ್ದಾರೆ. ನಾಳೆ ನಿಮ್ಮ ರಕ್ಷಣೆ ನೀವೇ ಮಾಡಿಕೊಳ್ಳಬೇಕು. ಆ ರೀತಿ ಸಂದೇಶವನ್ನು ಕಾಂಗ್ರೆಸ್‌ನವರು ಕೊಟ್ಟಿದ್ದಾರೆ. ಶಾಂತಿದೂತರೇ ಸ್ಟೇಷನ್ನಿಗಾದರೂ ಬೆಂಕಿ ಹಾಕಿ, ಊರಿಗಾದರೂ ಬೆಂಕಿ ಹಾಕಿ ನಾವು ನಿಮ್ಮ ಜೊತೆಗಿದ್ದೇವೆ. ನೀವೆಲ್ಲರೂ ನನ್ನ ಸಹೋದರರು ಏನಾದರೂ ಮಾಡಿ ನಮಗೆ ಮತ ಹಾಕಿ. ನಿಮ್ಮ ಜೊತೆ ನಾವಿದ್ದೇವೆ ಎಂಬ ಕೆಟ್ಟ ಸಂದೇಶವನ್ನು ಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದರು.

ಹಳೆ ಹುಬ್ಬಳ್ಳಿಯ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ ಮೈಸೂರಿನಲ್ಲಿನ ಘಟನೆ ಆಗುತ್ತಿರಲಿಲ್ಲ. ಈ ರೀತಿ ಕುಮ್ಮಕ್ಕು ಕೊಡುವುದರಿಂದಲೇ ನಾವೇನು ಮಾಡಿದರೂ ನಡೆಯುತ್ತದೆ ಎಂದು ಅವರಿಗೆ ಅನಿಸಿದೆ. ನಿಮ್ಮಪ್ಪನ ಆಸ್ತಿಯಲ್ಲೂ ನಮ್ಮಪ್ಪನ ಆಸ್ತಿಯಲ್ಲೂ ಅವರಿಗೆ ಪಾಲು ಕೊಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಬಜೆಟ್‌ ನೋಡಿ ಜಿನ್ನಾ ಆತ್ಮಕ್ಕೆ ಖುಷಿ

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ ನೋಡಿ ಪಾಕಿಸ್ತಾನ ಮಾಡಿದಂತಹ ಮಹ್ಮದ್ ಅಲಿ ಜಿನ್ನಾ ಆತ್ಮಕ್ಕೆ ಬಹಳ ಖುಷಿ ಆಗಿದೆ. ಇಂಥವರೆಲ್ಲ ಇರುತ್ತಾರೆ ಅಂತ ಗೊತ್ತಾಗಿದ್ದರೆ ಜಿನ್ನಾ ಪಾಕಿಸ್ತಾನ ಬೇಡ ಅಂತ ಇಲ್ಲೇ ಇರುತ್ತಿದ್ದ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ. ಬಜೆಟ್‌ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಿನ್ನಾ ಅಪ್ಪನಕ್ಕಿಂತ ಹೆಚ್ಚಿನವರು ಇಲ್ಲೇ ಇದ್ದರೂ ಸುಮ್ಮನೆ ಪಾಕಿಸ್ತಾನಕ್ಕೆ ಹೋದೆವು ಅಂತ ಪಾಕಿಸ್ತಾನಕ್ಕೆ ಹೋದವರು ಬಾಯಿ ಬಡೆದುಕೊಳ್ಳುತ್ತಿದ್ದಾರೆ. ಎಷ್ಟೋ ಊರುಗಳಲ್ಲಿ ಹೆಣ ಹೂಳಲಿಕ್ಕೂ ಸ್ಥಳವಿಲ್ಲ. ಇನ್ನೊಂದು ಕಡೆ ಖಬರಸ್ಥಾನ ಕಾಂಪೌಂಡ್ ನಿರ್ಮಾಣಕ್ಕೆ ₹150 ಕೋಟಿ ಕೊಟ್ಟಿರುವುದು ವಿಪರ್ಯಾಸಕರ ಎಂದರು.

ಅಂಬೇಡ್ಕರ್ ಮತೀಯ ಆಧಾರಿತ ಮೀಸಲಾತಿಗೆ ವಿರೋಧ ಮಾಡಿದ್ದರು. ಆದರೆ, ಇವರು ಗುತ್ತಿಗೆ ವಿಚಾರದಲ್ಲೂ ಸಾವಿರ ಕೋಟಿ ಕೊಟ್ಟಿದ್ದಾರೆ. ಮಹಮ್ಮದ್ ಅಲಿ ಜಿನ್ನಾ ಆತ್ಮಕ್ಕೆ ಎಷ್ಟು ಖುಷಿಯಾಗಿರುತ್ತದೆ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ. ಎಲ್ಲಿದೆ ಸಮಾನತೆ ? ಅವರಿಗೆ ದೆಹಲಿ ಚುನಾವಣೆ ನಂತರ ಶೂನ್ಯದ ಮೇಲೆ ಬಹಳ ನಂಬಿಕೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.