ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸಬೇಡಿ: ಕೊಪ್ಪಳ ಜಿಲ್ಲಾಧಿಕಾರಿ ನಳಿನ್‌ ಅತುಲ್‌

| Published : Feb 10 2024, 01:48 AM IST

ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸಬೇಡಿ: ಕೊಪ್ಪಳ ಜಿಲ್ಲಾಧಿಕಾರಿ ನಳಿನ್‌ ಅತುಲ್‌
Share this Article
  • FB
  • TW
  • Linkdin
  • Email

ಸಾರಾಂಶ

ನಿಮ್ಮ ಇಲಾಖೆಗಳ ವ್ಯಾಪ್ತಿಯಲ್ಲಿ ಅರ್ಜಿ ಬರುತ್ತಿದ್ದರೆ ಅವುಗಳನ್ನು ವಿಳಂಬ ಮಾಡದೇ ಪರಿಹಾರ ಮಾಡಿಕೊಡಬೇಕು. ಸುಖಾಸುಮ್ಮನೆ ರೈತರಿಗೆ, ಸಾರ್ವಜನಿಕರಿಗೆ ತೊಂದರೆ ನೀಡಿದರೆ ನಿಮ್ಮ ಮೇಲೆ ಸೂಕ್ತ ಕ್ರಮ ಕೈಕೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಯಲಬುರ್ಗಾ: ಸಾರ್ವಜನಿಕರು ತಮ್ಮ ಯಾವುದೇ ಸರ್ಕಾರಿ ಕೆಲಸಗಳಿಗಾಗಿ ಕಚೇರಿಗಳಿಗೆ ವಿನಾಕಾರಣ ಅಲೆದಾಡುವಂತೆ ಮಾಡಬಾರದು. ಅವರ ಸಮಸ್ಯೆಗಳಿಗೆ ತಕ್ಷಣವೇ ಎಲ್ಲ ತಹಸೀಲ್ದಾರರು, ಇಒಗಳು ಸೇರಿದಂತೆ ಅಧಿಕಾರಿಗಳು ಸ್ಪಂದಿಸಿ ಇತ್ಯರ್ಥ ಪಡಿಸಿಕೊಡುವ ಕಾರ್ಯಕ್ಕೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ನಳಿನ್ ಅತುಲ್ ಹೇಳಿದರು.

ತಾಲೂಕಿನ ಚಿಕ್ಕವಂಕಲಕುಂಟಾ ಗ್ರಾಮದ ಮಾರುತೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ಜನತಾ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಿಮ್ಮ ಇಲಾಖೆಗಳ ವ್ಯಾಪ್ತಿಯಲ್ಲಿ ಅರ್ಜಿ ಬರುತ್ತಿದ್ದರೆ ಅವುಗಳನ್ನು ವಿಳಂಬ ಮಾಡದೇ ಪರಿಹಾರ ಮಾಡಿಕೊಡಬೇಕು. ಸುಖಾಸುಮ್ಮನೆ ರೈತರಿಗೆ, ಸಾರ್ವಜನಿಕರಿಗೆ ತೊಂದರೆ ನೀಡಿದರೆ ನಿಮ್ಮ ಮೇಲೆ ಸೂಕ್ತ ಕ್ರಮ ಕೈಕೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಜನಪರ ಯೋಜನೆಗಳಾಗಿವೆ. ಅವುಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು. ಈ ಯೋಜನೆಗಳು ಸೇರಿದಂತೆ ಸರ್ಕಾರದ ಇನ್ನಿತರ ಯೋಜನೆಗಳನ್ನು ಯಾರು ಪಡೆದಿಲ್ಲ. ಅಂತಹವರು ಅಗತ್ಯ ದಾಖಲಾತಿಗಳನ್ನು ನೀಡುವ ಮೂಲಕ ಅವುಗಳನ್ನು ಪಡೆದುಕೊಳ್ಳಲಿ ಎನ್ನುವ ಉದ್ದೇಶದಿಂದ ಸರ್ಕಾರವೇ ನಿಮ್ಮೆಲ್ಲರ ಮನೆ ಬಾಗಿಲಿಗೆ ಬಂದಿದೆ. ಸರ್ಕಾರದ ಯೋಜನೆಗಳಿಂದ ಯಾರು ವಂಚಿತರಾಗಬಾರೆಂದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಪ್ರತಿಯೊಬ್ಬರು ಈ ಎಲ್ಲ ಯೋಜನೆಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ಬರ ಹಿನ್ನೆಲೆಯಲ್ಲಿ ರೈತರಿಗೆ ಮಧ್ಯಂತರ ಪರಿಹಾರವಾಗಿ ಪ್ರತಿ ರೈತರಿಗೆ ₹೨೦೦೦ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ ೧,೦೦,೯೦೦ ರೈತರಿಗೆ ₹೨೦ ಕೋಟಿ ಪರಿಹಾರ ಜಮೆ ಮಾಡಲಾಗಿದೆ. ಇನ್ನುಳಿದ ರೈತರಿಗೂ ಹಂತಹಂತವಾಗಿ ಜಮಾ ಮಾಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಇದುವರೆಗೆ ಜುಲೈದಿಂದ ಡಿಸೆಂಬರವರೆಗೆ ೨,೮೯,೦೬೮ ಕಾರ್ಡುದಾರರಿಗೆ ೧೦೧,೮೮,೬೧,೫೧೦ ರೂ ಅನುದಾನ ವಿತರಿಸಲಾಗಿದೆ.ಗೃಹ ಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೆ ೩,೧೩,೧೨೪ ಫಲಾನುಭವಿಗಳಿಗೆ ೨೮೫ ಕೋಟಿ ರೂ ನೀಡಲಾಗಿದೆ.ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೆ ೨,೬೫,೦೦೦ ಫಲಾನುಭವಿಗಳು ಹೆಸರು ನೋಂದಾಯಿಸಿಕೊಂಡು ಸದುಪಯೋಗ ಪಡೆದುಕೊಂಡಿದ್ದಾರೆ.

ಇನ್ನು ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಸೌಕರ್ಯ ಸಿಗುತ್ತಿದೆ. ಜಿಲ್ಲೆಯಲ್ಲಿ ತಿಂಗಳಿಗೆ ೩೫ ಲಕ್ಷ ಟ್ರಿಪ್ ಆಗುತ್ತಿದೆ. ಈ ಯೋಜನೆ ಜಾರಿಯಾದಾಗಿನಿಂದ ಪ್ರತಿ ಮಹಿಳೆಗೆ ಪ್ರತಿ ಮಾಹೆ ₹೨ಸಾವಿರ ಉಳಿತಾಯವಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ಪ್ರತಿ ಕುಟುಂಬಕ್ಕೆ ತಿಂಗಳಿಗೆ ₹೫೦೦೦ ಸಿಗುತ್ತಿದೆ. ಹೀಗಾಗಿ ಬಾಕಿ ಉಳಿದ ಅರ್ಹರು ಹೆಸರು ನೋಂದಾಯಿಸಿಕೊಂಡು ವಿವಿಧ ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.ಅಭೂತಪೂರ್ವ ಸ್ಪಂದನೆ:ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟಾ ಸಮುದಾಯಭವನದಲ್ಲಿ ಶುಕ್ರವಾರ ನಡೆದ ಜನತಾ ದರ್ಶನ ಕಾರ್ಯಕ್ರಮಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ತಾಲೂಕಿನ ಮೂಲೆ ಮೂಲೆಗಳಿಂದ ಅಂಗವಿಕಲರು, ವಯೋವೃದ್ಧರು, ಗರ್ಭಿಣಿಯರು, ಬಾಣಂತಿಯರು ಸೇರಿದಂತೆ ಸಾವಿರಾರು ಜನರು ಬೆಳಿಗ್ಗೆಯಿಂದಲೇ ತಂತಮ್ಮ ಸಮಸ್ಯೆಗಳಿಗೆ ಹರಿಹಾರ ಕಂಡುಕೊಳ್ಳಲು ಆಗಮಿಸಿದ್ದರು.ಬಹುತೇಕ ಅರ್ಜಿಗಳಲ್ಲಿ ಗೃಹ ಲಕ್ಷ್ಮೀ ಯೋಜನೆಯಡಿ ₹೨ಸಾವಿರ ಬಂದಿಲ್ಲ ಎನ್ನುವ ಅರ್ಜಿ ಬಂದಿದ್ದವು. ಇನ್ನು ಕೆಲವರು ಹೊಲಗಳ ಸರ್ವೆ ಕಾರ್ಯ ಮಾಡಿಕೊಡುತ್ತಿಲ್ಲ. ಗೃಹ ಜ್ಯೋತಿ ಯೋಜನೆಯಲ್ಲಿ ನಮಗೆ ಹೆಚ್ಚು ಬಿಲ್ಲು ಪಾವತಿ ಆಗುತ್ತಿದೆ ಹೀಗೆ ನೂರಾರು ಸಮಸ್ಯೆಗಳನ್ನು ಹೊತ್ತು ಆಯಾ ಅಧಿಕಾರಿಗಳಿಗೆ ಅಹವಾಲು ಸಲ್ಲಿಸಿ ಮನವಿ ಮಾಡಿದರು.ಬಳಿಕ ಜಿಲ್ಲಾಧಿಕಾರಿ ನಳಿನ್ ಅತುಲ್ ಪ್ರತಿಕ್ರಿಯಿಸಿ ನಿಮ್ಮೆಲ್ಲರ ಅರ್ಜಿಗಳನ್ನು ಪರಿಶೀಲಿಸಿ ಸಮಸ್ಯೆ ಇತ್ಯರ್ಥ ಪಡಿಸಿಕೊಡಲಾಗುವುದು. ಜೊತೆಗೆ ನಿಮ್ಮ ದಾಖಲೆಗಳನ್ನು ಗಮನಿಸಿ ಯೋಜನೆಗಳನ್ನು ದೊರೆಕಿಸಿಕೊಡುವುದಾಗಿ ಭರವಸೆ ನೀಡಿದರು.ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರೇವಂಕಲಕುಂಟಾ ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಬಸವರಾಜ ತಳವಾರ ಸಭೆ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಮಂಜುನಾಥ ಶಾಸ್ತ್ರೀ ಹಿರೇಮಠ, ಸಿಇಒ ರಾಹುಲ್ ರತ್ನಂ ಪಾಂಡೆ, ಎಸ್ಪಿ ಯಶೋದಾ ವಂಟಿಗೋಡಿ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ, ಉಪ ಅರಣ್ಯಾಧಿಕಾರಿ ಚಂದ್ರಣ್ಣ, ವಾರ್ತಾ ಇಲಾಖೆ ಅಧಿಕಾರಿ ಗವಿಸಿದ್ದಪ್ಪ, ಹೇಮಂತರಾಜ್, ಎಸ್.ಎಂ. ದ್ಯಾಮಣ್ಣನವರ್, ಪ್ರಕಾಶ ಪಾಟೀಲ, ತಹಸೀಲ್ದಾರ ಬಸವರಾಜ ತೆನ್ನಳ್ಳಿ, ತಾಪಂ ಇಒ ಸಂತೋಷ ಪಾಟೀಲ ಬಿರಾದಾರ, ತಾಲೂಕಾಧಿಕಾರಿಗಳಾದ ಬೆಟದಪ್ಪ ಮಾಳೆಕೊಪ್ಪ, ಪ್ರಾಣೇಶ ಹಾದಿಮನಿ, ಖಲುಮುದ್ದೀನ್, ಲಿಂಗನಗೌಡ ಪಾಟೀಲ, ರಮೇಶ ಚಿಣಗಿ, ಶಿವಶಂಕರ ಕರಡಕಲ್ ಇದ್ದರು.