ವಾಲ್ಮೀಕಿ, ಅಂಬೇಡ್ಕರ್, ಬುದ್ಧರನ್ನು ಒಂದು ಜಾತಿಗೆ ಸೀಮಿತಗೊಳಿಸದಿರಿ

| Published : Oct 28 2024, 12:56 AM IST

ವಾಲ್ಮೀಕಿ, ಅಂಬೇಡ್ಕರ್, ಬುದ್ಧರನ್ನು ಒಂದು ಜಾತಿಗೆ ಸೀಮಿತಗೊಳಿಸದಿರಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಯಕ್ರಮದಲ್ಲಿ ಮಿಮಿಕ್ರಿ ಕಲಾವಿದ ಗೋಪಿಯವರಿಂದ ಮಿಮಿಕ್ರಿ ನಡೆಸಿಕೊಡಲಾಯಿತು. ಜಾನಪದ ಕಲಾವಿದ ನಂಜಪ್ಪ, ಕೃಷಿಕರಾದ ನಾಗರಾಜು, ಕೊಪ್ಪ ನಾಗೇಶ್, ಶಿಕ್ಷಕರಾದ ಮುನಿರಾಜುರವರನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ವಾಲ್ಮೀಕಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಬುದ್ಧರಂಥ ಮಹಾತ್ಮರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಿ ಅವರಿಗೆ ಅವಮಾನ ಮಾಡಬೇಡಿ ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಡಾ.ಎ.ಬಿ.ರಾಮಚಂದ್ರಪ್ಪ ಹೇಳಿದರು.

ಪಟ್ಟಣದ ಶ್ರೀ ಸತ್ಯ ಗಣಪತಿ ಆಸ್ಥಾನ ಮಂಟಪದಲ್ಲಿ ತಾಲೂಕು ವಾಲ್ಮೀಕಿ ಸಮಾಜದ ಆಶ್ರಯದಲ್ಲಿ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಾಲ್ಮೀಕಿಯವರು ರಚಿಸಿದ್ದ ರಾಮಾಯಣ ಇಡೀ ದೇಶದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ರಾಮಾಯಣ ಪ್ರಪಂಚದ ಅಧ್ಯಯನದ ವಸ್ತುವಾಗಿದೆ. ಡಾ.ಅಂಬೇಡ್ಕರ್ ರವರು ರಚಿಸಿರುವ ಸಂವಿಧಾನ ಬಡವ, ಶ್ರೀಮಂತ ಎಂಬ ತಾರತಮ್ಯವಿಲ್ಲದೇ ಎಲ್ಲರೂ ಸಮಾನರು ಎಂಬುದನ್ನು ಸಾರಿ ಹೇಳುತ್ತದೆ ಎಂದು ಹೇಳಿದರು.

ರಾಮ ರಾಜ್ಯದ ಕನಸು ಕಂಡಿದ್ದ ಜನರು ಇಂದು ರಾಮನ ಹೆಸರಿನಲ್ಲಿ ಕಚ್ಚಾಡುತ್ತಿರುವುದು ಅಸಹ್ಯ ತರಿಸಿದೆ. ಜಾತಿ ಜಾತಿಗಳ ನಡುವೆ ಬಿರುಕು ಬಿಟ್ಟಿದೆ. ಕೋಮು, ಸೌಹಾರ್ದತೆ ಹಾಳಾಗುತ್ತಿದೆ ಎಂದು ಡಾ.ಎ.ಬಿ.ರಾಮಚಂದ್ರಪ್ಪ ವಿಷಾದಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಗ್ರಾಮದೇವತೆ ಉಡುಸಲಮ್ಮ ದೇವಾಲಯದಿಂದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದವರೆಗೂ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರವನ್ನು ಜಾನಪದ ಕಲಾಮೇಳಗಳೊಂದಿಗೆ ಭವ್ಯ ಮೆರವಣಿಗೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಲ್ಮೀಕಿ ಸಮಾಜದ ಗೌರವಾಧ್ಯಕ್ಷ ಶಂಕರಯ್ಯ ವಹಿಸಿದ್ದರು. ಸಮಾಜದ ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷ ಕೃಷ್ಣಪ್ಪ, ಕಾರ್ಯದರ್ಶಿ ಶಿವಣ್ಣ, ಮುಖಂಡರಾದ ಕೆಂಪರಾಜ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಉಗ್ರಪ್ಪ, ಪಟ್ಟಣ ಪಂಚಾಯ್ತಿ ಸದಸ್ಯೆ ಶೀಲಾ ಶಿವಪ್ಪನಾಯ್ಕ, ಗೋವಿಂದಪ್ಪ, ಆರ್.ಮಲ್ಲಿಕಾರ್ಜುನ್, ನಿವೃತ್ತ ಎಇಒ ಸೋಮಶೇಖರ್, ಕರಿಯಣ್ಣ, ಮಾರುತಿ, ಡೊಂಕಿಹಳ್ಳಿ ರಾಮಣ್ಣ, ದಂಡಿನಶಿವರ ಕುಮಾರ್, ಕಾಂತರಾಜು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಿಮಿಕ್ರಿ ಕಲಾವಿದ ಗೋಪಿಯವರಿಂದ ಮಿಮಿಕ್ರಿ ನಡೆಸಿಕೊಡಲಾಯಿತು. ಜಾನಪದ ಕಲಾವಿದ ನಂಜಪ್ಪ, ಕೃಷಿಕರಾದ ನಾಗರಾಜು, ಕೊಪ್ಪ ನಾಗೇಶ್, ಶಿಕ್ಷಕರಾದ ಮುನಿರಾಜುರವರನ್ನು ಗೌರವಿಸಲಾಯಿತು.