ಬಿಜೆಪಿಗರ ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಸಂಸದ ಹಿಟ್ನಾಳ

| Published : May 09 2025, 12:30 AM IST

ಸಾರಾಂಶ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಅಭಿವೃದ್ಧಿ ಸಹಿಸದ ಬಿಜೆಪಿ ನಾಯಕರು ಅಪಪ್ರಚಾರದಲ್ಲಿ ನಿರತರಾಗಿದ್ದಾರೆ. ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕಿದೆ.

ಕುಷ್ಟಗಿ:

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಮಾಡುತ್ತಿರುವ ಅಭಿವೃದ್ಧಿ ಸಹಿಸದ ಬಿಜೆಪಿಗರು ಅಪಪ್ರಚಾರ ಮಾಡುತ್ತಿದ್ದು ಯಾರು ಕಿವಿಗೊಡಬಾರದು ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ನಡೆದ ಹೋಬಳಿ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಅಭಿವೃದ್ಧಿ ಸಹಿಸದ ಬಿಜೆಪಿ ನಾಯಕರು ಅಪಪ್ರಚಾರದಲ್ಲಿ ನಿರತರಾಗಿದ್ದಾರೆ. ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಮನೆ-ಮನೆಗೆ ತಲುಪಿಸಲಾಗುತ್ತಿದೆ. ಪ್ರಚಾರ ಮಾಡುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದರು.

ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರ ಮಾರ್ಗದರ್ಶನದಲ್ಲಿ ಹೋಬಳಿ ಮಟ್ಟದ ಸಮಾಲೋಚನೆ ಸಭೆ ನಡೆಸುವ ಮೂಲಕ ಜನರ ಕಷ್ಟ, ಸುಖದಲ್ಲಿ ಬೆರೆತು ಅಭಿವೃದ್ಧಿ ಕಾರ್ಯ ಮಾಡಲಾಗುವುದು ಎಂದ ಸಂಸದರು, ಮುಂಬರುವ ಚುನಾವಣೆಯಲ್ಲಿ ವಿರೋಧ ಪಕ್ಷಕ್ಕೆ ಬುದ್ಧಿ ಕಲಿಸಬೇಕಿದೆ. ಆದ್ದರಿಂದ ನಮ್ಮ ಕಾರ್ಯಕರ್ತರು ಸಂಘಟನೆ ಮಾಡುವ ಮೂಲಕ ಪಕ್ಷಕ್ಕೆ ಬಲ ನೀಡಬೇಕು ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ನಾಲತ್ವಾಡ, ಮುಖಂಡ ದೊಡ್ಡಬಸನಗೌಡ ಪಾಟೀಲ್ ಬಯ್ಯಾಪೂರ, ಬಸನಗೌಡ ಮಾಲಿ ಪಾಟೀಲ, ವಸಂತ ಮೇಲಿನಮನಿ, ವೀರೇಶ ಗುರಿಕಾರ, ಲಾಡ್ಲೆ ಮಷಾಕ್ ದೋಟಿಹಾಳ ಅವರು ಮಾತನಾಡಿದರು.

ಈ ವೇಳೆ ಪಪಂ ಅಧ್ಯಕ್ಷ ನಾರಾಯಣಗೌಡ ಮೆದಿಕೇರಿ, ಸದಸ್ಯರಾದ ವೀರನಗೌಡ ಪಾಟೀಲ್, ಶಶಿಕಲಾ ಬಿಳೆಗುಡ್ಡ, ಬೇಬಿರೇಖಾ, ಜಿಪಂ ಮಾಜಿ ಸದಸ್ಯ ಹನಮಗೌಡ ಕಿಲ್ಲಾರಹಟ್ಟಿ, ಶ್ರೀನಿವಾಸ ನಿಡಶೇಸಿ, ಅಮರೇಶ ಕುಂಬಾರ, ಹೋಬಳಿ ಮಟ್ಟದ ವಿವಿಧ ಗ್ರಾಮಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.