ಧಾರವಾಡ:
ಹೆಚ್ಚಿನ ಅಂಕಗಳಿಕೆಯ ಧಾವಂತಕ್ಕೆ ಜಿಲ್ಲೆಯ ವಿದ್ಯಾರ್ಥಿಗಳು ಬೇರೆ ಜಿಲ್ಲೆಗಳಿಗೆ ವಿದ್ಯಾಭ್ಯಾಸಕ್ಕೆ ಮೊರೆ ಹೋಗುತ್ತಿರುವುದು ವಿಷಾದದ ಸಂಗತಿ. ವಿದ್ಯಾರ್ಜನೆಗೆ ಹೆಸರುವಾಸಿಯಾಗಿರುವ ಧಾರವಾಡ ಎಸ್ಸೆಸ್ಸೆಲ್ಸಿ ರ‍್ಯಾಂಕಿಂಗ್‌ನಲ್ಲಿ ಕುಸಿಯುತ್ತಿರುವುದು ಸಹ ಒಳ್ಳೆಯ ಸೂಚನೆ ಅಲ್ಲ ಎಂದು ಜೆಎಸ್‌ಎಸ್ ಸಂಸ್ಥೆ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಬಿಡುಗಡೆ ಮಾಡಿದ್ದ ಪರೀಕ್ಷಾ ದಿಕ್ಸೂಚಿ ಪುಸ್ತಕದ ವಿತರಣೆಯಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಶಾಲೆಯಲ್ಲಿ ಶಿಕ್ಷಕರು ಸರಿಯಾಗಿಯೇ ಪಾಠ ಮಾಡಿದರೂ ಅವರ ವಿದ್ಯಾಭ್ಯಾಕ್ಕೆ ಪೂರಕ ವಾತಾವರಣ ನಿರ್ಮಿಸುವುದು ಪಾಲಕರ, ಶಿಕ್ಷಕರ ಮತ್ತು ಶಿಕ್ಷಣ ಸಂಸ್ಥೆಗಳ ಆದ್ಯ ಕರ್ತವ್ಯ ಎಂದರು.
ಕೇವಲ ಹಣ ಪಾವತಿಸುವ ಮೂಲಕ ಟ್ಯೂಶನ್ ತರಬೇತಿ ಪಡೆದು ಮಕ್ಕಳು ಹೆಚ್ಚಿನ ಅಂಕ ಗಳಿಸಲು ಸಾಧ್ಯವಿಲ್ಲ. ಮನೆಯಲ್ಲಿ ಪಾಲಕರು ಮಕ್ಕಳ ಮೊಬೈಲ್ ಸಂಪರ್ಕದಿಂದ ದೂರವಿರಿಸಿ, ಪುಸ್ತಕದ ಜ್ಞಾನ ಬೆಳೆಸಲು ಪ್ರಯತ್ನಿಸಬೇಕು. ಸರಿಯಾದ ಪಠ್ಯಕ್ರಮ, ಶಿಸ್ತು, ಸಂಯಮವನ್ನು ಗುರುಗಳು ಶಾಲೆಯಲ್ಲಿ ಕಲಿಸಬೇಕಾಗುತ್ತದೆ ಎಂದು ಹೇಳಿದರು.ಡಾ. ವೀರೇಂದ್ರ ಹೆಗ್ಗಡೆಯವರು ಪರೀಕ್ಷೆಗೆ ಮಕ್ಕಳಿಗೆ ಅನುಕೂಲವಾಗಲೆಂದು ಈ ಮಾದರಿ ಪುಸ್ತಕ ಪ್ರಕಟಿಸಿದ್ದು, ಕನ್ನಡ, ಹಿಂದಿ, ವಿಜ್ಞಾನ, ಇಂಗ್ಲಿಷ್, ಸಮಾಜ ವಿಜ್ಞಾನ, ಗಣಿತಕ್ಕೆ ಸಂಬಂಧಿಸಿದ ಅತಿ ಮುಖ್ಯ ಮಾಹಿತಿ ಒಳಗೊಂಡಿದೆ. ಶಾಲಾ ಮುಖ್ಯಸ್ಥರು ತಪ್ಪದೇ ವಿದ್ಯಾರ್ಥಿಗಳಿಗೆ ಇದನ್ನು ತಲುಪಿಸುವ ವ್ಯವಸ್ಥೆ ಮಾಡಬೇಕು. ಈ ಪರೀಕ್ಷಾ ದಿಕ್ಸೂಚಿ ವಿದ್ಯಾರ್ಥಿಗಳ ಜೀವನದ ದಿಕ್ಕನ್ನು ಬದಲಿಸುವ ದಿಕ್ಸೂಚಿಯಾಗಲಿ ಎಂದು ಹಾರೈಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಿರೀಶ ಪದಕಿ ಮಾತನಾಡಿ, ಜೆಎಸ್ಸೆಸ್ ಸಂಸ್ಥೆಯು ಎಲ್ಲ ಮಕ್ಕಳಿಗೂ ಅನುಕೂಲವಾಗಲು ಮಾಡಿರುವ ಈ ಪ್ರಯತ್ನ ಮಾದರಿ ಕಾರ್ಯವಾಗಿದೆ. ಹೆಗ್ಗಡೆ ಅವರ ಉನ್ನತ ಶಿಕ್ಷಣದ ಕನಸು ಮೊಟಕಾಗದಿರಲಿ. ಮಹದಾಸೆಯಿಂದ 30 ಶಾಲೆ ಸೇರಿದಂತೆ 1250 ವಿದ್ಯಾರ್ಥಿಗಳಿಗೆ ಈ ಪುಸ್ತಕ ನೀಡಿದ್ದಾರೆ ಎಂದರು.
ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಮಾತನಾಡಿದರು. ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾಧ್ಯೆ ನಿರೂಪಿಸಿದರು. ಜೆಎಸ್‌ಎಸ್ ಆಡಳಿತಾಧಿಕಾರಿ ಅರಿಹಂತ ಪ್ರಸಾದ ಇದ್ದರು.