ಆಸೆಗೆ ಬಲಿಯಾಗಿ ತೋಟಗಳನ್ನು ಮಾರಬೇಡಿ

| Published : Oct 03 2025, 01:07 AM IST

ಸಾರಾಂಶ

ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನ ಬಗ್ಗೆ ಬೆಂಗಳೂರಿನ ಉದ್ಯಮಿಗಳ ಕಣ್ಣುಬಿದ್ದಿದ್ದು ಹೆಚ್ಚು ಹಣದ ಅಮಿಷ ಒಡ್ಡಿ ಭೂಮಿ ಖರೀದಿಸುತ್ತಿದ್ದಾರೆ. ಇಂತಹ ಉದ್ಯಮಿಗಳ ಬಲೆಗೆ ಸಾಕಷ್ಟು ಬೆಳೆಗಾರರು ಬಲಿಯಾಗುತ್ತಿದ್ದಾರೆ. ಇದು ಉತ್ತಮ ಬೆಳೆವಣಿಗೆಯಲ್ಲ ಒಮ್ಮೆ ಕಳೆದುಕೊಂಡ ಭೂಮಿಯನ್ನು ಮತ್ತೊಮ್ಮೆ ಪಡೆಯಲು ಸಾಧ್ಯವಿಲ್ಲ. ಮಲೆನಾಡು ಸ್ವರ್ಗವಿದ್ದಂತೆಇಲ್ಲಿ ಬದುಕಿದ್ದವರು ಮತ್ತೊಂದೆಡೆ ಬದುಕು ಕಟ್ಟಿಕೊಳ್ಳುವುದು ಕಷ್ಟವಾಗಲಿದೆ ಎಂದು ಅಭಿಪ್ರಾಯಿಸಿದರು. ನೆರಳಿನಾಶ್ರಯದಲ್ಲಿ ಬೆಳೆಯುವ ಕರ್ನಾಟಕದ ಕಾಫಿ ಸರ್ವಶ್ರೇಷ್ಠ ಎಂಬ ಹೆಸರು ಪಡೆದಿದೆ. ಆದ್ದರಿಂದ ಗುಣಮಟ್ಟದ ಕಾಫಿ ಬೆಳೆಯಲು ಹೆಚ್ಚಿನ ಆದ್ಯತೆ ನೀಡಿ ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಕ್ಷಣಿಕ ಸುಖದ ಆಸೆಗೆ ಬಿದ್ದು ಭೂಮಿಯನ್ನು ಮಾರಾಟ ಮಾಡಬೇಡಿ ಎಂದು ಕಾಫಿ ಬೆಳೆಗಾರರಿಗೆ ಚಲನಚಿತ್ರ ನಟ ದೊಡ್ಡಣ್ಣ ಕಿವಿಮಾತು ಹೇಳಿದರು.

ಕರ್ನಾಟಕ ಬೆಳೆಗಾರರ ಒಕ್ಕೂಟ, ಹಾಸನ ಜಿಲ್ಲಾ ಪ್ಲಾಂಟರ್ಸ್‌ ಸಂಘದ ವತಿಯಿಂದ ಪದ್ಮಭೂಷಣ ಡಾ.ಎಸ್. ಎಲ್‌ ಭೈರಪ್ಪ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ೧೧ನೇ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಕಾರ್ಯಕ್ರಮವನ್ನು ಕಾಫಿ ಗಿಡಕ್ಕೆ ನೀರು ಹಾಕಿ ಉದ್ಘಾಟಿಸಿದ ನಂತರ ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನ ಬಗ್ಗೆ ಬೆಂಗಳೂರಿನ ಉದ್ಯಮಿಗಳ ಕಣ್ಣುಬಿದ್ದಿದ್ದು ಹೆಚ್ಚು ಹಣದ ಆಮಿಷ ಒಡ್ಡಿ ಭೂಮಿ ಖರೀದಿಸುತ್ತಿದ್ದಾರೆ. ಇಂತಹ ಉದ್ಯಮಿಗಳ ಬಲೆಗೆ ಸಾಕಷ್ಟು ಬೆಳೆಗಾರರು ಬಲಿಯಾಗುತ್ತಿದ್ದಾರೆ. ಇದು ಉತ್ತಮ ಬೆಳೆವಣಿಗೆಯಲ್ಲ ಒಮ್ಮೆ ಕಳೆದುಕೊಂಡ ಭೂಮಿಯನ್ನು ಮತ್ತೊಮ್ಮೆ ಪಡೆಯಲು ಸಾಧ್ಯವಿಲ್ಲ. ಮಲೆನಾಡು ಸ್ವರ್ಗವಿದ್ದಂತೆಇಲ್ಲಿ ಬದುಕಿದ್ದವರು ಮತ್ತೊಂದೆಡೆ ಬದುಕು ಕಟ್ಟಿಕೊಳ್ಳುವುದು ಕಷ್ಟವಾಗಲಿದೆ ಎಂದು ಅಭಿಪ್ರಾಯಿಸಿದರು.

ಕಾಫಿಗೆ ತನ್ನದೇ ಮಾರುಕಟ್ಟೆ ಇದ್ದು ಕೊಳ್ಳುವುದರಿಂದ ಮಾತ್ರ ಮಾರುಕಟ್ಟೆಗೆ ಅಂತಾರಾಷ್ಟ್ರೀಯ ಅವಲಂಬನೆಯನ್ನು ತಪ್ಪಿಸಿಕೊಳ್ಳಬಹುದಾಗಿದೆ. ಸ್ವಂತ ಮಾರುಕಟ್ಟೆ ಇದ್ದರೆ ಮಾತ್ರ ಯಾವುದೇ ಬೆಳೆಯನ್ನು ನಿರಾಂತಕವಾಗಿ ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢರಾಗಬಹುದು. ನೆರಳಿನಾಶ್ರಯದಲ್ಲಿ ಬೆಳೆಯುವ ಕರ್ನಾಟಕದ ಕಾಫಿ ಸರ್ವಶ್ರೇಷ್ಠ ಎಂಬ ಹೆಸರು ಪಡೆದಿದೆ. ಆದ್ದರಿಂದ ಗುಣಮಟ್ಟದ ಕಾಫಿ ಬೆಳೆಯಲು ಹೆಚ್ಚಿನ ಆದ್ಯತೆ ನೀಡಿ ಎಂದರು. ಜಗತ್ತಿನ ಸರ್ವಶ್ರೇಷ್ಠ ಭಾಷೆಗಳಲ್ಲಿ ಕನ್ನಡ ಒಂದಾಗಿದ್ದು ಬರೆಯುವ, ಒದುವ ಮಾತನಾಡುವ ಶಕ್ತಿ ಕನ್ನಡಕ್ಕಿದೆ. ಆದ್ದರಿಂದ ಕನ್ನಡವನ್ನು ಎಂದಿಗೂ ಮರೆಯದಿರಿ ಎಂದರು. ಮಕ್ಕಳಿಗೆ ಮೊಬೈಲ್ ನೀಡದಿರಿ, ಪುಸ್ತಕ ಓದುವುದರಿಂದ ಮಾತ್ರ ಜ್ಞಾನಾರ್ಜನೆ ಹೆಚ್ಚಲಿದೆ. ಇದನ್ನು ಪೋಷಕರು ಮೊದಲು ಆರಂಭಿಸಬೇಕು ಎಂದರು.

ಶಾಸಕ ಸಿಮೆಂಟ್ ಮಂಜು ಮಾತನಾಡಿ, ಸಮಸ್ಯೆಗಳ ನಡುವೆಯು ಬದುಕು ಕಟ್ಟಿಕೊಂಡಿರುವ ಕಾಫಿ ಬೆಳೆಗಾರರು ಸಾಹಸಿಗಳು ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಕಾಡಾನೆ, ಕಾಟಿ, ಸಮಸ್ಯೆ, ಅರಣ್ಯ ಸಮಸ್ಯೆ ಅತಿಯಾಗಿದೆ. ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರ ಅಧ್ಯಯನ ನಡೆಸಿ ಯೋಜನೆ ರೂಪಿಸಬೇಕು. ಈ ಬಾರಿ ಕಳೆದ ಐದು ತಿಂಗಳಿನಿಂದ ಮಳೆಯಾಗುತ್ತಿದ್ದು ಇದರಿಂದ ಶೇ. ೫೦ರಷ್ಟುಕಾಫಿ ಬೆಳೆ ನೆಲಸೇರಿದೆ. ಆದ್ದರಿಂದ ಮುಖ್ಯಮಂತ್ರಿಗಳು ಕಾಫಿ ಬೆಳೆಗಾರರಿಗೆ ಬೆಳೆಪರಿಹಾರ ಬಿಡುಗಡೆ ಮಾಡಬೇಕು. ಆದರೆ, ಮಲೆನಾಡಿಗರು ತಮ್ಮ ಕಷ್ಟವನ್ನುತೋರ್ಪಡಿಸದಿರುವುದೇ ಒಂದು ಸಮಸ್ಯೆಯಾಗಿದೆ ಎಂದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯಧರ್ಶಿ ಸುರೇಂದ್ರ ಕೆಸಗಾನಹಳ್ಳಿ ಮಾತನಾಡಿ, ಆಂತರಿಕ ಬಳಕೆ ಹೆಚ್ಚಾದಾಗ ಅಂತರಾಷ್ಟ್ರೀಯ ಅವಲಂಬನೆ ತಪ್ಪಲಿದೆ. ಮುಂದಿನ ೨೦ ವರ್ಷಗಳಲ್ಲಿ ಕಾಫಿ ಬೆಳೆಯನ್ನು ಎರಡರಷ್ಟು ಮಾಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಕಾಫಿ ಮಂಡಳಿ ಹತ್ತು ಹಲವು ಯೋಜನೆಗಳು ಹಾಕಿಕೊಂಡಿದೆ ಎಂದರು.

ಬಿಬಿಎಂಪಿ ವೈದ್ಯಾಧಿಕಾರಿ ಡಾ. ಸುಪುತ್ರ ಗೌಡ ಮಾತನಾಡಿ, ನಿತ್ಯ ಮೂರು ಕಪ್‌ ಕುಡಿಯುವುದರಿಂದ ಶೇ. ೧೮ರಷ್ಟು ಹೃದಯಾಘಾತ ತಪ್ಪಿಸಬಹುದಾಗಿದೆ. ಅಲ್ಲದೆ, ದೇಹಕ್ಕೆಕಾಫಿ ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳಿವೆ ಎಂಬದನ್ನು ಅಂತಾರಾಷ್ಟ್ರೀಯ ಸಂಶೋಧನೆ ಹೊರಹಾಕಿದೆ ಎಂದರು.

ಪಟ್ಟಣದ ಹೇಮಾವತಿ ಪ್ರತಿಮೆಯಿಂದ ಬಸವೇಶ್ವರ ಪ್ರತಿಮೆವರೆಗೆ ಮಲೆನಾಡು ಸುಗ್ಗಿ ಕುಣಿತದೊಂಂದಿಗೆ ಬೃಹತ್ ಮೆರವಣಿಗೆ ಮಾಡಲಾಯಿತು. ಪಟ್ಟಣದ ಬೈಪಾಸ್‌ ರಸ್ತೆ ಕೆಂಪೇಗೌಡ ಪ್ರತಿಮೆ ಬಳಿ ಕಾಫಿ ದಿನಾಚರಣೆ ಅಂಗವಾಗಿ ಸಾವಿರಾರು ಪ್ರವಾಸಿಗರಿಗೆ ಕಾಫಿಯನ್ನು ಉಚಿತವಾಗಿ ನೀಡಲಾಯಿತು. ಕಾರ್ಯಕ್ರಮದ ಅಂಗವಾಗಿ ಹೆತ್ತೂರಿನ ಹಿರಿಯ ಕಾಫಿ ಬೆಳೆಗಾರ ರಾಜೇಗೌಡರವರನ್ನು ಸನ್ಮಾನಿಸಲಾಯಿತು. ಕಾಫಿ ಬೆಳೆಗಾರ ಹಾಗೂ ಶಿಕ್ಷಕ ವೆಂಕಟೇಶ್‌ರವರ ಪುತ್ರಿ ಸಾನ್ವಿಕಾರವರ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಶ್ವೇತಾ ಖಂಡಿಗೆ ಪ್ರಾರ್ಥನೆ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಎಚ್.ಡಿ.ಪಿ.ಎ ಅಧ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ಕೆ.ಬಿ ಲೋಹಿತ್, ಬಿ.ಎಂ ನಾಗರಾಜ್, ಮಿಸ್‌ ಯೂನಿವರ್ಸ್‌ ಕರ್ನಾಟಕ ಡಾ.ವಂಶಿ ಉದಯ್, ಚಲನಚಿತ್ರ ನಟ ವಿಶ್ವರಾಜ್, ಇತರರು ಹಾಜರಿದ್ದರು.