ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರದ ವಾರದ ಸಂತೆಗೆ ಸ್ಥಳೀಯ ಆಡಳಿತ ಭಾರೀ ಪ್ರಮಾಣದಲ್ಲಿ ಸರ್ಜರಿ ಮಾಡುವುದರೊಂದಿಗೆ ಪ್ರತಿ ಮಂಗಳವಾರ ಉಂಟಾಗುತ್ತಿದ್ದ ಕಿರಿಕಿರಿಗೆ ತೆರೆ ಎಳೆಯುವ ಕಾರ್ಯಾಚರಣೆ ಯಶಸ್ವಿಯಾಗಿದೆ.ಕಳೆದ ಕೆಲವು ವರ್ಷಗಳಿಂದ ಕುಶಾಲನಗರ ವಾರದ ಸಂತೆಯನ್ನು ಕೆಇಬಿ ಬಳಿಯ ಹಳೆಯ ಮಾರುಕಟ್ಟೆಯ ಪ್ರದೇಶದಿಂದ ತಾಂತ್ರಿಕ ಕಾರಣದ ಹಿನ್ನೆಲೆಯಲ್ಲಿ ಕುಶಾಲನಗರ- ಮೈಸೂರು ರಸ್ತೆಯ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ನೂತನ ಮಾರುಕಟ್ಟೆ ಆವರಣದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸ್ಥಳಾವಕಾಶ ಇದ್ದರೂ ಕೂಡ ಸಂತೆ ವ್ಯಾಪಾರಿಗಳು ಎಲ್ಲೆಂದರಲ್ಲಿ ವ್ಯಾಪಾರ ಮಾಡುತ್ತಿದ್ದು ಇದರಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿತ್ತು. ಕುಶಾಲನಗರ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಕೂಡ ತೊಡಕು ಉಂಟಾಗಿತ್ತು.
ಸಂತೆಗೆ ತೆರಳುವ ನಾಗರಿಕರು ಕೂಡ ಹಲವು ಸಮಸ್ಯೆಗಳ ನಡುವೆ ತಮ್ಮ ಅಗತ್ಯ ವಸ್ತುಗಳ ಖರೀದಿ ಮಾಡುವ ವೇಳೆ ಅನಾನುಕೂಲತೆಗೆ ಒಳಗಾಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.ಈ ಬಗ್ಗೆ ಇತ್ತೀಚೆಗೆ ಸ್ಥಳೀಯ ಪತ್ರಕರ್ತರು ತಹಸೀಲ್ದಾರ್ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಯ ಆಡಳಿತ ಅಧಿಕಾರಿಗಳು ಆಗಿರುವ ಕಿರಣ್ ಗೌರಯ್ಯ ಅವರ ಗಮನಕ್ಕೆ ತಂದ ಬೆನ್ನಲ್ಲೇ ಸಂತೆ ಮಾರುಕಟ್ಟೆಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಸಭೆ ಕರೆದು ಸಮಸ್ಯೆಯ ಬಗ್ಗೆ ಚರ್ಚೆ ನಡೆದು ಪರಿಹಾರಕ್ಕೆ ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣ ಠಾಣೆ ಇನ್‌ಸ್ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ಸಂಚಾರ ವಿಭಾಗದ ಠಾಣಾಧಿಕಾರಿ ಕಾಶೀನಾಥ್ ಬಗಲಿ ಮತ್ತು ಪೊಲೀಸ್ ಸಿಬ್ಬಂದಿ, ಆರ್‌ಎಂಸಿ ಅಧಿಕಾರಿ ಸಿಬ್ಬಂದಿ ಹಾಗೂ ಸಂತೆ ಮಾರುಕಟ್ಟೆ ಸಂಘದ ಪ್ರತಿನಿಧಿಗಳ ಸಹಾಯದೊಂದಿಗೆ ಬೆಳಗ್ಗೆ 6 ಗಂಟೆಯಿಂದಲೇ ಕಾರ್ಯಾಚರಣೆ ಆರಂಭಿಸಿ ಸಮರ್ಪಕ ವ್ಯವಸ್ಥೆ ಕಲ್ಪಿಸಲು ಯಶಸ್ವಿಯಾಗಿದ್ದಾರೆ.ಎಲ್ಲೆಂದರಲ್ಲಿ ಸಂತೆ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಪ್ರತ್ಯೇಕ ಸ್ಥಳಗಳಲ್ಲಿ ವ್ಯಾಪಾರ ಮಾಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಂತೆಗೆ ಬರುವ ಗ್ರಾಹಕರು ತಮ್ಮ ವಾಹನಗಳನ್ನು ಏಕಮುಖವಾಗಿ ಸಂಚರಿಸುವಂತೆ ವ್ಯವಸ್ಥೆ ಕಲ್ಪಿಸಿದ್ದಾರೆ.ಬಹುತೇಕ ಸಂತೆ ವ್ಯಾಪಾರಿಗಳು ಮತ್ತು ಗ್ರಾಹಕರು ಈ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂತೆ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಗೋವಿಂದ್ ಈ ಬಗ್ಗೆ ಪ್ರತಿಕ್ರಿಯಿಸಿ, ಮಾರುಕಟ್ಟೆಯ ಆವರಣದ ಸ್ವಚ್ಛತೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಬೇಕು ಎಂದಿದ್ದಾರೆ.
ಮುಂದಿನ ವಾರಗಳಿಂದ ಇನ್ನು ಹೆಚ್ಚಿನ ರೀತಿಯಲ್ಲಿ ವ್ಯವಸ್ಥೆಗಳನ್ನು ಕಲ್ಪಿಸುವುದರೊಂದಿಗೆ ಯಾವುದೇ ಅವ್ಯವಸ್ಥೆ ಉಂಟಾಗದಂತೆ ಎಚ್ಚರ ವಹಿಸಲಾಗುವುದು ಎಂದು ತಹಸಿಲ್ದಾರ್ ಕಿರಣ್ ಗೌರಯ್ಯ ಮತ್ತು ಪೊಲೀಸ್ ಇನ್‌ಸ್ಪೆಕ್ಟರ್ ಪ್ರಕಾಶ್, ಸಂಚಾರಿ ಠಾಣಾಧಿಕಾರಿ ಕಾಶಿನಾಥ್ ಬಗಲಿ ಸ್ಥಳಕ್ಕೆ ತೆರಳಿದ ಸುದ್ದಿಗಾರರೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂತೆಗೆ ಆಗಮಿಸಿದ ಮಹಿಳೆಯರು ಮಕ್ಕಳು ಅಧಿಕಾರಿಗಳ ಕ್ರಮವನ್ನು ಮೆಚ್ಚಿ ಸಂತಸ ವ್ಯಕ್ತಪಡಿಸಿದ್ದಾರೆ.