ಸಾರಾಂಶ
ಕೊಟ್ಟೂರು: ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮದ ಮೂಲಕ ಜನತೆಯ ಮನ ಬಾಗಿಲಿಗೆ ಆಡಳಿತ ಕೊಂಡೊಯ್ದು ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಈ ಕಾರ್ಯದಲ್ಲಿ ಜಿಲ್ಲಾಧಿಕಾರಿ ದಿವಾಕರ ಅವರು ಸೈಕಲ್ ಸಂಚಾರದ ಮೂಲಕ ಜನರ ಸಮಸ್ಯೆ ಪರಿಹರಿಸುತ್ತಿರುವುದು ಮಾದರಿ ಕಾರ್ಯ ಎಂದು ಶಾಸಕ ಕೆ. ನೇಮರಾಜನಾಯ್ಕ ತಿಳಿಸಿದರು.ಪಟ್ಟಣದ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಜನತಾ ದರ್ಶನ ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿದರು.ಪಟ್ಟಣದ ನಾಗರಿಕರ ಕುಡಿಯುವ ನೀರಿನ ತೊಂದರೆಯನ್ನು ನಿವಾರಿಸಲು ₹76 ಕೋಟಿ ವೆಚ್ಚದಲ್ಲಿ ಕೊಟ್ಟೂರಿಗೆ ಪ್ರತ್ಯೇಕ ನೀರು ಪೂರೈಕೆ ಯೋಜನೆಯನ್ನು ರೂಪಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಇದು ಚಾಲನೆ ಪಡೆಯಲಿದೆ ಎಂದರು. ₹10 ಲಕ್ಷ ಮತ್ತು ₹2.50 ಲಕ್ಷ ವೆಚ್ಚದ ಒಆರ್‌ಎಸ್ ಕುಡಿಯುವ ನೀರನ ಟ್ಯಾಂಕ್‌ಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದರು.ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಅವರು, ತಾಲೂಕಿನ ಜನರಿಂದ ಅಂದಾಜು 60ಕ್ಕೂ ಹೆಚ್ಚು ಸಮಸ್ಯೆಗಳ ಕುರಿತ ಅರ್ಜಿಗಳನ್ನು ಸ್ವೀಕರಿಸಿ ಮಾತನಾಡಿ, ಜನತಾ ದರ್ಶನದಿಂದ ಜನತೆಗೆ ಒಳಿತಾಗುತ್ತಿದೆ. ಹೋಬಳಿ ಮಟ್ಟದಲ್ಲೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾರ್ವಜನಿಕರ ಕುಂದುಕೊರತೆಗಳ ನಿವಾರಣೆ ಮಾಡುವತ್ತ ಜಿಲ್ಲಾಡಳಿತ ಮುಂದಾಗಿದೆ ಎಂದರು. ಜಿಲ್ಲೆಯಲ್ಲಿನ 786 ಸ್ಮಶಾನಗಳನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರ ನೆರವಿಗೆ 15 ದಿನದೊಳಗಾಗಿ ತಾಲೂಕು ಪಂಚಾಯಿತಿ ಆಡಳಿತ ನೀಡಬೇಕು. ಅನಗತ್ಯವಾಗಿ ಜನತೆಯನ್ನು ಅಲೆದಾಡದಂತೆ ಮಾಡುವ ಮೂಲಕ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಲು ನೆರವಾಗಬೇಕು ಎಂದರು. ಜಿಲ್ಲಾ ಯೋಜನಾ ನಿರ್ದೇಶಕ ಅಶೋಕ ತೋಟದ, ಡಿಎಚ್‌ಒ ಡಾ. ಎಲ್.ಆರ್. ಶಂಕರ್ ನಾಯ್ಕ, ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಅರ್ಷಲಾನ್, ವಿವಿಧ ಇಲಾಖೆ ಸಹ ನಿರ್ದೇಶಕರಾದ ಯುವರಾಜ ನಾಯ್ಕ, ಮಲ್ಲಿಕಾರ್ಜುನ ನಾಯ್ಕ, ಮಂಜುನಾಥ, ಪಾಸುಮಹಿದ್ದೀನ್, ಕೆ.ಬಿ. ರಾಮಚಂದ್ರಪ್ಪ, ಶ್ವೇತಾ ಎಸ್. ಸೂರಪ್ಪ ಡೊಂಬಲ್, ಮಂಜುನಾಥ ಪವನೆ, ಲಕ್ಷ್ಮೀ ಕಿರಣ, ವಿ. ಸುಧೀರ್, ತಾಲೂಕು ಅಧಿಕಾರಿಗಳಾದ ಮಲ್ಲಿಕಾರ್ಜುನ, ವೆಂಕಟರಮಣ, ಪದ್ಮನಾಭ ಕರಣಂ, ಸರ್ಕಲ್ ಇನ್‌ಸ್ಪೆಕ್ಟರ್ ವೆಂಕಟಸ್ವಾಮಿ ಮತ್ತಿತರರು ಇದ್ದರು. ತಹಸೀಲ್ದಾರ್ ಅಮರೇಶ್ ಜಿ.ಕೆ. ಸ್ವಾಗತಿಸಿದರು. ತಾಪಂ ಇಒ ಐ. ರವಿಕುಮಾರ್ ವಂದಿಸಿದರು.