ಸಾರಾಂಶ
10 ವರ್ಷಗಳಲ್ಲಿ ಉಂಟಾದ ಸಮುದಾಯದ ಸಾಮಾಜಿಕ ಏಳ್ಗೆ ಮತ್ತು ಆರ್ಥಿಕ ಸ್ಥಿತಿ ಪ್ರಗತಿ ಕುರಿತು ಮನೆಮನೆಗೆ ತೆರಳಿ ಮೌಲ್ಯಮಾಪನ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು : ಪರಿಶಿಷ್ಟ ಜಾತಿ ಅಭಿವೃದ್ಧಿಗಾಗಿ ವಿಶೇಷ ಘಟಕ ಯೋಜನೆ ಮತ್ತು ಪರಿಶಿಷ್ಟ ಪಂಗಡ ಅಭಿವೃದ್ಧಿ ಯೋಜನೆಯಿಂದ (ಎಸ್‌ಸಿಎಸ್‌ಪಿ/ಟಿಎಸ್‌ಪಿ) ಕಳೆದ 10 ವರ್ಷಗಳಲ್ಲಿ ಉಂಟಾದ ಸಮುದಾಯದ ಸಾಮಾಜಿಕ ಏಳ್ಗೆ ಮತ್ತು ಆರ್ಥಿಕ ಸ್ಥಿತಿ ಪ್ರಗತಿ ಕುರಿತು ಮನೆಮನೆಗೆ ತೆರಳಿ ಮೌಲ್ಯಮಾಪನ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಎಸ್‌ಸಿ/ಎಸ್‌ಟಿ ರಾಜ್ಯ ಅಭಿವೃದ್ಧಿ ಪರಿಷತ್ ಸಭೆ ನಡೆಸಿ 2024-25ನೇ ಸಾಲಿನ ಕ್ರಿಯಾಯೋಜನೆಗೆ ಅನುಮೋದನೆ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಂದಾಜಿನ ಮೇಲೆ ಮೌಲ್ಯಮಾಪನ ನಡೆಸಿದ ಪ್ರಕಾರ ಶೇ.65ರಷ್ಟು ಉಪಯೋಗವಾಗಿದೆ ಎಂಬ ಮಾಹಿತಿ ಇದೆ. ಆದರೆ ನಿಖರವಾದ ಮಾಹಿತಿ ಇಲ್ಲವಾಗಿರುವುದರಿಂದ ಎಸ್‌ಸಿ/ಎಸ್‌ಟಿ ಸಮುದಾಯದ ಅಭಿವೃದ್ಧಿ ಮತ್ತು ಆರ್ಥಿಕ ಸ್ಥಿತಿ ಪ್ರಗತಿ ಬಗ್ಗೆ ಮನೆಮನೆಗೆ ತೆರಳಿ ಮೌಲ್ಯ ಮಾಪನ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಐಎಎಸ್, ಐಪಿಎಸ್, ಐಆರ್‌ಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ದೆಹಲಿಯಲ್ಲಿ ತರಬೇತಿ ಪಡೆಯುತ್ತಿರುವ ಎಸ್‌ಸಿ/ಎಸ್‌ಟಿ ಯುವಜನಾಂಗದವರಿಗೆ ಉತ್ತಮ ವಸತಿ ನಿಲಯ ನಿರ್ಮಾಣದ ಜತೆಗೆ ತಿಂಗಳಿಗೆ ನೀಡುತ್ತಿರುವ 10 ಸಾವಿರ ರು. ಬದಲಿಗೆ 15 ಸಾವಿರ ರು. ನೀಡುವ ನಿರ್ಣಯ ಕೈಗೊಳ್ಳಲಾಗಿದೆ. ಇದಲ್ಲದೇ, ವಸತಿ ನಿಲಯದಲ್ಲಿ ಅತ್ಯಾಧುನಿಕ ಗ್ರಂಥಾಲಯ ವ್ಯವಸ್ಥೆ ಮಾಡಿ, ಅಲ್ಲಿ ಎಲ್ಲಾ ರೀತಿಯ ಪುಸ್ತಕಗಳು ಲಭ್ಯವಾಗುವಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ನಿರ್ಲಕ್ಷ್ಯ ತೋರುವವರ ವಿರುದ್ಧ ಕ್ರಮ:
ರಾಜ್ಯದ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಒಟ್ಟು 1 ಲಕ್ಷ 60 ಸಾವಿರ ಕೋಟಿ ರು ಇದ್ದು, ಇದರಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿಗೆ 39,121.46 ಕೋಟಿ ರು. ಮೀಸಲಿಡಲಾಗಿದೆ. ಹಿಂದಿನ ವರ್ಷ 97.81 ಕೋಟಿ ಉಳಿತಾಯವಾಗಿದ್ದು, ಈ ಹಣವೂ ಸೇರಿದೆ. ಕಳೆದ ವರ್ಷಕ್ಕಿಂತ ಈ ವರ್ಷ 3,900 ಕೋಟಿ ರು. ಹೆಚ್ಚಾಗಿದೆ. ಈ ಹಣ ಇಲಾಖೆಗಳಿಗೆ ಹಂಚಿಕೆಯಾಗಿದ್ದು, ಇದರ ಸದುಪಯೋಗ ಆಗಬೇಕು. ಶೇ.100ರಷ್ಟು ಸಾಧನೆಯಾಗಬೇಕು. ಇದರಲ್ಲಿ ನಿರ್ಲಕ್ಷ್ಯ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯಲ್ಲಿದ್ದ 7ಡಿ ರದ್ದು ಮಾಡಿದ ರೀತಿಯಲ್ಲೇ 7ಸಿ ಕೂಡ ರದ್ದು ಮಾಡಬೇಕು ಎನ್ನುವ ಸಲಹೆಗಳು ಬಂದಿವೆ. ಈ ಸಲಹೆಯ ಸಾಧಕ ಬಾದಕಗಳನ್ನು ಪರಿಶೀಲಿಸಲಾಗುವುದು. ಇನ್ನು, ಎಲ್ಲಾ ಹೋಬಳಿಗಳಲ್ಲೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಆರಂಭಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಕೆಲವು ಹೋಬಳಿಗಳಲ್ಲಿ ವಸತಿ ಶಾಲೆಗಳಿವೆ. ಇಲ್ಲದಿರುವ ಹೋಬಳಿಯಲ್ಲಿ ಶಾಲೆಗಳನ್ನು ಆರಂಭಿಸಲಾಗುವುದು. ಆಯಾ ಹೋಬಳಿಯ ವಿದ್ಯಾರ್ಥಿಗಳಿಗೆ ಶೇ.75ರಷ್ಟು ಸೀಟು, ಉಳಿದ ಶೇ.25ರಷ್ಟು ಸೀಟುಗಳನ್ನು ಇತರೆ ಪ್ರದೇಶದ ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕಾನೂನು ಸಚಿವ ಎಚ್.ಕೆ.ಪಾಟೀಲ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಶಾಲೆ ಮಕ್ಕಳಿಗೆ ಸಿಎಂ ಸಂಧಿ, ಸಮಾಸ, ವ್ಯಾಕರಣ ಪಾಠ!
ಕನ್ನಡ ಭಾಷೆ ಹಾಗೂ ದಶಕಗಳ ಹಿಂದೆ ಶಾಲೆಗಳಲ್ಲಿ ಕಲಿತ ವ್ಯಾಕರಣದ ಬಗ್ಗೆ ನಿರರ್ಗಳವಾಗಿ ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡಿ ಗಮನ ಸೆಳೆಯುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ನಗರದ ಚಾಮರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ ಕೆಲ ಕಾಲ ಶಿಕ್ಷಕರಾಗಿ ಬಸವಣ್ಣನವರ ವಿಚಾರಧಾರೆ, ಸಂಧಿ, ಸಮಾಸ ಮುಂತಾದ ವ್ಯಾಕರಣದ ಅಂಶಗಳನ್ನು ಹೇಳಿ ಅಚ್ಚರಿ ಮೂಡಿಸಿದರು.
ನಾಡಿನ ಮುಖ್ಯಮಂತ್ರಿಗಳೇ ಖುದ್ದು ಶಾಲೆಗೆ ಬಂದು ತಮಗೆ ನೀಡುತ್ತಿರುವ ಶಿಕ್ಷಣ, ಊಟ, ಸೌಕರ್ಯಗಳ ಬಗ್ಗೆ ವಿಚಾರಿಸಿದ್ದಲ್ಲದೇ, ತಮ್ಮ ಜೊತೆ ಊಟ ಮಾಡಿದ್ದಕ್ಕೆ ಮಕ್ಕಳು ಸಂತಸ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಸಭೆ ಬಳಿಕ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಮತ್ತಿತರರೊಂದಿಗೆ ಸುಮಾರು 250 ಮಕ್ಕಳಿರುವ ಚಾಮರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಟಿ ವಿವಿಧ ತರಗತಿಯ ಮಕ್ಕಳೊಂದಿಗೆ ಮುಖ್ಯಮಂತ್ರಿಗಳು ಕೆಲ ಕಾಲ ಕಳೆದರು. ಶಾಲೆಯಲ್ಲಿ ತಯಾರಿಸಿದ ಊಟವನ್ನು ಸ್ವತಃ ಸೇವಿಸಿ ಆಹಾರದ ಗುಣಮಟ್ಟ, ರುಚಿ, ಶುಚಿತ್ವದ ಬಗ್ಗೆ ಪರಿಶೀಲನೆ ನಡೆಸಿದರು.ಮೇಸ್ಟ್ರಾದ ಸಿಎಂ:ಬಳಿಕ ಕೆಲ ಕಾಲ ಶಿಕ್ಷಕರಾದ ಸಿದ್ದರಾಮಯ್ಯ ವ್ಯಾಕರಣ ಪಾಠ ಮಾಡಿ, ಬಸವಣ್ಣನವರ ವಿಚಾರ ಕ್ರಾಂತಿ ತಿಳಿಸಿದರು. ಸಂಧಿ ಎಂದರೇನು? ಸಂಧಿಗಳಲ್ಲಿ ಎಷ್ಟು ವಿಧ? ಕನ್ನಡ ಅಕ್ಷರ ಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ? ಅವುಗಳಲ್ಲಿ ಯೋಗವಾಹಗಳು ಎಷ್ಟು? ಸ್ವರ, ವ್ಯಂಜನಗಳು ಎಂದರೇನು? ಎಷ್ಟಿವೆ? ವರ್ಗೀಯ, ಅವರ್ಗೀಯ ವ್ಯಂಜನಗಳು ಎಷ್ಟಿವೆ? ಅಲ್ಪಪ್ರಾಣ, ಮಹಾಪ್ರಾಣ ಎಂದರೇನು? ಅಲ್ಪ ಪ್ರಾಣಕ್ಕೆ ಉದಾಹರಣೆ ಹೇಳಿ ಎಂದು ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಿದ ಮುಖ್ಯಮಂತ್ರಿ ಅವರು ಸರಿ ಉತ್ತರಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ತಪ್ಪು ಉತ್ತರಗಳನ್ನು ನೀಡಿದಾಗ ಅಕ್ಷರಗಳು ಎಡೆಬಿಡದೆ ಸೇರುವುದೇ ಸಂಧಿ ಎಂಬಿತ್ಯಾದಿ ಉತ್ತರಗಳನ್ನು ತಾವೇ ನೀಡಿ ತಿದ್ದಿ ಹೇಳಿದರು.
ಮೊದಲು 10ನೇ ತರಗತಿ ಕೊಠಡಿಗೆ ಭೇಟಿ ನೀಡಿದ ಅವರು, ಶಾಲೆಯಲ್ಲಿ ಶಿಕ್ಷಕರು ಹೇಗೆ ಪಾಠ ಮಾಡುತ್ತಾರೆ, ಊಟ ಚೆನ್ನಾಗಿರುತ್ತಾ? ವಸತಿ, ಮೂಲಸೌಕರ್ಯ ವ್ಯವಸ್ಥೆ ಚೆನ್ನಾಗಿದೆಯಾ? ತರಗತಿ ಬೋಧನೆ ಬಳಿಕ ಇಲ್ಲೇ ಇರುತ್ತೀರಾ? ಮನೆಗೆ ಹೋಗುತ್ತೀರಾ? ಬಾತ್ ರೂಂ ಕಿಟ್‌ಗಳ ವಿತರಣೆ ಸಮರ್ಪಕವಾಗಿ ಆಗುತ್ತಿದೆಯಾ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಶಿಕ್ಷಕರು ತುಂಬಾ ಚೆನ್ನಾಗಿ ಪಾಠ ಮಾಡುತ್ತಾರೆ, ಎಲ್ಲ ಪ್ರಶ್ನೆಗಳನ್ನು ಬಗೆಹರಿಸುತ್ತಾರೆ. ನಿತ್ಯ ಊಟವೂ ಚೆನ್ನಾಗಿ ಮಾಡುತ್ತಾರೆ. ಬೆಳಗ್ಗೆ ದೋಸೆ, ಮಧ್ಯಾಹ್ನ ಊಟ ಮಾಡಿದ್ದೇವೆ, ಚೆನ್ನಾಗಿತ್ತು. ಆಗಾಗ ಪಲಾವ್ ಕೊಡ್ತಾರೆ ಎಂದರು. ನಮ್ಮ ಆರೋಗ್ಯ ತಪಾಸಣೆಗೆ ನಿಯಮಿತವಾಗಿ ವೈದ್ಯರು ಬರುತ್ತಿದ್ದಾರೆ, ಶಾಲೆಯಲ್ಲಿ ಎಲ್ಲ ವ್ಯವಸ್ಥೆಯೂ ಚೆನ್ನಾಗಿದೆ ಎಂಬ ಉತ್ತರ ನೀಡಿದರು.ನಂತರ ಬಸವಣ್ಣನವರು ಸಾಮಾಜಿಕ ಕ್ರಾಂತಿ ಮಾಡಿದ್ದು ಏಕೆ ಎಂದು ಸಿದ್ದರಾಮಯ್ಯ ಮಕ್ಕಳಲ್ಲಿ ಪ್ರಶ್ನಿಸಿದರು. ಮಕ್ಕಳು ಉತ್ತರ ನೀಡಲು ಮುಂದಾದಾಗ ಸ್ವತಃ ಮುಖ್ಯಮಂತ್ರಿ ಅವರೇ ಬಸವಣ್ಣವರು ಮನುಷ್ಯರ ನಡುವಿನ ತಾರತಮ್ಯ, ಜಾತಿ ವ್ಯವಸ್ಥೆ ವಿರೋಧಿಸಿ ಸಾಮಾಜಿಕ ಕ್ರಾಂತಿ ನಡೆಸಿದರು ಎಂದು ತಿಳಿಸಿಕೊಟ್ಟರು.
ಮೊರಾರ್ಜಿ ದೇಸಾಯಿ ಶಾಲೆಗಳನ್ನು ರಾಜ್ಯದಲ್ಲಿ ಯಾರು, ಯಾವಾಗ ಆರಂಭಿಸಿದರು ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದಾಗ ನೀವೇ ಆರಂಭಿಸಿದ್ದು ಎಂದು ಉತ್ತರ ನೀಡಿದ ವಿದ್ಯಾರ್ಥಿ ಇಸವಿ ಗೊತ್ತಿಲ್ಲ ಎಂದು ಹೇಳಿದ. ಬಳಿಕ ಮುಖ್ಯಮಂತ್ರಿ ಅವರು 1994-95ರಲ್ಲಿ ಆರಂಭಿಸಿದ್ದಾಗಿ ಹೇಳಿದರು. ಈ ವೇಳೆ ಮಕ್ಕಳು ಚಪ್ಪಾಳೆ ತಟ್ಟಿದರು.ಇದೇ ವೇಳೆ ಕಳೆದ ಬಾರಿ ಶಾಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶದ ವಿವರಣೆ ನೀಡಿದ ಶಿಕ್ಷಕರು, ಒಬ್ಬ ವಿದ್ಯಾರ್ಥಿನಿಯನ್ನು ಹೊರತುಪಡಿಸಿ ಉಳಿದೆಲ್ಲರೂ ಉನ್ನತ ಶ್ರೇಣಿಯಲ್ಲಿ ಪಾಸಾಗಿರುವುದಾಗಿ ತಿಳಿಸಿದರು. ಇದಕ್ಕೆ ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.ವಸತಿ ಶಾಲೆಗಳಿಗೆ ಇನ್ನಷ್ಟು ಮೂಲಸೌಕರ್ಯ: ಸಿದ್ದರಾಮಯ್ಯರಾಜ್ಯದ ಇತರ ಶಾಲೆಗಳಿಗೆ ಹೋಲಿಸಿದರೆ ವಸತಿ ಶಾಲೆಗಳು ಗುಣಮಟ್ಟದಲ್ಲಿ ಉತ್ತಮವಾಗಿದ್ದರೂ, ಈ ಶಾಲೆಗಳಿಗೆ ಇನ್ನಷ್ಟು ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಚಾಮರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶುಕ್ರವಾರ ಅನಿರೀಕ್ಷಿತ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಎಲ್ಲ 833 ವಸತಿ ಶಾಲೆಗಳಿಗೆ ಸುಸಜ್ಜಿತವಾದ ಕಟ್ಟಡಗಳನ್ನು ಹಂತಹಂತವಾಗಿ ನಿರ್ಮಿಸಲಾಗುತ್ತಿದೆ. ಎಲ್ಲ ಆಶ್ರಮ ಶಾಲೆಗಳನ್ನು ವಸತಿ ಶಾಲೆಗಳಾಗಿ ಪರಿರ್ವತಿಸುತ್ತಿದ್ದೇವೆ. ಈ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಊಟ, ವಾಸ್ತವ್ಯ ವ್ಯವಸ್ಥೆ ಮಾತ್ರವಲ್ಲದೆ ಇಂಗ್ಲಿಷ್, ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ತರಬೇತಿ ಸಹ ನೀಡುತ್ತಿದ್ದೇವೆ ಎಂದು ಹೇಳಿದರು.
ಚಾಮರಾಜಪೇಟೆಯ ಸರ್ಕಾರಿ ಶಾಲೆಯನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಯಾಗಿ ಪರಿವರ್ತಿಸಲಾಗಿದೆ. ಪ್ರಸ್ತುತ ಇಲ್ಲಿ 218 ಮಕ್ಕಳಿದ್ದಾರೆ. ವಿದ್ಯಾರ್ಥಿಗಳ ಜತೆಯಲ್ಲಿ ಮಾಡಿದ ಊಟ, ಸಾಂಬಾರ್ ಚೆನ್ನಾಗಿತ್ತು. ಈ ಸಂದರ್ಭದಲ್ಲಿ ಪ್ರತಿ ದಿನವೂ ಊಟ ಇಷ್ಟೇ ಚೆನ್ನಾಗಿರುತ್ತಾ ಅಥವಾ ನಾವು ಬಂದಿರೋದಕ್ಕೆ ಚೆನ್ನಾಗಿ ಮಾಡಿದ್ದಾರಾ ಎಂದು ಕೇಳಿದೆ. ಅದಕ್ಕೆ ಮಕ್ಕಳು ದಿನವೂ ಊಟ ಹೀಗೇ ಇರುತ್ತದೆ ಎಂದು ಹೇಳಿದರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.