ಸಾರಾಂಶ
ಡಂಬಳ: ಸರ್ಕಾರದಿಂದ ಪಿತ್ರಾರ್ಜಿತ ಆಸ್ತಿ ಹಕ್ಕನ್ನು ರೈತರ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳುವ ಪ್ರಕ್ರಿಯೆ ಸರಳೀಕೃತಗೊಳಿಸಲು ಕಂದಾಯ ಇಲಾಖೆಯಿಂದ ಇ- ಪೌತಿ ಆಂದೋಲನ ನಡೆಸಲಾಗುತ್ತಿದೆ. ಗದಗ ಜಿಲ್ಲೆಯಲ್ಲಿ 70 ಸಾವಿರ ಪೌತಿ( ಮರಣ) ಖಾತೆ ಹೊಂದಿದ ಪ್ರಕರಣಗಳಿದ್ದು, ಇ-ಖಾತಾ ಹೊಂದಲು ತಮ್ಮ ಮನೆ ಬಾಗಿಲಿಗೆ ಬರುತ್ತಿದ್ದು, ಎಲ್ಲರೂ ಸೌಲಭ್ಯ ಪಡೆದುಕೊಳ್ಳಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಶ್ರೀಧರ ಸಿ.ಎನ್ ಹೇಳಿದರು.
ಡಂಬಳ ಹೋಬಳಿಯ ವೆಂಕಟಾಪುರ ಗ್ರಾಮದ ಅನ್ನದಾನಿಶ್ವರ ಮಠದ ಆವರಣದಲ್ಲಿ ಗುರುವಾರ ಕಂದಾಯ ಇಲಾಖೆಯ ಇ-ಪೌತಿ ವಾರಸಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಪೌತಿ ಮೃತರ ಉತ್ತರಾಧಿಕಾರಿಗಳ ಹೆಸರಿಗೆ ಬದಲಾಗದಿದ್ದರೆ ಅಂತಹ ಜಮೀನು ಸ್ವಾಧೀನ ಹೊಂದಿದ್ದರೂ ಸಹ ಕುಟುಂಬಸ್ಥರಿಗೆ ಜಮೀನು ಅಭಿವೃದ್ಧಿಪಡಿಸಲು, ಬೆಳೆಸಾಲ, ಸಾಲ ಸೌಕರ್ಯ, ಕೃಷಿ, ತೋಟಗಾರಿಕೆ ಸೌಲಭ್ಯ ದೊರೆಯುವುದಿಲ್ಲ. ಬೆಳೆಹಾನಿ ಆದ ವೇಳೆ ಪರಿಹಾರ ಪಡೆಯಲು ದುಸ್ತರವಾಗುತ್ತದೆ ಪರಿಹಾರ ಸಿಗುವುದಿಲ್ಲ ಹೀಗಾಗಿ ಆಸ್ತಿ ಹಕ್ಕು ವರ್ಗಾವಣೆಗೆ ಇ-ಪೌತಿ ಆಂದೋಲನ ಆರಂಭಿಸಲಾಗಿದೆ ಎಂದರು.
ಇ-ಪೌತಿ ಮಾಡಿಸಿಕೊಳ್ಳಲು ಸಂಬಂಧಿಸಿದವರು ಮೃತರ ಮರಣ ಪ್ರಮಾಣ ಪತ್ರ, ಗಣಕೀಕೃತ ವಂಶವೃಕ್ಷ ಪ್ರಮಾಣ ಪತ್ರ, ಆಧಾರ್ ಕಾರ್ಡ್‌ನ್ನು ಗ್ರಾಮಾಡಳಿತಾಧಿಕಾರಿಗಳಿಗೆ ಸಲ್ಲಿಸಬೇಕು. ಅವರು ಕಾನೂನು ಬದ್ಧ ವಾರಸುದಾರರ ಆಧಾರ್ ಇ-ಕೆವೈಸಿ ಮಾಡುತ್ತಾರೆ. ಉತ್ತರಾಧಿಕಾರಿ ಇದ್ದರೆ ಫೋಟೋ ತೆಗೆದು ಆ್ಯಪ್‌ನಲ್ಲಿ ಅಪ್ಲೋಡ್ ಮಾಡುತ್ತಾರೆ. ಮೃತರ ಇನ್ನಿತರ ಯಾವುದೇ ಸರ್ವೇ ನಂಬರ್ ಇದ್ದರೂ ಸೇರ್ಪಡೆ ಮಾಡುತ್ತಾರೆ ಎಂದು ತಿಳಿಸಿದರು.
ಕೆಲ ಪ್ರಕರಣದಲ್ಲಿ ಉತ್ತರಾಧಿಕಾರಿಗಳ ತಕರಾರು ಇದ್ದು, ಪೌತಿ ಖಾತೆ ಮಾಡಲು ಒಪ್ಪುವದಿಲ್ಲ ಎಂದು ಪಹಣಿ ಕಾಲಂ 11ರಲ್ಲಿ ನಮೂದಿಸಲಾಗುತ್ತದೆ. ಹೀಗಾಗಿ ಇ-ಪೌತಿ ಖಾತಾಗೆ ಬೇಕಾದ ವಂಶವೃಕ್ಷ, ಮರಣ ಪ್ರಮಾಣದಂತಹ ಇತರ ದಾಖಲೆ ಸಿದ್ದಪಡಿಸಿಕೊಂಡು ಆಂದೋಲನ ಯಶಸ್ವಿಗೆ ಜಿಲ್ಲೆಯ ರೈತರು ಸಹಕರಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗೆ ಸಂಬಂಧಿಸಿದಂತೆ ತಹಸೀಲ್ದಾರ, ಉಪತಹಸೀಲ್ದಾರ, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಲು ಮುಂದಾಗಬೇಕು ಎಂದು ಹೇಳಿದರು.
ಮುಂಡರಗಿ ತಹಸೀಲ್ದಾರ ಯರಿಸ್ವಾಮಿ ಪಿ.ಎಸ್ ಮಾತನಾಡಿ, ಮುಂಡರಗಿ ತಾಲೂಕಿನಲ್ಲಿ 8000, ವೆಂಕಟಾಪೂರ ಗ್ರಾಮದಲ್ಲಿ 180 ಪೌತಿ ಖಾತಾ ಇದ್ದು, ಈಗಾಗಲೆ 20 ಅರ್ಜಿ ಬಂದಿದ್ದು ಅವರಿಗೆ ಶೀಘ್ರ ಇ ಖಾತಾ ಮಾಡಿಕೊಡಲಾಗುವುದು ಇನ್ನುಳಿದ ಮುಂಡರಗಿ ತಾಲೂಕಿನ ರೈತರು ಹೊಂದಲು ಮುಂದಾಗಬೇಕು. ಈಗಾಗಲೆ ಮರಣ ಹೊಂದಿದವರ ಹೆಸರಿನಲ್ಲಿರುವ ಖಾತಾದಾರರ ವಾರಸುದಾರರಿಗೆ ತಿಳಿವಳಿಕೆ ಪತ್ರ ನೀಡಿದ್ದು. ಪ್ರತಿಯೊಬ್ಬರು ಇ ಖಾತಾ ಹೊಂದಲು ರೈತರು ಮುಂದಾಗಬೇಕು ಮತ್ತು ಈ ಸರ್ಕಾರಿ ಸೌಲಭ್ಯ ಹೊಂದಲು ಮುಂದಾಗಬೇಕು ಎಂದು ಹೇಳಿದರು.
ಗದಗ ತಹಸೀಲ್ದಾರ ಸಂತೋಷ ಹಿರೇಮಠ ಮಾತನಾಡಿದರು.
ಕೆಲ ರೈತರು ತಮ್ಮ ಖಾತೆಯಲ್ಲಿ ತಂದೆ, ಅಜ್ಜ, ಮುತ್ತಜ್ಜ ಕಾಲದ ಖಾತೆಗೆ ಪರಿಹಾರದ ಕುರಿತು ಪ್ರಶ್ನೆ ಕೇಳಿದಾಗ ಜಿಲ್ಲಾಧಿಕಾರಿಗಳು ಇ-ಪೌತಿ ಖಾತಾ ಹೊಂದುವ ಸರಳ ವಿಧಾನ, ಯಾವ ರೀತಿ ಅಕ್ಕಅಣ್ಣ ತಮ್ಮಂದಿರರ ಹೆಸರು ಸೇರ್ಪಡೆ ಹೊಂದುವಂತೆ ಮಾಡಲಾಗುತ್ತದೆ ಎನ್ನುವುದರ ಕುರಿತು ಗ್ರಾಮೀಣ ಭಾಷೆಯಲ್ಲಿ ರೈತರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪತಸೀಲ್ದಾರ್ ಎಸ್.ಎಸ್.ಬಿಚ್ಚಾಲಿ, ಕಂದಾಯ ನಿರೀಕ್ಷಕ ಪ್ರಭು ಬಾಗಲಿ, ಗ್ರಾಮ ಆಡಳಿತಾಧಿಕಾರಿ ಪರಸು ಗಾಡಿ, ಲಕ್ಷ್ಮಣ ಗುಡಸಲಮನಿ, ವಿನೋದ ಹೊಸಮಠ, ರೈತರಾದ ಚನ್ನಬಸಪ್ಪ ಹಳ್ಳಿ, ಕಲ್ಲೇಶ, ಸಂಗಪ್ಪ ಸಣ್ಣದ್ಯಾವಣ್ಣವರ, ಮಂಜುನಾಥ ಕಿನ್ನಾಳ, ಯಲ್ಲಪ್ಪ ಸಣ್ಣದ್ಯಾವಣ್ಣವರ, ಮಲ್ಲಪ್ಪ ಹೊಸಮನಿ, ಬಸವರಾಜ ಕೊಪ್ಪಳ, ನಿಂಗಪ್ಪ ಹೊಸಮನಿ, ಶಂಕ್ರಪ್ಪ ಹೊಸಮನಿ, ಸುಭಾಸ ಚವಡಿ ಸೇರಿದಂತೆ ಗ್ರಾಮದ ಹಿರಿಯರು, ಯುವಕರು, ಕಂದಾಯ ಇಲಾಖೆ ಸಿಬ್ಬಂದಿ ವರ್ಗ ಇದ್ದರು.