ಸ್ಫೂರ್ತಿ ನಡೆ ವಿನೂತನ ಕಾರ್ಯಕ್ರಮ ಸದ್ಬಳಕೆ ಮಾಡಿಕೊಂಡು ಜಿಲ್ಲೆಯ ಎಲ್ಲ ವಸತಿ ನಿಲಯಗಳಲ್ಲಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುವಂತಾಗಬೇಕು
ಕೊಪ್ಪಳ: ಜಿಲ್ಲೆಯ ವಸತಿ ನಿಲಯ ವಿದ್ಯಾರ್ಥಿಗಳ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ವಾರ್ಡ್‌ನಗಳು ವಿಶೇಷ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಹೇಳಿದರು.
ಅವರು ಸೋಮವಾರ ಕೊಪ್ಪಳ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಮೆಟ್ರಿಕ್ ಪೂರ್ವ ವಸತಿ ನಿಲಯಗಳ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ವಿನೂತನ ಕಾರ್ಯಕ್ರಮ`ಸ್ಫೂರ್ತಿ ನಡೆ ಹಮ್ಮಿಕೊಳ್ಳುವ ಕುರಿತು ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕೊಪ್ಪಳ ಜಿಲ್ಲೆಯಲ್ಲಿ ಕಾರ್ಯ ನಿರ್ವಸುತ್ತಿರುವ ಸಮಾಜ ಕಲ್ಯಾಣ ಇಲಾಖೆ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ 82 ಮೆಟ್ರಿಕ್ ಪೂರ್ವ ವಸತಿ ನಿಲಯಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಮುಂಬರುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಯಶಸ್ವಿಯಾಗಿ ಎದುರಿಸಲು ಸ್ಫೂರ್ತಿ ನಡೆ ವಿನೂತನ ಕಾರ್ಯಕ್ರಮದಡಿ ಪ್ರತಿನಿತ್ಯ ಎಲ್ಲ ಹಾಸ್ಟೆಲ್‌ಗಳಲ್ಲಿ ಸಂಜೆ 6ರಿಂದ ರಾತ್ರಿ 8 ಗಂಟೆಯವರೆಗೆ ಉಚಿತ ವಿಶೇಷ ವರ್ಗ (ಕ್ಲಾಸ್) ಆನ್‌ಲೈನ್ ಮುಖಾಂತರ ಆಯೋಜಿಸಿ ನುರಿತ ಅನುಭವಿ ಶಿಕ್ಷಕರಿಂದ ಬೋಧನೆ ಮಾಡಿಸಬೇಕು. ವಿದ್ಯಾರ್ಥಿಗಳಿಗೆ ಕಠಿಣವೆನಿಸುವ ವಿಷಯಗಳ ಬಗ್ಗೆ ಈ ತರಗತಿಯ ಕೊನೆಯಲ್ಲಿ ನೇರವಾಗಿ ಪ್ರಶ್ನೆ ಕೇಳಲು ಮತ್ತು ಅವುಗಳಿಗೆ ಉತ್ತರ ಒದಗಿಸಬೇಕು.ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಅನುಕೂಲ ಮಾಡಿಕೊಡಬೇಕು. ಈ ಹಿನ್ನೆಲೆಯಲ್ಲಿ ವಸತಿ ಶಿಕ್ಷಣ ಇಲಾಖೆಗಳ ಅಧಿಕಾರಿಗಳು, ಆಯಾ ವಸತಿ ನಿಲಯಗಳ ನಿಲಯಪಾಲಕರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ವಸತಿ ನಿಲಯಗಳಲ್ಲಿ ಪ್ರತಿ ದಿನ ಗೂಗಲ್ ಮೀಟ್ ಅಥವಾ ಆನ್‌ಲೈನ್ ಮೂಲಕ ಹೆಚ್ಚುವರಿ ತರಗತಿ ತೆಗೆದುಕೊಳ್ಳಲು ಇಂಗ್ಲೀಷ್,ಗಣಿತ ಮತ್ತು ವಿಜ್ಞಾನ ವಿಷಯಗಳ ನುರಿತ ಶಿಕ್ಷಕರಿಗೆ ಸರ್ಕಾರದಿಂದ ಪ್ರತಿ ದಿನಕ್ಕೆ ₹300 ಗೌರವಧನ ನೀಡಲಾಗುತ್ತಿದ್ದು, ಇದಕ್ಕಾಗಿ ಜಿಲ್ಲೆಯ ಎಲ್ಲ ಮೆಟ್ರಿಕ್ ಪೂರ್ವ ವಸತಿ ನಿಲಯಗಳ ವಾರ್ಡನ್‌ಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಕಾರದೊಂದಿಗೆ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗಾಗಿ ಉಚಿತ ವಿಶೇಷ ವರ್ಗ ಹಮ್ಮಿಕೊಳ್ಳಬೇಕು. `ಸ್ಫೂರ್ತಿ ನಡೆ ವಿನೂತನ ಕಾರ್ಯಕ್ರಮ ಸದ್ಬಳಕೆ ಮಾಡಿಕೊಂಡು ಜಿಲ್ಲೆಯ ಎಲ್ಲ ವಸತಿ ನಿಲಯಗಳಲ್ಲಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುವಂತಾಗಬೇಕು. ಯಾವುದೇ ಒಬ್ಬ ವಿದ್ಯಾರ್ಥಿ ಅನುತ್ತೀರ್ಣರಾಗದಂತೆ ಆಯಾ ವಸತಿ ನಿಲಯಗಳ ವಾರ್ಡನ್‌ಗಳು ಅಗತ್ಯ ಕ್ರಮ ವಹಿಸಬೇಕು ಎಂದರು.ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ ಮಾತನಾಡಿ, ಈ ಹಿಂದೆ ಪ್ರಥಮ ಹಂತದಲ್ಲಿ ಶೇ.52ರಷ್ಟು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೆಚ್ಚಿಸಲು ಹಾಸ್ಟೆಲ್‌ಗಳಲ್ಲಿರುವ ಕಂಪ್ಯೂಟರ್ ಬಳಕೆ ಮಾಡಿಕೊಂಡು ಅವರಿಗೆ ಆನ್‌ಲೈನ್ ಮುಖಾಂತರ ಪ್ರಶ್ನೆ ಪತ್ರಿಕೆಗಳ ಮಾದರಿ ಅನುಸರಿ ಪರೀಕ್ಷಾ ಪೂರ್ವ ತಯಾರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಈ ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಟಿ. ಕೃಷ್ಣಮೂರ್ತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ನಾಗಮಣಿ ಹೊಸಮನಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಜ್ಮೀರ ಅಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಮೆಟ್ರಿಕ್ ಪೂರ್ವ ವಸತಿ ನಿಲಯಗಳ ನಿಲಯಪಾಲಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.