ಸಾರಾಂಶ
ಕನ್ನಡ ಪ್ರಭ ವಾರ್ತೆ ಚಿತ್ತಾಪುರ
ತಾಲೂಕಿನ ಕರದಾಳ ಗ್ರಾಮದಲ್ಲಿರುವ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಬಾಲಕಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.ಮೃತ ವಿದ್ಯಾರ್ಥಿನಿ ಕರದಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕಡಬುರ ಗ್ರಾಮದ ಭಾಗ್ಯಶ್ರಿ ಸಾಯಬಣ್ಣ (೧೬)ಎಂದು ಗುರುತಿಸಲಾಗಿದೆ.
ಕಳೆದ ಕೆಲ ದಿನಗಳಿಂದ ಹೊಟ್ಟೆನೋವು ಬೆನ್ನುನೋವಿನಿಂದ ಬಳಲುತ್ತಿದ್ದು ವಸತಿ ನಿಲಯದ ವಾರ್ಡನ್ ಅವರಿಗೆ ತಿಳಿಸಿದರೂ ಸಹಿತ ಆಸ್ಪತ್ರೆಗೆ ತೋರಿಸಿ ಚಿಕಿತ್ಸೆ ಕೊಡಿಸದೇ ಬೇಜವಾಬ್ದಾರಿ ತೋರಿದ್ದಾರೆ. ಶುಕ್ರವಾರ ನೋವು ಹೆಚ್ಚಾಗಿದ್ದರಿಂದ ಪಾಲಕರಿಗೆ ಕರೆ ಮಾಡಿ ತಿಳಿಸಿದ್ದಾಳೆ. ಪಾಲಕರು ಶಿವರಾತ್ರಿ ಅಂಗವಾಗಿ ಕಾರ್ಯಕ್ರಮದಲ್ಲಿರುವುದರಿಂದ ನಾಳೆ ಬರುವುದಾಗಿ ತಿಳಿಸಿದ್ದಾರೆ. ಆದ್ದರಿಂದ ನೋವು ತಾಳಲಾರದೇ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕೆ ನೇರವಾಗಿ ಹಾಸ್ಟಲ್ ವಾರ್ಡನ್ ಮತ್ತು ವಸತಿ ನಿಲಯಕ್ಕೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆ ಎಂದು ಬಾಲಕಿಯ ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.ಭಾಗ್ಯಶ್ರೀ ಸಹಪಾಠಿ ಹೇಳುವಂತೆ ಎರಡು ಮೂರು ದಿನದಿಂದ ಬೆನ್ನುನೋಯುತ್ತಿದೆ ಎಂದು ಹೇಳುತ್ತಿದ್ದಳು. ವಾರ್ಡನ್ ಅವರಿಗೂ ಇದನ್ನು ಹೇಳಿದ್ದಳು. ಆದರೆ ಅವರು ಆಸ್ಪತ್ರೆಗೆ ಕರೆದುಕೊಂಡು ಹೋಗಿರಲಿಲ್ಲ. ಮಧ್ಯಾಹ್ನ ಊಟಕ್ಕೂ ಬರಲಿಲ್ಲ ನನಗೆ ಬೆನ್ನು ನೋಯುತ್ತಿದೆ. ನೀವು ಊಟ ಮಾಡಿ ಎಂದು ನಮಗೆ ಹೇಳಿದ್ದಳು. ನಾವು ಊಟ ಮಾಡಿ ಹೋರಗಡೆ ಓದುತ್ತಾ ಕುಳಿತ್ತಿದ್ದೇವು, ಸಂಜೆ ರೂಮಿನ ಬಾಗಿಲು ಬಡಿದಾಗ ಬಾಗಿಲು ತೆಗೆಯದೇ ಇರುವಾಗ ಅಡುಗೆ ಸಿಬ್ಬಂದಿಗೆ ಹೇಳಿ ಬಂದು ನೋಡಿದಾಗ ಭಾಗ್ಯಶ್ರೀ ನೇಣು ಬಿಗಿದುಕೊಂಡು ಮೃತಪಟ್ಟಿರುವುದು ಕಂಡು ಬಂದಿದೆ ಎಂದು ಸಹಪಾಠಿಗಳು ಪೊಲೀಸ್ ಅಧಿಕಾರಗಳಿಗೆ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಬಾಲಕಿ ಸಾವಿನ ನಿಖರವಾದ ಮಾಹಿತಿ ಸಿಗದೇ ಇರುವದರಿಂದ ಬಾಲಕಿ ಸಾವಿಗೆ ಮರಣೋತ್ತರ ಪರೀಕ್ಷೆ ಮತ್ತು ಪೊಲೀಸರ ತನಿಖೆಯಿಂದ ಸೂಕ್ತ ಕಾರಣ ತಿಳಿಯಲಿದೆ.ಘಟನೆ ಸ್ಥಳಕ್ಕೆ ಸೇಡಂ ಸಹಾಯಕ ಆಯುಕ್ತ ಆಶಪ್ಪ ಪೂಜಾರಿ, ತಹಸೀಲ್ದಾರರು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನುರ ಹಾಗೂ ಪೊಲೀಸ್ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.