ಫೆ.10ರಿಂದ ಪಲ್ಲಕ್ಕಿ ಉತ್ಸವ, ಸಪ್ತಭಜನೆ ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದು, ಫೆ. 17ರಂದು ಮಹಾರಥೋತ್ಸವ ಜರುಗಲಿದೆ

ಕುಷ್ಟಗಿ: ಫೆ.17ರಂದು ನಡೆಯುವ ದೋಟಿಹಾಳದ ಶುಖಮುನಿ ಶ್ರೀಗಳ ಜಾತ್ರೆಯನ್ನು ಶ್ರದ್ಧಾಭಕ್ತಿಯಿಂದ ಗ್ರಾಮದ ಕೀರ್ತಿ ಹೆಚ್ಚಿಸುವಂತೆ ಆಚರಣೆ ಮಾಡಬೇಕು ಎಂದು ದೇವಸ್ಥಾನ ಕಮಿಟಿ ಅಧ್ಯಕ್ಷ ತಹಸೀಲ್ದಾರ್‌ ಅಶೋಕ ಶಿಗ್ಗಾಂವಿ ಹೇಳಿದರು.

ತಾಲೂಕಿನ ದೋಟಿಹಾಳ ಗ್ರಾಮದ ಶ್ರೀಅವಧೂತ ಶುಖಮುನಿಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ ನಡೆದ ಶುಖಮುನಿ ಶ್ರೀಗಳ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಫೆ.10ರಿಂದ ಪಲ್ಲಕ್ಕಿ ಉತ್ಸವ, ಸಪ್ತಭಜನೆ ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದು, ಫೆ. 17ರಂದು ಮಹಾರಥೋತ್ಸವ ಜರುಗಲಿದೆ ಎಂದ ಅವರು, ದೇವಸ್ಥಾನದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯ ಕುರಿತು ಗಮನಕ್ಕಿದ್ದು ದೇವಸ್ಥಾನದ ಅಭಿವೃದ್ದಿ ಮಾಡಲು ಖಾತೆಯಲ್ಲಿ ಹಣದ ಕೊರತೆ ಇದ್ದು, ಆದ್ದರಿಂದ ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳ ಸಹಕಾರ ಪಡೆದುಕೊಂಡು ದೇವಸ್ಥಾನದ ಅಭಿವೃದ್ಧಿಯತ್ತ ಗಮನಹರಿಸಲಾಗುವದು. ಇದಕ್ಕೆ ಗ್ರಾಮಸ್ಥರ ಸಹಕಾರ ಭಾಗವಹಿಸುವಿಕೆ ಮುಖ್ಯವಾಗಿದೆ. ಗ್ರಾಪಂ ಮೂಲಭೂತ ಸೌಕರ್ಯ ಒದಗಿಸುವ ಮೂಲಕ ಜಾತ್ರೆಯ ಯಶಸ್ವಿಗೆ ಪ್ರಮುಖ ಪಾತ್ರ ವಹಿಸಬೇಕು ಎಂದರು.

ಕುಷ್ಟಗಿ ಪಿಎಸೈ ಹನುಮಂತಪ್ಪ ತಳವಾರ ಮಾತನಾಡಿ, ನಿರ್ಮಲ ಮನಸ್ಸಿನಿಂದ ಶುಖಮುನಿ ಶ್ರೀಗಳ ಜಾತ್ರಾಮಹೋತ್ಸವ ಆಚರಣೆ ಮಾಡಬೇಕು. ಪಲ್ಲಕ್ಕಿ ಉತ್ಸವದಲ್ಲಿ ಕಮೀಟಿಯ ಪದಾಧಿಕಾರಿಗಳು ಜವಾಬ್ದಾರಿ ವಹಿಸಿದ ಸಂಘಟನೆಗಳೊಂದಿಗೆ ಭಾಗವಹಿಸಿ ಅಹಿಕರ ಘಟನೆಗಳು ನಡೆಯದಂತೆ ತಡೆಯುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.

ವಾರಗಳ ಕಾಲ ನಡೆಯುವ ಪಲ್ಲಕ್ಕಿ ಉತ್ಸವದಲ್ಲಿ ಯುವಕರು ಮಧ್ಯಪಾನ ಸೇವಿಸಿ ಪಾಲ್ಗೊಳ್ಳಬಾರದು, ಕಾನೂನೂ ವ್ಯವಸ್ಥೆಗೆ ಧಕ್ಕೆ ತರಬಾರದು ಜಾತ್ರೆಯನ್ನು ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಬೇಕು. ಯುವಕರು ಎಚ್ಚರಿಕೆಯಿಂದ ಉತ್ಸವ ನಡೆಸಬೇಕು, ಅಹಿತಕರ ಘಟನೆಗಳಿಗೆ ಆಸ್ಪದ ಕೊಡಬಾರದು ರಾತ್ರಿ ಹತ್ತು ಗಂಟೆಯ ಒಳಗಡೆ ಪಲ್ಲಕ್ಕಿ ಉತ್ಸವ ಮುಗಿಸಬೇಕು ಒಂದು ವಾರದ ಜಾತ್ರಾಮಹೋತ್ಸವ ಕಾರ್ಯಕ್ರಮ ಸಂಪೂರ್ಣ ಚಿತ್ರೀಕರಣ ಮಾಡಲಾಗುವದು ಎಂದರು.

ಸಾರಿಗೆ ಇಲಾಖೆಯ ಅಧಿಕಾರಿ ಜಯಪ್ರಕಾಶ ಮಾತನಾಡಿ, ಜಾತ್ರಾ ಸಂದರ್ಭದಲ್ಲಿ ಮೂರು ದಿನಗಳ ಕಾಲ ವಿಶೇಷ ಬಸ್ ವ್ಯವಸ್ಥೆ ಮಾಡಲಾಗುವುದು ನಮಗೆ ಪಾರ್ಕಿಂಗ್ ಸ್ಥಳಾವಕಾಶ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.

ದೋಟಿಹಾಳ ಗ್ರಾಪಂ ಪಿಡಿಒ ನಾಗರತ್ನ ಮ್ಯಾಳಿ ಜಾತ್ರಾ ಸಂದರ್ಭದಲ್ಲಿ ಅಗತ್ಯವಿರುವ ಕುಡಿಯುವ ನೀರು, ಸ್ವಚ್ಛತೆ ಹಾಗೂ ಬೀದಿದೀಪ ದುರಸ್ಥಿ ಕಾರ್ಯ,ಅನೇಕ ಕೆಲಸ ಕಾರ್ಯ ಮಾಡಲಾಗುವದು ಎಂದರು.

ಗ್ರಾಮದ ಮುಖಂಡ ಹನಮಂತರಾವ ದೇಸಾಯಿ ಮಾತನಾಡಿ, ಶುಖಮುನಿ ಶ್ರೀಗಳ ಜಾತ್ರೆಯು ವರ್ಷದಿಂದ ವರ್ಷಕ್ಕೆ ವೈಭವದಿಂದ ಜರುಗುತ್ತಿದ್ದು, ಕಳೆದ ಕೆಲ ವರ್ಷಗಳ ಹಿಂದೆ ನಡೆದ ಅಹಿತಕರ ಘಟನೆಯಲ್ಲಿ ಕೆಲ ವಿದ್ಯಾವಂತ ಯುವಕರ ಮೇಲೆ ಕೇಸ್‌ಗಳು ದಾಖಲಾಗಿದ್ದು, ಅವುಗಳನ್ನು ಖುಲಾಸೆ ಮಾಡುವ ನಿಟ್ಟಿನಲ್ಲಿ ತಹಸೀಲ್ದಾರರು, ಶಾಸಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ವಿನಂತಿಸಿಕೊಂಡರು.

ಈ ಸಂದರ್ಭ ಕಂದಾಯ ನೀರಿಕ್ಷಕ ಅಬ್ದುಲ್ ರಜಾಕ ಮದಲಗಟ್ಟಿ, ಗ್ರಾಮಾಡಳಿತಾಧಿಕಾರಿ ಮೌನೇಶ ಮಡಿವಾಳರ, ಕಂದಾಯ ಇಲಾಖೆ ಸಿಬ್ಬಂದಿ ಸುಂದರರಾಜ, ಆರೋಗ್ಯ ಇಲಾಖೆ ಮೇಲ್ವಿಚಾರಕ ರವೀಂದ್ರ ನಂದಿಹಾಳ, ರಾಮನಗೌಡ ಬಿಜ್ಜಲ, ದೊಡ್ಡನಗೌಡ ಮಾಟೂರು, ಶಿವನಗೌಡ ಪಾಟೀಲ,ರಾಜಶೇಖರ ಹೊಕ್ರಾಣಿ, ಸುರೇಶ ಹುನಗುಂದ, ಶ್ರೀನಿವಾಸ ಕಂಟ್ಲಿ, ಕರಿಯಪ್ಪ ಪೂಜಾರ, ಗುಡುಸಾಬ್‌ ಕೊಳ್ಳಿ ನಾರಾಯಣಪ್ಪ ಕೊಳ್ಳಿ, ಬಾಲಾಜಿ ಭೋವಿ, ಶೇಖಪ್ಪ ದೊಡ್ಡಮನಿ, ಶಾಮಿದಸಾಬ್‌ ಮುಜಾವರ,ಹನಮಂತರಾವ ದೇಸಾಯಿ, ಕಲ್ಲಯ್ಯಸ್ವಾಮಿ ಸರಗಣಚಾರಿ, ಮುತ್ತಣ್ಣ ಕಾಟಾಪೂರ, ದಾದೇಸಾಬ್‌ ವಾಲಿಕಾರ, ರಾಘವೇಂದ್ರ ಕುಂಬಾರ, ಸೇರಿದಂತೆ ಅನೇಕರು ಇದ್ದರು.

ಮೂಲಸೌಕರ್ಯ ಒದಗಿಸುವ ಕುರಿತು ಹಾಗೂ ಜಾತ್ರೆಯಲ್ಲಿ ಪೆಂಡಾಲ ವ್ಯವಸ್ಥೆ ಸೇರಿದಂತೆ ಹಲವು ಸಲಹೆ ಗ್ರಾಮಸ್ಥರು ತಿಳಿಸಿದರು. ಶ್ರೀನಿವಾಸ ಕಂಟ್ಲಿ,ಬಸವರಾಜ ಗಾಣಿಗೇರ ಜಾತ್ರೆಯಲ್ಲಿ ಇಲಾಖೆವಾರು ಮಾಹಿತಿ ಮಳಿಗೆ ಹಾಕಬೇಕು, ರಥ ಬೀದಿಯಲ್ಲಿ ರಂಗೋಲಿಯ ಚಿತ್ತಾರ ಬಿಡಿಸಬೇಕು, ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಮನವಿ ಸಲ್ಲಿಸಿದರು.