ಇಂದಿನಿಂದ ದೋಟಿಹಾಳ ಶುಖಮುನಿ ತಾತನ ಪಲ್ಲಕ್ಕಿ ಉತ್ಸವ ಪ್ರಾರಂಭ

| Published : Feb 20 2025, 12:45 AM IST

ಇಂದಿನಿಂದ ದೋಟಿಹಾಳ ಶುಖಮುನಿ ತಾತನ ಪಲ್ಲಕ್ಕಿ ಉತ್ಸವ ಪ್ರಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ದೋಟಿಹಾಳದಲ್ಲಿ ನಡೆಯುವ ಶುಖಮುನಿ ತಾತನ ಜಾತ್ರೆಯು ಈ ಭಾಗದಲ್ಲಿ ದೊಡ್ಡ ಜಾತ್ರೆ ಎಂದು ಹೆಸರು ವಾಸಿಯಾಗಿದೆ. ಇಂದಿನಿಂದ ಆರಂಭವಾಗುವ ಪಲ್ಲಕ್ಕಿ ಉತ್ಸವವೂ ಬೆಳಗ್ಗೆ ಮತ್ತು ಸಂಜೆ ಎಂಟು ದಿನ ಸಡಗರ-ಸಂಭ್ರಮದಿಂದ ಜರುಗಲಿದೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ:

ಭಾವೈಕ್ಯತೆಯ ಜಾತ್ರೆಗೆ ಸಾಕ್ಷಿಯಾದ ತಾಲೂಕಿನ ದೋಟಿಹಾಳ ಗ್ರಾಮದ ಶ್ರೀಅವಧೂತ ಶುಕಮುನಿ ತಾತನ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಇಂದು (ಫೆ. 20) ಪಲ್ಲಕ್ಕಿ ಉತ್ಸವದ ಮೂಲಕ ಜಾತ್ರೆಗೆ ಚಾಲನೆ ಸಿಗಲಿದೆ.

ಗ್ರಾಮದಲ್ಲಿ ನಡೆಯುವ ಶುಖಮುನಿ ತಾತನ ಜಾತ್ರೆಯು ಈ ಭಾಗದಲ್ಲಿ ದೊಡ್ಡ ಜಾತ್ರೆ ಎಂದು ಹೆಸರು ವಾಸಿಯಾಗಿದೆ. ಇಂದಿನಿಂದ ಆರಂಭವಾಗುವ ಪಲ್ಲಕ್ಕಿ ಉತ್ಸವವೂ ಬೆಳಗ್ಗೆ ಮತ್ತು ಸಂಜೆ ಎಂಟು ದಿನ ಸಡಗರ-ಸಂಭ್ರಮದಿಂದ ಜರುಗಲಿದೆ.

ಶುಖಮುನಿ ತಾತನ ಜಾತ್ರೆಯ ಸಂಭ್ರಮವನ್ನು ಹೆಚ್ಚಿಸಲು ದೇವಸ್ಥಾನದ ಕಮಿಟಿ ಅಧ್ಯಕ್ಷರಾದ ತಹಸೀಲ್ದಾರ್‌ರು, ದೇವಸ್ಥಾನದ ಕಮಿಟಿ, ದೋಟಿಹಾಳ ಹಾಗೂ ಕೇಸೂರು ಗ್ರಾಪಂ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

ಪಲ್ಲಕ್ಕಿ ಉತ್ಸವಕ್ಕೆ ಚಾಲನೆ:

ಫೆ. 27ರಂದು ಶಿವರಾತ್ರಿ ಅಮವಾಸ್ಯೆಯಂದು ನಡೆಯುವ ಶುಖಮುನಿ ತಾತನ ಜಾತ್ರೆಯ ಅಂಗವಾಗಿ ಫೆ. 20ರಂದು ಬೆಳಗ್ಗೆ ಶುಖಮುನಿ ತಾತನ ಭಾವಚಿತ್ರ ಮೆರವಣಿಗೆಯ ನಂತರ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ಸಿಗಲಿದೆ. ಗುರುವಾರ ಆರಂಭವಾದ ಪಲ್ಲಕ್ಕಿ ಉತ್ಸವದ ಮೆರವಣಿಗೆ ಎಂಟು ದಿನ ಭಾಜಾ ಭಜಂತ್ರಿ, ವಾದ್ಯಮೇಳಗಳೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ನಡೆಯುತ್ತದೆ. ಸುತ್ತಲಿನ ಹತ್ತಾರು ಹಳ್ಳಿಗಳ ಭಕ್ತರು ಭಾಗವಹಿಸುತ್ತಾರೆ.

ಅನ್ನದಾಸೋಹ:

ಶುಖಮುನಿ ತಾತನ ಪಲ್ಲಕ್ಕಿ ಉತ್ಸವ ಆರಂಭಗೊಂಡ ಮೊದಲ ದಿನದಿಂದ ಅನ್ನ ದಾಸೋಹ ಆರಂಭಗೊಳ್ಳಲಿದೆ. ಭಕ್ತರಿಗೆ ಅನ್ನ ಸಾಂಬಾರು. ಉದುರು ಸಜ್ಜಕ. ಗೋದಿ ಹುಗ್ಗಿ. ಶಿರಾ, ರೊಟ್ಟಿ, ಬದನೇಕಾಯಿ, ಸವತೆಕಾಯಿ ಪಲ್ಯೆ, ಸಂಡಿಗೆ, ಹಪ್ಪಳ, ಜಿಲೆಬಿ, ಮಿರ್ಚಿ ಸೇರಿದಂತೆ ವಿವಿಧ ತರಹದ ಭೋಜನ ತಯಾರಿಸಲಾಗುತ್ತಿದೆ.

ಪಲ್ಲಕ್ಕಿಗೆ ಸಾಮೂಹಿಕ ಪೂಜೆ:

ದೋಟಿಹಾಳ, ಕೇಸೂರು, ಜಾಲಿಹಾಳ, ರ್‍ಯಾವಣಕಿ, ಹೆಸರೂರು, ಮಾಟೂರು, ಗುಡಿಕಲಕೇರಿ, ನಡುವಲಕೊಪ್ಪ, ಕಡೇಕೊಪ್ಪ ಗ್ರಾಮಗಳಲ್ಲಿ ಮೊದಲೆ ನಿಯೋಜನೆ ಮಾಡಿದ ಸ್ಥಳಗಳಲ್ಲಿ ಶುಖಮುನಿ ತಾತನ ಪಲ್ಲಕ್ಕಿಗೆ ಸಾಮೂಹಿಕ ಪೂಜೆಯನ್ನು ಮಾಡುವ ಅವಕಾಶ ನೀಡಲಾಗಿದೆ.

ಸಪ್ತಭಜನೆ:

ಫೆ. 20ರಂದು ಆರಂಭಗೊಂಡ ಸಪ್ತಭಜನೆ ಕಾರ್ಯಕ್ರಮವು ದಿನದ 24 ತಾಸು ನಡೆಯುತ್ತಿದ್ದು ಈ ಸಪ್ತ ಭಜನೆಯ ಕಾರ್ಯಕ್ರಮದಲ್ಲಿ ದೋಟಿಹಾಳ ಸೇರಿದಂತೆ ಸುತ್ತಲ ಹತ್ತಾರು ಗ್ರಾಮಗಳ ಜನರು ಭಾಗವಹಿಸುತ್ತಾರೆ. ಈ ಸಪ್ತ ಭಜನೆಯು ಫೆ. 27ರಂದು ಸಮಾಪ್ತಿಗೊಂಡು ನಂತರ ಸಂಜೆ ಮಹಾರಥೋತ್ಸವು ಜರುಗಲಿದೆ.ದೋಟಿಹಾಳ ಶುಖಮುನಿ ತಾತನ ಜಾತ್ರೆಯ ಅಂಗವಾಗಿ ಗ್ರಾಮಗಳಲ್ಲಿ ಬೀದಿ ದೀಪಗಳ ಜೋಡಣೆ, ಸ್ವಚ್ಛತೆ ಹಾಗೂ ಕುಡಿಯುವ ನೀರಿನ ಸಮಸ್ಯೆಯು ಬಾರದಂತೆ ಮುಂಜಾಗೃತೆ ಹಾಗೂ ರಥಬೀದಿ ಸ್ವಚ್ಛಗೊಳಿಸಲು ಕ್ರಮಕೈಗೊಳ್ಳಲಾಗಿದೆ. ತಾತ್ಕಾಲಿಕವಾಗಿ ಶೌಚಾಲಯ, ಸ್ನಾನಗೃಹಗಳ ನಿರ್ಮಾಣಕ್ಕೆ ಮುಂದಾಗುತ್ತೇವೆ ಎಂದು ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ ಹೇಳಿದ್ದಾರೆ.ಪಲ್ಲಕ್ಕಿ ಉತ್ಸವದ ಜವಾಬ್ದಾರಿಯನ್ನು ಸಂಘಟಕರಿಗೆ ವಹಿಸಿಕೊಡಲಾಗಿದೆ. ದಾಸೋಹ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗುತ್ತದೆ. ಮಾದರಿ ಜಾತ್ರೆಯನ್ನಾಗಿ ಮಾಡಲು ಕ್ರಮಕೈಗೊಳ್ಳಲಾಗಿದೆ ದೇವಸ್ಥಾನ ಕಮಿಟಿ ಅಧ್ಯಕ್ಷ ಹಾಗೂ ತಹಸೀಲ್ದಾರ್‌ ಅಶೋಕ ಶಿಗ್ಗಾಂವಿ ತಿಳಿಸಿದ್ದಾರೆ.