ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ:ಬೇಸಿಗೆ ರಜೆ ಮುಗಿಸಿ ಸರ್ಕಾರಿ ಶಾಲೆಗಳು ಮೇ 29ರಿಂದ ಆರಂಭವಾಗಲಿದ್ದರೂ ರಾಜ್ಯದಲ್ಲಿ ಈ ವರೆಗೂ (ಮೇ 25) ಶೇ. 55ರಷ್ಟು ಮಾತ್ರ ಪುಸ್ತಕಗಳು ಸರಬರಾಜಾಗಿದೆ. ಹೀಗಾಗಿ ಶಾಲಾರಂಭದ ದಿನವೇ ಎಲ್ಲ ಮಕ್ಕಳಿಗೂ ಪಠ್ಯ ಪುಸ್ತಕ ದೊರೆಯುವುದು ಅನುಮಾನ.
ಬುಧವಾರದಿಂದ ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಪ್ರಾರಂಭವಾಗಲಿವೆ. ಇದಕ್ಕಾಗಿ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಬಿಇಒ, ಮುಖ್ಯೋಪಾಧ್ಯಾಯರ ಸಭೆ ನಡೆಸಿ ಶಾಲಾ ಪ್ರಾರಂಭೋತ್ಸವ ಯಾವ ರೀತಿ ಮಾಡಬೇಕು ಎಂಬುದರ ಕುರಿತು ಮಾಹಿತಿ ನೀಡಲಾಗಿದೆ. ಹಬ್ಬದಂತೆ ಶಾಲೆಗಳಿಗೆ ತಳಿರು-ತೋರಣ ಕಟ್ಟಿ ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತಿಸುವಂತೆ ಸೂಚಿಸಲಾಗಿದೆ. ಅದೇ ದಿನ ಎಲ್ಲ ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯ ಪುಸ್ತಕ ವಿತರಿಸಬೇಕೆಂಬ ಇರಾದೆ ಇಲಾಖೆಯದ್ದು. ಆದರೆ ಸರ್ಕಾರ ಮಾತ್ರ ಈ ವರೆಗೆ ಶೇ.55ರಷ್ಟು ಮಾತ್ರ ಪುಸ್ತಕ ಪೂರೈಕೆ ಮಾಡಿದೆ.ಬೇಡಿಕೆ- ಪೂರೈಕೆ:
ರಾಜ್ಯದಲ್ಲಿ ಬರೋಬ್ಬರಿ 12,28,42,221 ಪಠ್ಯ ಪುಸ್ತಕಗಳ ಬೇಡಿಕೆ ಇದೆ. ಇದರಲ್ಲಿ ಸರ್ಕಾರಿ ಶಾಲೆಗಳಿಗೆ ಅಂದರೆ ಉಚಿತವಾಗಿ ವಿತರಿಸಲು 8,42,56,246 ಪುಸ್ತಕ ಬೇಕಿದ್ದರೆ, ಪುಸ್ತಕ ಖರೀದಿಸಿ ಮಕ್ಕಳಿಗೆ ನೀಡುವ ಖಾಸಗಿ ಶಾಲೆಗಳಿಗೆ 3,85,85,975 ಪುಸ್ತಕಗಳ ಬೇಡಿಕೆ ಈ ವರ್ಷವಿತ್ತು. ಇದರಲ್ಲಿ ಉಚಿತವಾಗಿ ವಿತರಿಸಲು 5,03,02471 ಹಾಗೂ ಖಾಸಗಿ ಶಾಲೆಗಳು ವಿತರಿಸಲು 2,82,45116 ಪುಸ್ತಕಗಳು ಬಂದಿಳಿದಿವೆ. ಅಂದರೆ ಬರೋಬ್ಬರಿ ಶೇ. 63ರಷ್ಟು ಪುಸ್ತಕಗಳು ಆಯಾ ಜಿಲ್ಲೆಗಳಿಗೆ ಬಂದಂತಾಗಿದೆ. ಅದರಲ್ಲಿ ಬಿಇಒಗಳ ಬಳಿ ಈಗಾಗಲೇ 4,27,87,524 ಹಾಗೂ 2,47,42,734 (ಖಾಸಗಿ ಶಾಲೆ) ಪುಸ್ತಕಗಳು ತಲುಪಿವೆ. ಅಲ್ಲಿಂದ ಶಾಲೆಗಳಿಗೆ ರವಾನೆಯಾಗಿವೆ. ಇನ್ನು 4,42,94,634 ಪುಸ್ತಕಗಳು ಬರಬೇಕಿದೆ.ಶಾಲಾರಂಭೋತ್ಸವಕ್ಕೆ ಈಗ ಉಳಿದಿರುವುದು ಬರೀ ನಾಲ್ಕೇ ದಿನ. ಈ ನಾಲ್ಕೇ ದಿನದಲ್ಲಿ ಶೇ. 39ರಷ್ಟು ಪುಸ್ತಕಗಳು ಎಲ್ಲ ಜಿಲ್ಲೆಗಳಿಗೆ ಬರುತ್ತವೆ ಎಂಬ ಪ್ರಶ್ನೆ ಶಿಕ್ಷಕರು ಹಾಗೂ ಶಿಕ್ಷಣ ಪ್ರೇಮಿಗಳದ್ದು. ಆದರೆ ಅಧಿಕಾರಿ ವರ್ಗ ಮಾತ್ರ ಪ್ರತಿದಿನ ಪುಸ್ತಕಗಳ ಸರಬರಾಜು ನಡೆಯುತ್ತಲೇ ಇದೆ. ಹೀಗಾಗಿ ನಾಲ್ಕು ದಿನದಲ್ಲಿ ಬಾಕಿಯುಳಿದಿರುವ ಪುಸ್ತಕಗಳು ಸರಬರಾಜು ಆಗುತ್ತವೆ. ಇದರಲ್ಲಿ ಯಾವುದೇ ಸಂಶಯ ಬೇಡ. ಶಾಲಾ ಪ್ರಾರಂಭದ ದಿನವೇ ಎಲ್ಲ ಮಕ್ಕಳಿಗೆ ಪುಸ್ತಕ ಹಾಗೂ ಸಮವಸ್ತ್ರ ನೀಡಿ ಅದ್ಧೂರಿಯಾಗಿ ಸ್ವಾಗತಿಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಪುಸ್ತಕ ಬ್ಯಾಂಕ್ ಬಳಸಿಕೊಳ್ಳಲು ಇಲಾಖೆ ನಿರ್ಧರಿಸಿದೆ.
ಪುಸ್ತಕ ಬ್ಯಾಂಕ್:ಒಂದು ವೇಳೆ ಎಲ್ಲ ಪುಸ್ತಕಗಳು ಬಾರದಿದ್ದರೆ ಬಹುತೇಕ ಎಲ್ಲ ಶಾಲೆಗಳಲ್ಲಿ ಪುಸ್ತಕ ಬ್ಯಾಂಕ್ ಮಾಡಲಾಗಿದೆ. ಹಳೆಯ ಪುಸ್ತಕಗಳನ್ನು ಸಂಗ್ರಹಿಸಿಡಲಾಗಿದೆ. ಸರ್ಕಾರದಿಂದ ಬಾಕಿ ಪುಸ್ತಕ ಬರುವವರೆಗೂ ಹಳೆ ಪುಸ್ತಕಗಳಲ್ಲೇ ನಿರ್ವಹಣೆ ಮಾಡುವ ಯೋಚನೆ ಶಿಕ್ಷಕ ಸಮುದಾಯದ್ದು.
ಒಟ್ಟಿನಲ್ಲಿ ಶಿಕ್ಷಕ ಸಮುದಾಯದಲ್ಲೀಗ ಪುಸ್ತಕದ ಬಗ್ಗೆ ಚರ್ಚೆಯಂತೂ ನಡೆಯುತ್ತಲೇ ಇದೆ. ಕಳೆದ ವರ್ಷ ಎರಡ್ಮೂರು ತಿಂಗಳಾದರೂ ಎಲ್ಲ ಮಕ್ಕಳಿಗೆ ಪುಸ್ತಕ ಸಿಕ್ಕಿರಲಿಲ್ಲ. ಈ ಸಲವಾದರೂ ಸಿಗುತ್ತದೆಯೋ ಅಥವಾ ಸರ್ಕಾರ ಕಳೆದ ವರ್ಷದಂತೆಯೇ ಮಾಡುತ್ತದೆಯೋ ಎಂಬುದನ್ನು ಕಾಯ್ದು ನೋಡಬೇಕಿದೆ ಅಷ್ಟೇ!ಧಾರವಾಡ ಜಿಲ್ಲೆಗೆ ಶೇ. 50ಕ್ಕೂ ಹೆಚ್ಚು ಪುಸ್ತಕಗಳ ಸರಬರಾಜು ಆಗಿದೆ. ಇನ್ನೂ ನಾಲ್ಕು ದಿನಗಳಿವೆ. ಅಷ್ಟರೊಳಗೆ ಎಲ್ಲ ಪುಸ್ತಕಗಳು ಸರಬರಾಜು ಆಗಲಿವೆ. ಮಕ್ಕಳಿಗೆ ಶಾಲಾರಂಭದ ದಿನವೇ ಪುಸ್ತಕಗಳನ್ನು ವಿತರಿಸಲಾಗುವುದು ಎಂದು ಡಿಡಿಪಿಐ ಎಸ್.ಎಸ್. ಕೆಳದಿಮಠ ಹೇಳಿದ್ದಾರೆ.