ಸರ್ಕಾರದ ಭವಿಷ್ಯದ ಬಗ್ಗೆ ಅನುಮಾನ

| Published : Oct 11 2025, 01:00 AM IST

ಸಾರಾಂಶ

ಸಂಪುಟ ವಿಸ್ತರಣೆ ವಿಚಾರವಾಗಿ ಸಿಎಂ ಬೆಂಬಲಿಗರು ಡಿಸಿಎಂ ಬಣಕ್ಕೆ ಬೆದರಿಕೆಯೊಡ್ಡುವ ರೀತಿಯಲ್ಲಿ ಹೇಳಿಕೆ ನೀಡುತ್ತಿರುವುದನ್ನು ಗಮನಿಸಿದರೆ ಸರ್ಕಾರದ ಭವಿಷ್ಯದ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ಶಿವಮೊಗ್ಗ: ಸಂಪುಟ ವಿಸ್ತರಣೆ ವಿಚಾರವಾಗಿ ಸಿಎಂ ಬೆಂಬಲಿಗರು ಡಿಸಿಎಂ ಬಣಕ್ಕೆ ಬೆದರಿಕೆಯೊಡ್ಡುವ ರೀತಿಯಲ್ಲಿ ಹೇಳಿಕೆ ನೀಡುತ್ತಿರುವುದನ್ನು ಗಮನಿಸಿದರೆ ಸರ್ಕಾರದ ಭವಿಷ್ಯದ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲೇಬೇಕು ಎಂದು ಅವರ ಬೆಂಬಲಿಗರು ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ನಾನೇ ಐದು ವರ್ಷ ಮುಖ್ಯಮಂತ್ರಿ’ ಎಂದು ಹೇಳುತ್ತಲೇ ಇದ್ದಾರೆ. ಈ ಎಲ್ಲಾ ಗೊಂದಲಗಳ ನಡುವೆಯೂ ಹೈಕಮಾಂಡ್ ಮಾತ್ರ ಈ ಬಗ್ಗೆ ಒಮ್ಮೆಯೂ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ದೂರಿದರು.ಸಿದ್ದರಾಮಯ್ಯನವರ ಆಪ್ತರಾದ ಸಲೀಂ ಅಹ್ಮದ್ ಮತ್ತು ಜಮೀರ್ ಅಹ್ಮದ್ ಅವರು ಪದೇ ಪದೇ ಸಚಿವ ಸಂಪುಟ ವಿಸ್ತರಣೆಯ ಕುರಿತು ಹೇಳಿಕೆ ನೀಡುತ್ತಿರುವುದರಿಂದ ಡಿ.ಕೆ.ಶಿವಕುಮಾರ್ ಬಣದಲ್ಲಿರುವ ಸಚಿವರು ತಮ್ಮ ಸ್ಥಾನ ಎಲ್ಲಿ ಬದಲಾವಣೆ ಆಗುತ್ತದೆಯೋ ಎಂಬ ಭಯದಲ್ಲಿದ್ದಾರೆ. ಈ ಎಲ್ಲಾ ಆಂತರಿಕ ಕಲಹಗಳನ್ನು ಗಮನಿಸಿದರೆ, ಈ ಸರ್ಕಾರ ಉಳಿಯುವುದೇ ಕಷ್ಟ. ಈ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುತ್ತದೆಯೇ ಅಥವಾ ರಾಷ್ಟ್ರಪತಿ ಆಳ್ವಿಕೆ ಬರುತ್ತದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಹೇಳಿದರು.ಇತ್ತೀಚೆಗೆ ಮಠಾಧೀಶರೊಬ್ಬರು ಸಿಎಂ ಸಿದ್ದರಾಮಯ್ಯನವರ ಎದೆ ಬಗೆದರೆ ಬಸವಣ್ಣ ಕಾಣುತ್ತಾರೆ ಎಂದು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಕೆಲವು ಮಠಾಧೀಶರು ಮುಖ್ಯಮಂತ್ರಿಗಳ ಬಾಲಂಗೋಚಿಗಳಾಗಿದ್ದಾರೆ. ಸಿದ್ದರಾಮಯ್ಯನವರ ಎದೆ ಬಗೆದರೆ ಬಸವಣ್ಣನವರ ಬದಲು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಕಾಣಿಸುತ್ತಾರೆ. ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಸಿಎಂ ಅವರು ಅವರಿಬ್ಬರನ್ನು ತಮ್ಮ ಎದೆಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಟೀಕಿಸಿದರು.ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಕೆಲ ಮಠಾಧೀಶರು ಜಾತಿ ಜನಗಣತಿಯಲ್ಲಿ ಹಿಂದೂ ಎಂದು ಬರೆಸಿ ಎನ್ನುತ್ತಾರೆ. ಬೆಂಗಳೂರಿನ ಮತ್ತೊಂದು ಸಮಾವೇಶದಲ್ಲಿ ಲಿಂಗಾಯತ ಎಂದು ಬರೆಸಿ ಎನ್ನುತ್ತಾರೆ. ಇದನ್ನು ನೋಡಿದರೆ ಮಠಾಧೀಶರು ಅವಕಾಶವಾದಿಗಳಾಗಿದ್ದಾರೆ ಎಂದು ಅನಿಸುತ್ತದೆ ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಈ.ವಿಶ್ವಾಸ್, ಮಹಾಲಿಂಗಯ್ಯ ಶಾಸ್ತ್ರಿ, ಉಮೇಶ್ ಆರಾಧ್ಯ ಇದ್ದರು.

ಕುರುಬ ಸಮಾಜ ಎಸ್ಟಿ ವರ್ಗಕ್ಕೆ:

ಸಿಎಂ ತಮ್ಮ ಅಭಿಪ್ರಾಯ ತಿಳಿಸಲಿ

ಕುರುಬ ಸಮಾಜವನ್ನು ಎಸ್ಟಿ ವರ್ಗಕ್ಕೆ ಸೇರಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಪಷ್ಟ ಅಭಿಪ್ರಾಯವನ್ನು ತಿಳಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಬೇಕೆಂದು ಹೇಳುತ್ತಿದ್ದಾರೆ ವಿನಹ ಏಕೆ, ಏನೂ ಎಂಬ ಬಗ್ಗೆ ಯಾವುದೇ ಸ್ಪಷ್ಟಪಡಿಸುತ್ತಿಲ್ಲ. ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ ಉಗ್ರಪ್ಪ ಮತ್ತು ಮುಖ್ಯಮಂತ್ರಿಗಳ ನಡುವೆ ಒಂದು ರೀತಿಯ ವಾಕ್ ಸಮರವೇ ಆಗಿದೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಉಗ್ರಪ್ಪ ಅವರಿಗೆ ಸ್ಪಷ್ಟವಾಗಿ ಹೇಳುವುದನ್ನು ಬಿಟ್ಟು ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸುವ ವಿಚಾರದ ಬಗ್ಗೆ ನಾನು ಹೋರಾಟ ಮಾಡಿದ್ದಲ್ಲ, ಅದು ಕೆ.ಎಸ್.ಈಶ್ವರಪ್ಪ ಅವರು ಮಾಡಿದ್ದರು ಎಂದಿದ್ದಾರೆ. ಮುಖ್ಯಮಂತ್ರಿಯ ಈ ಹೇಳಿಕೆಗೆ ನಾನು ಬದ್ಧನಿದ್ದೇನೆ. ಅವರು ಸತ್ಯವನ್ನೇ ಹೇಳಿದ್ದಾರೆ ಎಂದರು.

ನಾನು ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸುವ ಬಗ್ಗೆ ಹೋರಾಟವನ್ನು ಆರಂಭಿಸಿದ್ದೆ. ಕಾಗಿನೆಲೆ ಶ್ರೀಗಳಾದ ನಿರಂಜನಾನಂದಪುರಿ ಶ್ರೀಗಳ ನೇತೃತ್ವದಲ್ಲಿ ದೆಹಲಿಗೂ ನಿಯೋಗವನ್ನು ಕರೆದುಕೊಂಡು ಹೋಗಿದ್ದೆವು. ಆ ಸಂದರ್ಭದಲ್ಲಿ ಒಂದು ಸಮಿತಿಯನ್ನೂ ರಚಿಸಲಾಗಿತ್ತು. ಈ ಸಮಿತಿಯಲ್ಲಿ ಎಚ್.ಎಂ.ರೇವಣ್ಣ, ಭಂಡ್ಯಪ್ಪ ಕಾಶಂಪುರ್ ಸೇರಿದಂತೆ ಕುರುಬ ಸಮಾಜದ ಸಂಘಟನೆಗಳು ಕಾಗಿನೆಲೆಯಿಂದ ಬೆಂಗಳೂರುವರೆಗೆ 350 ಕಿ.ಮೀ. ಪಾದಯಾತ್ರೆ ಮಾಡಿದ್ದೆವು. ಬೆಂಗಳೂರಿನಲ್ಲಿ 10 ಲಕ್ಷ ಜನ ಸೇರಿದ್ದರು. ಈ ಸಮಾವೇಶಕ್ಕೆ ಸಿದ್ದರಾಮಯ್ಯ ಬಂದಿರಲಿಲ್ಲ. ಆಗಿನ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಂಪುಟ ಸಭೆಯಲ್ಲಿ ಇದನ್ನು ಅಂಗೀಕರಿಸಿ, ಆದೇಶ ಹೊರಡಿಸಿದ್ದರು ಎಂದು ವಿವರಿಸಿದರು.ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಬೇಕೆಂಬುದು ಈಗಲೂ ನನ್ನ ಅಭಿಪ್ರಾಯವಾಗಿದೆ. ಆದರೆ, ಇದರಿಂದ ಬೇರೆ ಯಾವುದೇ ಸಮಾಜದವರಿಗೆ ತೊಂದರೆಯಾಗಬಾರದು. ಬೇಕಾದರೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು. ಮುಖ್ಯವಾಗಿ ವಾಲ್ಮೀಕಿ ಸಮಾಜದವರಿಗೆ ತೊಂದರೆಯಾಗಬಾರದು. ಎಲ್ಲಾ ಹಿಂದುಳಿದ ಜಾತಿಗಳಿಗೂ ನೋವಾಗದಂತೆ ಮೀಸಲಾತಿಯನ್ನು ಕಲ್ಪಿಸಬೇಕಾದುದು ರಾಜ್ಯ ಸರ್ಕಾರದ ಹೊಣೆ ಎಂದರು.