ಸಾರಾಂಶ
ಶಿವಮೊಗ್ಗ: ಸರ್ಕಾರಿ ಕೆಲಸ ಪಡೆಯುವಲ್ಲಿ ಆಗುತ್ತಿರುವ ವಿಳಂಬ, ಇತರೆ ಸಮಸ್ಯೆಗಳ ಕುರಿತು ನ್ಯಾಯಮೂರ್ತಿಗಳು ಹಾಗೂ ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರ ಎದುರು ಸಾರ್ವಜನರು ದೂರಿನ ಮಳೆ ಸುರಿಸಿದರು.ನಗರದ ಕುವೆಂಪು ರಂಗಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಸಾರ್ವಜನಿಕರಿಂದ ಕುಂದುಕೊರತೆಗಳ ಬಗ್ಗೆ ದೂರು ಸ್ವೀಕಾರ, ವಿಚಾರಣೆ ಹಾಗೂ ವಿಲೇವಾರಿ ಸಭಾ ಕಾರ್ಯಕ್ರಮದಲ್ಲಿ ವಿವಿಧ ಸರ್ಕಾರಿ ಇಲಾಖೆಗಳು, ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸುಮಾರು 160 ದೂರುಗಳು ಸ್ವೀಕೃತಗೊಂಡಿದ್ದು, ವಿಚಾರಣೆ ಕೈಗೊಂಡು, 35 ಅರ್ಜಿಗಳನ್ನು ಉಪ ಲೋಕಾಯುಕ್ತರು ವಿಚಾರಣೆ ನಡೆಸಿದರು.ಮಹಾನಗರಪಾಲಿಕೆ, ಕಂದಾಯ ಇಲಾಖೆ, ಗ್ರಾ.ಪಂ ಗಳು, ಕುವೆಂಪು ವಿಶ್ವವಿದ್ಯಾಲಯ, ಅರಣ್ಯ ಇಲಾಖೆ, ಪಿಡಬ್ಲ್ಯುಡಿ, ಸಹಕಾರ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವಿರುದ್ಧ ಅರ್ಜಿದಾರರು ದೂರನ್ನು ಸಲ್ಲಿಸಿದರು.
ಉಪ ಲೋಕಾಯುಕ್ತರು ದೂರುಗಳ ವಿಚಾರಣೆ ನಡೆಸಿ, ಮಧ್ಯಾಹ್ನದ ಹೊತ್ತಿಗೆ ಸ್ಥಳದಲ್ಲೇ 35 ಅರ್ಜಿಗಳನ್ನು ವಿಲೇವಾರಿ ಮಾಡಿದರು. ತಮ್ಮ ವ್ಯಾಪ್ತಿಗೆ ಒಳಪಡದ ಪ್ರಕರಣಗಳಿಗೆ ಎಲ್ಲಿ ಹೋಗಬೇಕೆಂದು ಮಾರ್ಗದರ್ಶನ ಮಾಡಿದರಲ್ಲದೇ, 3 ಲಕ್ಷ ರು. ದೊಳಗಿನ ಆದಾಯ ಇರುವ ದೂರುದಾರರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು ಪಡೆಯಲು ಸಲಹೆ ನೀಡಿದರು.ಭದ್ರಾವತಿ ತಾಲೂಕಿನ ಸಿದ್ಲೀಪುರ ಗ್ರಾಮದ ಆರ್.ರವಿ ಎಂಬುವವರು ಭದ್ರಾವತಿ ತಹಸೀಲ್ದಾರರು, ಎಡಿಎಲ್‌ಆರ್ ವಿರುದ್ಧ ದೂರು ಸಲ್ಲಿಸಿ, ಪೋಡಿ ಮಾಡಿಕೊಡುವಂತೆ ಕೋರಿದರು. ಈ ವೇಳೆ ದೂರುದಾರರಿಗೆ ನಿಯಮಾನುಸಾರ ಪೋಡಿಗೆ ಅರ್ಜಿ ಸಲ್ಲಿಸುವಂತೆ ಉಪ ಲೋಕಾಯುಕ್ತರು ತಿಳಿಸಿದರು.
ಕುವೆಂಪು ವಿವಿಯ ಪ್ರೊ.ರವೀಂದ್ರ ಅವರು ಹಳೆ ಪಿಂಚಣಿಯನ್ನು ಮುಂದುವರೆಸುವಂತೆ ಕುವೆಂಪು ವಿವಿಯ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ವಿರುದ್ಧ ದೂರು ಸಲ್ಲಿಸಿದರು. ಈ ವೇಳೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ವಿಶ್ವವಿದ್ಯಾಲಯದಲ್ಲೇ ಈ ಪ್ರಕರಣವನ್ನು ಇತ್ಯರ್ಥಪಡಿಸಿ ಕೊಳ್ಳುವಂತೆ ಉಪ ಲೋಕಾಯುಕ್ತರು ತಿಳಿಸಿದರು.ವಿನೋಬನಗರದ ಎಸ್.ಸಿ.ಪ್ರಕಾಶ್‌ರವರು ಕಟ್ಟಡದಲ್ಲಿ ಬಹು ಮಹಡಿಗಳನ್ನು ಕಟ್ಟುತ್ತಲೇ ಹೋಗುತ್ತಿರುವ ಬಗ್ಗೆ ಪಾಲಿಕೆಯ ಆಯುಕ್ತರ ವಿರುದ್ಧ ದೂರು ನೀಡಿದಾಗ, ಉಪ ಲೋಕಾಯುಕ್ತರು ಈ ಕುರಿತಂತೆ ಸಂಬಂಧಿಸಿದ ಪಾಲಿಕೆ ಆಯುಕ್ತರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.ಕಾರ್ಗಲ್‌ನ ಸೀತಾಕಟ್ಟೆ ಜೋಗದ ಶಂಕರ್ ರವರು ಕಾರ್ಗಲ್‌ನ ವಲಯ ಅರಣ್ಯಾಧಿಕಾರಿಗಳು ತಮ್ಮ ಅರ್ಜಿ ಬಾಕಿ ಇರುವಾಗಲೆ ಕಾನೂನು ಬಾಹಿರವಾಗಿ ಜಮೀನಿನಿಂದ ನಮ್ಮನ್ನು ಒಕ್ಕಲೆಬ್ಬಿಸಿದ್ದಾರೆ ಎಂದು ದೂರು ನೀಡಿದರು, ಲೋಕಾಯುಕ್ತರು ಇದನ್ನು ಪರಿಶೀಲಿಸಿ ಕಾನೂನುಬಾಹಿರವಾಗಿ ಒಕ್ಕಲೆಬ್ಬಿಸಿದ್ದರೆ ಸೂಕ್ತ ಪರಿಹಾರ ನೀಡಬೇಕೆಂದು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.
ಶಿವಮೊಗ್ಗ ಅಶೋಕ ನಗರದ ಎ.ಸುಮತಿ ಮತ್ತು ಎ.ಸರೋಜರವರು ಪ್ರತ್ಯೇಕವಾಗಿ ವಾರ್ಡ್ ನಂ 31ರ ವಿಷಯ ನಿರ್ವಾಹಕ ಗುರುಮೂರ್ತಿಯವರ ಕುರಿತು ಮನೆ ಖಾತೆ ವಿಚಾರವಾಗಿ ಪಾಲಿಕೆ ಆಯುಕ್ತರ ವಿರುದ್ಧ ದೂರು ನೀಡಿದರು. ಈ ದೂರಿನ ವಿಚಾರಣೆ ನಡೆಸಿ ಸ್ಥಳದಲ್ಲೇ ವಿಲೇವಾರಿ ಮಾಡಿ ದೂರುದಾರರಿಗೆ ಖಾತೆಗಳನ್ನು ನೀಡಲಾಯಿತು.ಶಿವಮೊಗ್ಗದ ಬಿ.ಮಂಜುನಾಥ್ ತಮ್ಮ ಜಮೀನಿನಲ್ಲಿ ರಸ್ತೆ ನಿರ್ಮಾಣವಾಗಿದ್ದು, ಅದನ್ನು ತೆರವುಗೊಳಿಸುವಂತೆ ಕೋರಿದರು. ಉಪ ಲೋಕಾಯುಕ್ತರು ಈ ರಸ್ತೆ ಸರ್ಕಾರಿ ಅಥವಾ ಖಾಸಗಿ ಜಮೀನಿನಲ್ಲಿ ಇದೆಯಾ ಎಂದು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದರು.
ಬೆಳಿಗ್ಗೆಯಿಂದಲೇ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತದ ವತಿಯಿಂದ ಪ್ರತ್ಯೇಕ ಕೌಂಟರ್‌ಗಳನ್ನು ತೆರೆದು ಸಾರ್ವಜನಿಕರಿಂದ ಕುಂದುಕೊರತೆಗಳ ದೂರು ಅರ್ಜಿಗಳನ್ನು ಸ್ವೀಕರಿಸಿ ಅವರಿಗೆ ಟೋಕನ್ ನಂ. ನೀಡಿ ಸಭೆ ಸರಾಗವಾಗಿ ಜರುಗುವಂತೆ ವ್ಯವಸ್ಥೆ ಮಾಡಲಾಗಿತ್ತು.ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ. ಸಿಇಒ ಎನ್.ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕರಾದ ಎನ್.ಆರ್.ಲೋಕಪ್ಪ, ಜಿ.ವಿ.ವಿಜಯನಂದ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಎಸ್ ಸಂತೋಷ್, ಸಿವಿಲ್ ನ್ಯಾಯಾಧೀಶರಾದ ಕಿರಣ್ ಪಿ.ಎಂ. ಪಾಟೀಲ್, ಲೋಕಾಯುಕ್ತ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಂಜುನಾಥ್ ಚೌಧರಿ, ಜಿಲ್ಲಾ ಅರಣ್ಯಾಧಿಕಾರಿ ಶಿವಶಂಕರ್, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.