ಸಾರಾಂಶ
ಸರ್ಕಾರ ಮಹಿಳೆಯರ ಜೀವನನೋಪಾಯ ನಿರ್ವಹಣೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರ್ಥಿಕ ಸದೃಢರಾಗಿ ಸಬಲರಾಗಬೇಕೆಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಸರ್ಕಾರ ಮಹಿಳೆಯರ ಜೀವನನೋಪಾಯ ನಿರ್ವಹಣೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರ್ಥಿಕ ಸದೃಢರಾಗಿ ಸಬಲರಾಗಬೇಕೆಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು. ನಗರದ ಸಾಮರ್ಥ್ಯ ಸೌಧದಲ್ಲಿ ಶನಿವಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆ ವತಿಯಿಂದ ನೊಂದಾಯಿತ ಕಾರ್ಮಿಕರಿಗೆ ವೆಲ್ಡರ್ ,ಟೈಲ್ಸ್ ಕಿಟ್ ಹಾಗೂ ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯಿಂದ ಉಚಿತ ಹೊಲಿಗೆಯಂತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಪುರುಷರಷ್ಟೇ ಸರಿಸಮಾನವಾಗಿ ನಿಲ್ಲಬೇಕೆಂಬ ದೃಷ್ಟಿಯಿಂದ ಸರ್ಕಾರ ಹತ್ತಾರು ಕಾರ್ಯಕ್ರಮಗಳನ್ನು ರೂಪಿಸಿದ್ದು ಇದಕ್ಕೆ ಪೂರಕವಾಗಿ ಖಾಸಗಿ ಸಂಘ ಸಂಸ್ಥೆಗಳು ಸಹ ಬೆಂಬಲ ನೀಡುತ್ತಿವೆ. ಮಹಿಳೆಯರು ಕುಟುಂಬ ನಿರ್ವಹಣೆಯ ಜೊತೆಗೆ ತಮ್ಮ ನಿತ್ಯದ ಖರ್ಚಿಗಾಗಿ ಸ್ವ ಉದ್ಯೋಗ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ನೀಡಲಾಗುತ್ತಿದ್ದು ಬಳಕೆ ಮಾಡಿಕೊಂಡು ಆರ್ಥಿಕ ಸದೃಢರಾಗಿ ಸ್ವಾವಲಂಬಿಗಳಾಗಬೇಕು. ಕಾರ್ಮಿಕರ ಯೋಗಕ್ಷೇಮಕ್ಕಾಗಿ ನಾನು ಮೊದಲ ಬಾರಿ ಶಾಸಕನಾಗಿದ್ದಾಗ ನಗರದಲ್ಲಿ ಕಾರ್ಮಿಕರಿಗಾಗಿ ಇಎಸ್‌ಐ ಆಸ್ಪತ್ರೆಯನ್ನು ಪ್ರಾರಂಭಿಸಿದ್ದೆ ಆಗ ಕಟ್ಟಡದ ಸಮಸ್ಯೆಯಿತ್ತು. ಈಗ ಅದಕ್ಕಾಗಿ ಜಾಗ ನೋಡಿದ್ದು ಮುಂದಿನ ದಿನಗಳಲ್ಲಿ ಆಸ್ಪತ್ರೆ ಆರಂಭಿಸಿ ಕಾರ್ಮಿಕರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಮಾತನಾಡಿ, ವಂದನಾ ವಿಕಾಸ ಕೇಂದ್ರದ ಮೂಲಕ ಪರಿಶಿಷ್ಟ ಮಹಿಳೆಯರ ಜೀವನೋಪಾಯಕ್ಕಾಗಿ ನೈಸರ್ಗಿಕವಾಗಿ ಸಿಗುವ ಸಂಪನ್ಮೂಲಗಳನ್ನು ಬಳಸಿಕೊಂಡು ಮೌಲ್ಯವರ್ಧನೆ ಮಾಡಿ ಅವುಗಳನ್ನು ಮಾರಾಟ ಮಾಡುವ ಮೂಲಕ ಉದ್ಯೋಗ ಕಲ್ಪಿಕೊಡಲಾಗಿದೆ. ಇದಕ್ಕಾಗಿ 15ಲಕ್ಷ ರು. ಅನುದಾನ ಬಂದಿದ್ದು 7.5ಲಕ್ಷರು. ವಿನಿಯೋಗಿಸಲಾಗಿದೆ ಎಂದರು. ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ಇಲಾಖೆಯ ಅಧಿಕಾರಿ ಉಮಾದೇವಿ ಮಾತನಾಡಿ, ಮಹಿಳೆಯರ ಸ್ವಾವಲಂಬಿ ಜೀವನ ಕಟ್ಟಿಕೊಡುವ ನಿಟ್ಟಿನಲ್ಲಿ ನಮ್ಮ ಇಲಾಖೆ ಹಲವು ಕಾರ್ಯಕ್ರಮಗಳನ್ನು ತಂದಿದೆ. ಪ್ರಸ್ತುತ ಸುಮಾರು 5ಲಕ್ಷದ 40ಸಾವಿರ ರು. ವೆಚ್ಚದಲ್ಲಿ 36 ಫಲಾನುಭವಿಗಳಿಗೆ ಉಚಿತ ಹೊಲಿಗೆಯಂತ್ರ ನೀಡಲಾಗುತ್ತಿದ್ದು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು. ಕಾರ್ಮಿಕ ಇಲಾಖೆಯ ಅಧಿಕಾರಿ ಸುಶೀಲಮ್ಮ ಮಾತನಾಡಿ, ನೋಂದಾಯಿತ ಕಟ್ಟಡ ಕಾರ್ಮಿಕರ ಯೋಗಕ್ಷೇಮಕ್ಕಾಗಿ ಇಲಾಖೆಯು ವಿವಿದ ಸೌಲಭ್ಯಗಳನ್ನು ನೀಡುತ್ತಿದೆ. ತಾಲೂಕಿನಲ್ಲಿ 12ಸಾವಿರಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ಈ ಬಾರಿ 21ಜನರಿಗೆ ವೆಲ್ಡರ್ ಕಿಟ್ ಹಾಗೂ 28 ಜನರಿಗೆ ಟೈಲ್ಸ್ ಕಿಟ್ ನೀಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರ, ವೆಲ್ಡರ್ ಕಿಟ್, ಟೈಲ್ಸ್ ಕಿಟ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ತಾ.ಪಂ ವ್ಯವಸ್ಥಾಪಕ ಹೇಮಣ್ಣ ಸೇರಿದಂತೆ ಎನ್‌ಆರ್‌ಎಲ್‌ಎಂ ಸಿಬ್ಬಂದಿಗಳು, ವಿವಿಧ ಫಲಾನುಭವಿಗಳು ಭಾಗವಹಿಸಿದ್ದರು.