ಮೈಷುಗರ್ ಪ್ರೌಢಶಾಲೆ ಕಾರ್ಖಾನೆ ವತಿಯಿಂದಲೇ ನಿರ್ವಹಣೆ: ಸಿ.ಡಿ.ಗಂಗಾಧರ್

| Published : Jul 06 2025, 01:49 AM IST

ಮೈಷುಗರ್ ಪ್ರೌಢಶಾಲೆ ಕಾರ್ಖಾನೆ ವತಿಯಿಂದಲೇ ನಿರ್ವಹಣೆ: ಸಿ.ಡಿ.ಗಂಗಾಧರ್
Share this Article
  • FB
  • TW
  • Linkdin
  • Email

ಸಾರಾಂಶ

ಮೈಷುಗರ್ ಶಾಲೆ ಯಾರ ಅಪ್ಪನದು ಎಂದು ಕೇಳುವ ಹಕ್ಕು ಎಚ್.ಡಿ.ಕುಮಾರಸ್ವಾಮಿ ಅವರಿಗಿಲ್ಲ. ಶಾಲೆ 16 ಸಾವಿರ ಜನ ಷೇರುದಾರರಿಗೆ ಸೇರಿದೆ. ಶಾಲೆ ಅಭಿವೃದ್ಧಿಗೆ ಎಷ್ಟು ಕೋಟಿಯಾದರೂ ನೀಡಲು ಸಿದ್ಧ ಎಂದಿರುವ ಕೇಂದ್ರ ಸಚಿವರು ತಮ್ಮ ಮಾತಿನಂತೆ ಅಗತ್ಯವಾದ ಹಣವನ್ನು ಠೇವಣಿ ಇಡಲಿ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮೈಷುಗರ್ ಪ್ರೌಢಶಾಲೆಯನ್ನು ಖಾಸಗಿಯವರಿಗೆ ವಹಿಸುವುದಿಲ್ಲ. ರಾಜ್ಯ ಸರ್ಕಾರದ ಸ್ಪಷ್ಟ ನಿರ್ದೇಶನದಂತೆ ಕಾರ್ಖಾನೆ ವತಿಯಿಂದಲೇ ನಿರ್ವಹಣೆಗೆ ಕ್ರಮ ವಹಿಸಲಾಗುವುದು ಎಂದು ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳ ದಾಖಲಾತಿ ಕುಸಿತದಿಂದಾಗಿ ಮೈಷುಗರ್ ಪ್ರೌಢಶಾಲೆ ನಿರ್ವಹಣೆಯನ್ನು ಟೆಂಡರ್ ಕರೆದು ಖಾಸಗಿಯವರಿಗೆ ವಹಿಸಲು ತೀರ್ಮಾನಿಸಲಾಗಿತ್ತೇ ಹೊರತು ಮಾರಾಟಕ್ಕೆ ನಿರ್ಧರಿಸಿರಲಿಲ್ಲ ಎಂದರು.

ಮೈಷುಗರ್ ಶಾಲೆ ಯಾರ ಅಪ್ಪನದು ಎಂದು ಕೇಳುವ ಹಕ್ಕು ಎಚ್.ಡಿ.ಕುಮಾರಸ್ವಾಮಿ ಅವರಿಗಿಲ್ಲ. ಶಾಲೆ 16 ಸಾವಿರ ಜನ ಷೇರುದಾರರಿಗೆ ಸೇರಿದೆ. ಶಾಲೆ ಅಭಿವೃದ್ಧಿಗೆ ಎಷ್ಟು ಕೋಟಿಯಾದರೂ ನೀಡಲು ಸಿದ್ಧ ಎಂದಿರುವ ಕೇಂದ್ರ ಸಚಿವರು ತಮ್ಮ ಮಾತಿನಂತೆ ಅಗತ್ಯವಾದ ಹಣವನ್ನು ಠೇವಣಿ ಇಡಲಿ ಎಂದು ಆಗ್ರಹಿಸಿದರು.

ಪಟ್ಟಣದಲ್ಲಿ ನಡೆದ ಜನರೊಂದಿಗೆ ಜನತಾದಳ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಜೆಡಿಎಸ್ ಪಕ್ಷವನ್ನು ಕಟ್ಟಿದ್ದ ಸಿದ್ದರಾಮಯ್ಯ ಅವರನ್ನು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ವರಿಷ್ಠರು ಪಕ್ಷದಿಂದ ಹೊರಹಾಕಿದರು ಎಂದು ದೂರಿದರು.

ಜೆಡಿಎಸ್ ಕುಟುಂಬದ ಪಕ್ಷವೇ ಹೊರತು ಜನರ ಪಕ್ಷವಾಗಿ ಬೆಳೆದಿಲ್ಲ. ಸಿದ್ದರಾಮಯ್ಯ ಪಕ್ಷದ್ರೋಹ ಮಾಡಿ ಕಾಂಗ್ರೆಸ್ ಪಕ್ಷ ಸೇರಿಲ್ಲ. ಎಚ್.ಡಿ.ದೇವೇಗೌಡರನ್ನು ಪ್ರಧಾನಿಯನ್ನಾಗಿ, ತಂದೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಆ ನಾಯಕರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಎಂದು ಕಿಡಿಕಾರಿದರು.

ಇದೇ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ತಾಲೂಕು ಉಸ್ತುವಾರಿ ಚಿನಕುರುಳಿ ರಮೇಶ್, ಮುಖಂಡ ಎಂ.ಡಿ.ಕೃಷ್ಣಮೂರ್ತಿ ನಿಖಿಲ್ ಕುಮಾರಸ್ವಾಮಿ ಹೇಳಿಕೆಯನ್ನು ಖಂಡಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಕಾಂಗ್ರೆಸ್ ಪರಿಶಿಷ್ಠ ಜಾತಿ ವಿಭಾಗದ ಅಧ್ಯಕ್ಷ ರಾಜಯ್ಯ, ಗ್ಯಾರಂಟಿ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ಮುಖಂಡರಾದ ಟಿ.ಎನ್.ದಿವಾಕರ್, ಬಸ್ತಿ ರಂಗಪ್ಪ ಸೇರಿದಂತೆ ಹಲವರು ಇದ್ದರು.