ಸರ್ವರಿಗೂ ಸಮಾನ ಹಕ್ಕು ನೀಡಿದ ಡಾ.ಅಂಬೇಡ್ಕರ್‌

| Published : Apr 15 2025, 12:55 AM IST

ಸಾರಾಂಶ

ಡಾ.ಬಿ.ಆರ್.ಅಂಬೇಡ್ಕರ್‌ವರು ನಮ್ಮ ಭಾರತ ದೇಶಕ್ಕೆ ಅತ್ಯುನ್ನತವಾದಂತ ಸಂವಿಧಾನವನ್ನು ಸಮರ್ಪಿಸಿದ್ದು, ಇಂದು ನಮ್ಮ ಸಂವಿಧಾನವು ವಿಶ್ವದಲ್ಲಿಯೇ ಅತ್ಯಂತ ಮಹತ್ವದ ಹಾಗೂ ಶ್ರೇಷ್ಠವಾದಂತ ಸಂವಿಧಾನವಾಗಿರುವುದು ಹೆಮ್ಮೆಯ ವಿಷಯ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಡಾ.ಬಿ.ಆರ್.ಅಂಬೇಡ್ಕರ್‌ವರು ನಮ್ಮ ಭಾರತ ದೇಶಕ್ಕೆ ಅತ್ಯುನ್ನತವಾದಂತ ಸಂವಿಧಾನವನ್ನು ಸಮರ್ಪಿಸಿದ್ದು, ಇಂದು ನಮ್ಮ ಸಂವಿಧಾನವು ವಿಶ್ವದಲ್ಲಿಯೇ ಅತ್ಯಂತ ಮಹತ್ವದ ಹಾಗೂ ಶ್ರೇಷ್ಠವಾದಂತ ಸಂವಿಧಾನವಾಗಿರುವುದು ಹೆಮ್ಮೆಯ ವಿಷಯ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಪಟ್ಟಣದ ಗುರುಭವನದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯತಿ, ಸಮಾಜಕಲ್ಯಾಣ ಮತ್ತು ಪುರಸಭೆ ಸಂಯುಕ್ತಾಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ವರ ೧೩೪ನೇ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸಮಾನತೆಯೊಂದಿಗೆ ಸರ್ವ ಸಮುದಾಯದವರಿಗೂ ಸಮಾನ ಹಕ್ಕನ್ನು ನೀಡಿದಂತ ಧೀಮಂತ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರವರಾಗಿದ್ದು, ದೇಶದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಮಹಾನ್ ನಾಯಕರ ವಿಚಾರಧಾರೆಗಳನ್ನು ನಾವೆಲ್ಲ ಮೈಗೂಡಿಸಿಕೊಳ್ಳಬೇಕು ಎಂದರು.

ಕಸಾಪ ಅಧ್ಯಕ್ಷ ಡಾ.ವೈ.ಎಂ.ಯಾಕೊಳ್ಳಿ ಉಪನ್ಯಾಸಕರಾಗಿ ಮಾತನಾಡಿ, ಸಮಾಜದಲ್ಲಿ ಹಿಂದುಳಿದವರ ಶೈಕ್ಷಣಿಕ ಅಭಿವೃದ್ಧಿಗೆ ಚಿಂತನೆ ಮಾಡಿ ದೇಶದಲ್ಲಿ ಪ್ರತಿಯೊಬ್ಬರು ವಿದ್ಯಾವಂತರಾಗಲು ಅವಕಾಶ ಕಲ್ಪಿಸಿದ ಡಾ.ಬಿ.ಆರ್.ಅಂಬೇಡ್ಕರವರ ಜೀವನ ಚರಿತ್ರೆ ಕುರಿತು ವಿವರಿಸಿದರು.ತಹಸೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಹಾಗೂ ಸಮಾಜದ ಗಣ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು. ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚನ್ನವರ, ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಯಲ್ಲಮ್ಮಾ ದೇವಸ್ಥಾನ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ, ಬಿಇಒ ಮೋಹನ ದಂಡಿನ, ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿನಮಠ, ಎಚ್.ಎ.ಕದ್ರಾಪೂರ, ಡಾ.ಅನಿಲ ಮರಲಿಂಗಣ್ಣವರ, ತಾಪಂ ಇಒ ಆನಂದ ಬಡಕುಂದರಿ, ಸಿಪಿಐ ಧರ್ಮಾಕರ ಧರ್ಮಟ್ಟಿ, ರತ್ನಾ ಕದಮ್, ಸುನೀತಾ ಪಾಟೀಲ, ಸಮಾಜದ ಮುಖಂಡರಾದ ರುದ್ರಪ್ಪ ಚಲವಾದಿ, ಯಲ್ಲಪ್ಪ ಗೊರವನಕೊಳ್ಳ, ಶಿವಾನಂದ ಅಮಾತೆನ್ನವರ, ಬಾಬು ಕಾಳೆ, ಎಂ.ಮಲ್ಲಪ್ಪ, ಬಸವರಾಜ ತಳವಾರ, ಮಹದೇವ ಬಡ್ಲಿ ಸೇರಿದಂತೆ ಸಮಾಜದ ಮುಖಂಡರು ಮತ್ತು ತಾಲೂಕುಮಟ್ಟದ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಆರ್.ಆರ್.ಕುಲಕರ್ಣಿ ಸ್ವಾಗತಿಸಿದರು. ಅಂಬೇಡ್ಕರವರ ಉತ್ಸವ ಮೂರ್ತಿಯ ಮೆರವಣಿಗೆಗೆ ಶಾಸಕ ವೈದ್ಯ ಚಾಲನೆ

ಕಾರ್ಯಕ್ರಮದ ಪೂರ್ವದಲ್ಲಿ ಅಂಬೇಡ್ಕರ್‌ ನಗರದಿಂದ ಪ್ರಾರಂಭಗೊಂಡ ಡಾ.ಬಾಬಾಸಾಹೇಬ ಅಂಬೇಡ್ಕರವರ ಉತ್ಸವ ಮೂರ್ತಿಯ ಮೆರವಣಿಗೆಗೆ ಶಾಸಕ ವಿಶ್ವಾಸ ವೈದ್ಯ ಚಾಲನೆ ನೀಡಿದರು. ಮೆರವಣಿಗೆಯು ವಿವಿಧ ವಾದ್ಯಮೇಳಗಳ ಮೂಲಕ ಆನಿ ಅಗಸಿ ಮಾರ್ಗವಾಗಿ ದೇಸಾಯಿ ಕೋಟೆಯ ಹತ್ತಿರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರವರ ಪುತ್ಥಳಿ ಸ್ಥಳಕ್ಕೆ ತಲುಪಿತು. ಗಣ್ಯರು ಹಾಗೂ ಅಧಿಕಾರಿಗಳು ಅಂಬೇಡ್ಕರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.