ಖಾನಾಪುರ ಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿ ಕ್ಷೇತ್ರದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾ.ಅಂಜಲಿ ನಿಂಬಾಳಕರ ಅವರು ಅಡ್ಡಿಯಾಗುತ್ತಿದ್ದಾರೆ ಎಂದು ಶಾಸಕ ವಿಠ್ಠಲ ಹಲಗೇಕರ ತಮ್ಮ ಹೇಳಿಕೆಯೊಂದರಲ್ಲಿ ಆರೋಪಿಸಿದ್ದು, ಈ ಆರೋಪವನ್ನು ಶಾಸಕರು ದಾಖಲೆ ಸಮೇತ ಸಾಬೀತುಪಡಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಶಹರ ಘಟಕದ ಅಧ್ಯಕ್ಷ ಮಹಾಂತೇಶ ರಾಹೂತ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಖಾನಾಪುರ
ಖಾನಾಪುರ ಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿ ಕ್ಷೇತ್ರದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾ.ಅಂಜಲಿ ನಿಂಬಾಳಕರ ಅವರು ಅಡ್ಡಿಯಾಗುತ್ತಿದ್ದಾರೆ ಎಂದು ಶಾಸಕ ವಿಠ್ಠಲ ಹಲಗೇಕರ ತಮ್ಮ ಹೇಳಿಕೆಯೊಂದರಲ್ಲಿ ಆರೋಪಿಸಿದ್ದು, ಈ ಆರೋಪವನ್ನು ಶಾಸಕರು ದಾಖಲೆ ಸಮೇತ ಸಾಬೀತುಪಡಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಶಹರ ಘಟಕದ ಅಧ್ಯಕ್ಷ ಮಹಾಂತೇಶ ರಾಹೂತ ಆಗ್ರಹಿಸಿದರು.ಪಟ್ಟಣದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗೆ ಡಾ.ಅಂಜಲಿ ಎಂದಿಗೂ ಅಡ್ಡಿಪಡಿಸಿಲ್ಲ. ಶಾಸಕರು ಡಾ.ಅಂಜಲಿ ವಿರುದ್ಧ ಮಾಡುತ್ತಿರುವ ಆರೋಪ ಆಧಾರರಹಿತವಾಗಿದ್ದು, ಶಾಸಕರ ಆರೋಪವನ್ನು ಪಕ್ಷ ಖಂಡಿಸುತ್ತದೆ ಎಂದರು.ವಾಸ್ತವವಾಗಿ ಶಾಸಕ ಹಲಗೇಕರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳು ಮುಗಿದರೂ ಅವರಿಂದ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾಮಗಾರಿಗಳು ಆಗುತ್ತಿಲ್ಲ. ಡಾ.ನಿಂಬಾಳಕರ ಅವರು ಶಾಸಕರಾಗಿದ್ದಾಗ ಮಂಜೂರಾಗಿದ್ದ ಕಾಮಗಾರಿಗಳನ್ನು ಹೊರತುಪಡಿಸಿದರೇ ಕ್ಷೇತ್ರಕ್ಕೆ ಯಾವುದೇ ಹೊಸ ಕೆಲಸ ಮಂಜೂರು ಮಾಡಿಸುವಲ್ಲಿ ಶಾಸಕರು ಪ್ರಯತ್ನಿಸಿಲ್ಲ. ಇಲ್ಲಿಯ ಸಮಸ್ಯೆಗಳನ್ನು ಮುಖ್ಯಮಂತ್ರಿಗಳು ಮತ್ತು ಸಚಿವರ ಗಮನಕ್ಕೆ ತಂದು ಅವರಿಂದ ಕ್ಷೇತ್ರಕ್ಕೆ ಅನುದಾನ ಮಂಜೂರು ಮಾಡಿಸುವ ಯಾವುದೇ ಪ್ರಯತ್ನಗಳು ಅವರಿಂದ ಆಗಿಲ್ಲ. ಹೀಗಾಗಿ ಇಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ತಮ್ಮ ತಪ್ಪು ಮುಚ್ಚಿಹಾಕುವ ಸಲುವಾಗಿ ಹಲಗೇಕರ ಅವರು ಮಾಜಿ ಶಾಸಕರತ್ತ ಬೆರಳು ತೋರಿಸುತ್ತಿದ್ದಾರೆ ಎಂದು ದೂರಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ (ಗ್ರಾಮೀಣ) ಈಶ್ವರ ಘಾಡಿ ಮಾತನಾಡಿ, ಬಿಡಿಸಿಸಿ ಚುನಾವಣೆಯ ಸಂದರ್ಭದಲ್ಲಿ ಪ್ರತಿ ಪಿಕೆಪಿಎಸ್‌ಗೆ ಸರ್ಕಾರದಿಂದ ₹25 ಲಕ್ಷ ವಿಶೇಷ ಅನುದಾನ ಸಿಕ್ಕಿದೆ ಎಂದು ಹೇಳಿದ ಶಾಸಕರು ಈಗ ಆ ಅನುದಾನ ಎಲ್ಲಿದೆ ಎಂದು ತೋರಿಸಬೇಕು. ಜೊತೆಗೆ ಕ್ಷೇತ್ರದಲ್ಲಿ ಸ್ಥಾನಿಕ ಗುತ್ತಿಗೆದಾರರಿಗೆ ಕೆಲಸ ಸಿಗುತ್ತಿಲ್ಲ. ಹಲವು ತಿಂಗಳಿಂದ ಕೆಡಿಪಿ ಸಭೆ ನಡೆದಿಲ್ಲ. ಅಧಿಕಾರಿಗಳ ಮೇಲೆ ಜನಪ್ರತಿನಿಧಿಗಳ ಹಿಡಿತ ಇಲ್ಲ. ಮುಖ್ಯವಾಗಿ ಅನುದಾನ ಮಂಜೂರಿಗೆ ಶಾಸಕರ ಪಿಎ ಶೇ.20 ಕಮೀಷನ್ ಕೇಳಿದ್ದಾರೆ ಎಂಬ ಆಡಿಯೋ ಕ್ಲಿಪ್ ಒಂದು ಬಹಿರಂಗಗೊಂಡಿದೆ. ಕ್ಷೇತ್ರದಲ್ಲಿ ಸ್ಥಾನಿಕ ಗುತ್ತಿಗೆದಾರರಿಗೆ ಕೆಲಸ ಸಿಗುತ್ತಿಲ್ಲ ಎಂಬ ದೂರಿದೆ. ಈ ಎಲ್ಲ ಸಂಗತಿಗಳ ಶಾಸಕರು ಬಗ್ಗೆ ತಮ್ಮ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಮಹಾದೇವ ಕೋಳಿ, ಸುರೇಶ ಜಾಧವ, ಲಕ್ಷ್ಮಣ ಮಾದಾರ, ಸಾವಿತ್ರಿ ಮಾದಾರ, ದೀಪಾ ಪಾಟೀಲ, ಭರತೇಶ ತೋರೋಜಿ, ತೋಹಿದ ಚಾಂದಖಾನವರ ಹಾಗೂ ಇತರರು ಇದ್ದರು.