ಡಾ. ಅಂಜಲಿಗೆ ಜಿಲ್ಲೆಗೆ ಪರಿಚಯಿಸಿಕೊಳ್ಳುವ ಚಿಂತೆಕಾಗೇರಿಗೆ ಅನಂತ್ ಪ್ರಚಾರಕ್ಕೆ ಬರುತ್ತಿಲ್ಲ ಎಂಬ ಚಿಂತೆ

| Published : Mar 29 2024, 12:50 AM IST

ಡಾ. ಅಂಜಲಿಗೆ ಜಿಲ್ಲೆಗೆ ಪರಿಚಯಿಸಿಕೊಳ್ಳುವ ಚಿಂತೆಕಾಗೇರಿಗೆ ಅನಂತ್ ಪ್ರಚಾರಕ್ಕೆ ಬರುತ್ತಿಲ್ಲ ಎಂಬ ಚಿಂತೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಖಾನಾಪುರದವರು.

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಹೊರಗಿನವರಾಗಿದ್ದು, ಜಿಲ್ಲೆಯ ಜನತೆಗೆ ಪರಿಚಯಿಸಿಕೊಳ್ಳುವುದೇ ದೊಡ್ಡ ಚಿಂತೆಯಾಗಿದೆ. ಬಿಜೆಪಿಯ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸಂಸದ ಅನಂತಕುಮಾರ ಹೆಗಡೆ ಪ್ರಚಾರಕ್ಕೆ ಬರದಿದ್ದರೆ ಏನು ಎನ್ನುವುದು ಸಮಸ್ಯೆಯಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಖಾನಾಪುರದವರು. ಕ್ಷೇತ್ರಕ್ಕೇನೂ ಹೊರಗಿನವರಲ್ಲ. ಆದರೆ ವಿಶಾಲವಾದ ಉತ್ತರ ಕನ್ನಡ ಜಿಲ್ಲೆಗೆ ಹೊರಗಿನವರು. ಹೀಗಾಗಿ ಇಲ್ಲಿನ ಜನತೆ ತನ್ನನ್ನು ಒಪ್ಪಿಕೊಂಡಾರೇ ಎನ್ನುವ ಬೇಗುದಿ ಎದ್ದು ಕಾಣುತ್ತಿದೆ. ಅದೇ ಕಾರಣಕ್ಕೆ ಅವರು ತಮ್ಮ ಪ್ರಚಾರ ಭಾಷಣದಲ್ಲಿ ತಾವು ಹೊರಗಿನವರಲ್ಲ, ಇದೇ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಖಾನಾಪುರ ತಮ್ಮ ಊರು. ನಾನು ಹೊರಗಿನವಳು ಎನ್ನುವವರೂ ನನ್ನ ವಿಧಾನಸಭಾ ಕ್ಷೇತ್ರಕ್ಕೆ ಪ್ರಚಾರಕ್ಕೆ ಬರಲೇಬೇಕಲ್ಲ ಎಂದು ಮತದಾರರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ.

6 ಬಾರಿ ಗೆದ್ದು ಈ ಬಾರಿ ಟಿಕೆಟ್ ವಂಚಿತರಾದ ಸಂಸದ ಅನಂತಕುಮಾರ ಹೆಗಡೆ ಟಿಕೆಟ್ ತಪ್ಪುತ್ತಿದ್ದಂತೆ ಯಾರ ಸಂಪರ್ಕಕ್ಕೂ ಸಿಗದೆ ಇದ್ದಾರೆ. ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ ಸಂಸದರನ್ನು ಭೇಟಿಯಾಗುವ ಪ್ರಯತ್ನ ಫಲಿಸಿಲ್ಲ. ಕ್ಷೇತ್ರದಲ್ಲಿ ಅನಂತಕುಮಾರ ಅವರ ಬೆಂಬಲಿಗರ ಸಂಖ್ಯೆ ಸಾಕಷ್ಟಿದೆ. ಅನಂತಕುಮಾರ ಪ್ರಚಾರಕ್ಕೆ ಬಂದರೆ ಗೆಲುವು ಸುಲಭವಾಗಲಿದೆ ಎನ್ನುವುದು ಕಾಗೇರಿ ಅವರ ಲೆಕ್ಕಾಚಾರ. ಆದರೆ ಅವರು ಪ್ರಚಾರಕ್ಕೆ ಬರಲಿದ್ದಾರೆಯೇ, ಇಲ್ಲವೇ ಎನ್ನುವುದು ಸ್ಪಷ್ಟವಾಗದೆ ಇರುವುದು ಕಾಗೇರಿ ಅವರಿಗೆ ತಲೆನೋವಾಗಿದೆ. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರಂತೂ ಬಿಜೆಪಿ ಪರವಾಗಿ ಪ್ರಚಾರಕ್ಕೆ ಬರುವ ಸಾಧ್ಯತೆ ಕಾಣಿಸುತ್ತಿಲ್ಲ.

ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಒಂದೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಖಾನಾಪುರದಲ್ಲಿ ಡಾ. ಅಂಜಲಿ ಒಮ್ಮೆ ಗೆದ್ದು ಒಮ್ಮೆ ಸೋತಿದ್ದಾರೆ. ಕಾಗೇರಿ ಸತತ ಆರು ಬಾರಿ ಗೆದ್ದು 2023ರಲ್ಲಿ ಸೋತಿದ್ದಾರೆ. ಇಬ್ಬರೂ ಒಮ್ಮೆ ಸೋತ ಅಭ್ಯರ್ಥಿಗಳೇ ಆಗಿರುವುದು ವಿಶೇಷ.

ಹಾಗೆ ನೋಡಿದರೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಇಡಿ ಜಿಲ್ಲೆಯ ಪರಿಚಯವೂ ಇದೆ. ಶಿಕ್ಷಣ ಸಚಿವರಾಗಿ ಹಾಗೂ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರಿಂದ ಲೋಕಸಭಾ ಕ್ಷೇತ್ರದಲ್ಲೂ ಅವರ ಹೆಸರು ಪರಿಚಿತವಾಗಿದೆ. ಅಂಜಲಿ ನಿಂಬಾಳ್ಕರ್ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸದಾಗಿ ಪರಿಚಯಿಸಿಕೊಳ್ಳಬೇಕಾಗಿದೆ.

ಇಬ್ಬರೂ ಅಭ್ಯರ್ಥಿಗಳು ಪ್ರಚಾರಕಾರ್ಯದಲ್ಲಿ ಬಿರುಸಿನಿಂದ ಪಾಲ್ಗೊಂಡಿದ್ದಾರೆ. ಭೌಗೋಳಿಕವಾಗಿ ವಿಸ್ತಾರವಾಗಿರುವ ಈ ಕ್ಷೇತ್ರಾದ್ಯಂತ ಸಂಚರಿಸಿ ಮತದಾರರನ್ನು ತಲುಪುವುದೂ ಒಂದು ಸವಾಲೇ ಸರಿ.