ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಜಿಲ್ಲೆಯಲ್ಲಿ ಈ ವರ್ಷ 246 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ನಿಯಂತ್ರಣಕ್ಕೆ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಥ್ ಬಾಬು ಹೇಳಿದ್ದಾರೆ.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೆಂಘೀ ಜ್ವರದಿಂದ ಈವೆರೆಗೆ ಯಾವುದೇ ಸಾವು ಸಂಭವಿಸಿಲ್ಲ. ಡೆಂಘೀ ಹೆಚ್ಚಾಗುವ ಕಡೆಗಳಲ್ಲಿ ಜಿಲ್ಲೆಯಾದ್ಯಂತ ಸರ್ವೇಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ನಿರ್ಧಿಷ್ಟ ಪ್ರದೇಶದಲ್ಲಿ ಹೆಚ್ಚು ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಅಲ್ಲಿಯೇ ಫೀವರ್ ಕ್ಲಿನಿಕ್ ಆರಂಭಿಸಿ ವೈದ್ಯಾಧಿಕಾರಿಗಳಿಂದ ಚಿಕಿತ್ಸೆ ಆರಂಭಿಸಲಾಗುವುದು ಎಂದು ತಿಳಿಸಿದರು.
ಡೆಂಘೀ ಹೆಚ್ಚಾಗಲು ಕಾರಣ ಕಂಡು ಕೊಂಡು, ಲಾರ್ವಾಗಳ ಸಮೀಕ್ಷೆ ಮಾಡಿ, ನೀರು ಸಂಗ್ರಹವಾಗದಂತೆ ಮುಂಜಾಗ್ರತೆ ವಹಿಸಲಾಗುತ್ತಿದೆ. ಈ ವರೆಗೆ ಡೆಂಘೀ ಪ್ರಕರಣಗಳು ನಿಯಂತ್ರಣದಲ್ಲಿದೆ ಎಂದರು. ಜಿಲ್ಲೆಯಲ್ಲಿ ಈ ವರ್ಷ ಈವರೆಗೆ 3993 ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 246 ಮಾತ್ರ ಡೆಂಘೀ ಎಂದು ದೃಢಪಟ್ಟಿದೆ. ಚಳಿಗಾಲವಾದ ಕಾರಣ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ವೈರಲ್ ಜ್ವರದ ಪ್ರಕರಣ ದಾಖಲಾಗುತ್ತಿರುವುದು ಕಂಡು ಬರುತ್ತಿದೆ ಎಂದು ತಿಳಿಸಿದರು.ಕಡೂರು ಮತ್ತು ಚಿಕ್ಕಮಗಳೂರು ತಾಲೂಕಿನ 8 ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿ ನೋಂದಣಿ ಆಗದಿರುವ ಹಾಗೂ ಸೂಕ್ತ ಪರವಾನಗಿ ಇಲ್ಲದ ಕ್ಲಿನಿಕ್ ಮುಚ್ಚಿಸಲಾಗಿದೆ ಎಂದು ಹೇಳಿದರು. ವಿದ್ಯಾರ್ಹತೆ ಇಲ್ಲದೆ ಆರೋಗ್ಯ ಚಿಕಿತ್ಸೆ ಕೊಡುತ್ತಿರುವ ಪ್ರಕರಣಗಳಿದ್ದಲ್ಲಿ ಅಂತಹವರ ವಿರುದ್ಧವೂ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ತಕ್ಷಣ ಅವರ ಕ್ಲಿನಿಕ್ ಮುಚ್ಚದಿದ್ದಲ್ಲಿ ಅವರ ವಿರುದ್ಧ ಕೇಸು ದಾಖಲಿಸಲಾಗುವುದು ಎಂದರು.
ಮೆಡಿಕಲ್ ಸ್ಟೋರ್‌ಗಳಲ್ಲೂ ವೈದ್ಯರ ಚೀಟಿ ಇಲ್ಲದೆ ಮಾತ್ರೆ ಔಷಧಿಗಳನ್ನು ಕೊಟ್ಟು ಕಳುಹಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಅದು ತಪ್ಪು ಎನ್ನುವುದು ಅವರಿಗೆ ಮನವರಿಕೆ ಮಾಡಿದ್ದೇವೆ. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಸಹಾಯಕ ಡ್ರಗ್ ಕಂಟ್ರೋಲರ್ ವ್ಯಾಪ್ತಿಗೆ ಬರುತ್ತದೆ. ಅವರೊಂದಿಗೆ ಸಂಪರ್ಕದಲ್ಲಿದ್ದು ನ್ಯೂನ್ಯತೆಗಳ ಬಗ್ಗೆ ಗಮನ ಸೆಳೆದು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.ಮೆಡಿಕಲ್ ಸ್ಟೋರ್‌ನವರು ನೋಂದಣಿ ಇಲ್ಲದ ವೈದ್ಯರಿಗೆ ಕ್ಲಿನಿಕ್ ತೆರೆದು ಕೊಟ್ಟಿದ್ದರೆ ಅದನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳಲಾಗುವುದು. ಕಾನೂನು ಕ್ರಮ ಕೈಗೊಳ್ಳಲಾಗುವುದು. ಹೊಸದಾಗಿ ಕ್ಲಿನಿಕ್ ತೆರೆಯುವವರು ಕೆಪಿಎಂಇ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಹಾಲಿ ಇರುವ ಕ್ಲಿನಿಕ್‌ಗಳು 5 ವರ್ಷಕ್ಕೊಮ್ಮೆ ಪರವಾನಗಿ ನವೀಕರಿಸಿಕೊಳ್ಳುವುದು ಕಡ್ಡಾಯ ಎಂದರು.