ಸಾರಾಂಶ
ಸಂವಿಧಾನದ ಮೂಲಕ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ವ್ಯವಸ್ಥೆಯನ್ನು ಹುಟ್ಟುಹಾಕಿ ದೇಶದ ಆಡಳಿತ ವ್ಯವಸ್ಥೆಗೆ ಆಧುನಿಕ ಸ್ಪರ್ಶ ನೀಡಿದ ಸಮಾನತೆಯ ಹರಿಕಾರ, ಸಮಾಜ ಸುಧಾರಕ ಡಾ. ಬಿ.ಆರ್. ಅಂಬೇಡ್ಕರ್ ಅವರು ಮಹಾನ್ ಮಾನವತಾವಾದಿಯೂ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸಂವಿಧಾನದ ಮೂಲಕ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ವ್ಯವಸ್ಥೆಯನ್ನು ಹುಟ್ಟುಹಾಕಿ ದೇಶದ ಆಡಳಿತ ವ್ಯವಸ್ಥೆಗೆ ಆಧುನಿಕ ಸ್ಪರ್ಶ ನೀಡಿದ ಸಮಾನತೆಯ ಹರಿಕಾರ, ಸಮಾಜ ಸುಧಾರಕ ಡಾ. ಬಿ.ಆರ್. ಅಂಬೇಡ್ಕರ್ ಅವರು ಮಹಾನ್ ಮಾನವತಾವಾದಿಯೂ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅಭಿಪ್ರಾಯಪಟ್ಟರು.ನಗರದ ಪೇಟೆ ಪ್ರೈಮರಿ ಶಾಲಾ ಅವರಣದಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸಂವಿಧಾನಶಿಲ್ಪಿ, ಭಾರತರತ್ನ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೩ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಅಂಬೇಡ್ಕರ್ ಎಲ್ಲರ ಮನದಲ್ಲಿ ಚಿರಸ್ಮರಣೀಯ:
ಅಂಬೇಡ್ಕರ್ ಅವರು ವಿದ್ಯಾರ್ಥಿ ದೆಸೆಯಲ್ಲಿಯಲ್ಲಿಯೇ ಬಹುಮುಖ ಹೋರಾಟದ ಪ್ರತಿಭೆಯಾಗಿದ್ದರು. ಸಮಾಜಶಾಸ್ತ್ರ, ನ್ಯಾಯಶಾಸ್ತ್ರ, ಅರ್ಥಶಾಸ್ತ್ರಜ್ಞರು ಆಗಿದ್ದ ವಿಶ್ವಜ್ಞಾನಿ ಅಂಬೇಡ್ಕರ್ ದೇಶದ ಕಾನೂನು ಸುವ್ಯವಸ್ಥೆಗೆ ಅಪಾರ ಕೊಡುಗೆ ನೀಡಿದ್ದಾರೆ. ಅಂಬೇಡ್ಕರ್ ಅವರಿಗೆ 133 ವರ್ಷಗಳಾಗಿದ್ದರೂ ಎಲ್ಲರ ಮನದಲ್ಲೂ ಚಿರಸ್ಮರಣೀಯ ಸ್ಥಾನ ಪಡೆದಿದ್ದಾರೆ. ಅವರ ಹೋರಾಟದ ಜೀವನ ಅರಿಯಲು ಒಂದು ಜೀವಮಾನವು ಸಾಕಾಗದು. ಇದು ಅವರ ಸಾಧನೆಗೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದರು.ಅಂಬೇಡ್ಕರ್ ಮೌಲ್ಯಗಳು ದಾರೀದೀಪ:
ಮುಖ್ಯ ಭಾಷಣ ಮಾಡಿದ ಮೈಸೂರಿನ ವಿಚಾರವಾದಿಗಳು ಹಾಗೂ ಲೇಖಕರಾದ ಮಲ್ಕುಂಡಿ ಮಹದೇವಸ್ವಾಮಿ ಮಾತನಾಡಿ, 45ವರ್ಷಗಳ ಸುದೀರ್ಘ ಹೋರಾಟದ ಬದುಕು ಡಾ. ಬಿ.ಆರ್. ಅಂಬೇಡ್ಕರ್ ಅವರದ್ದು. ದೇಶದ ಜನರಿಗೆ ಅಮೂಲ್ಯವಾದ ಹಕ್ಕುಗಳನ್ನು ನೀಡಿದ ಅಂಬೇಡ್ಕರ್ ದೇಶದ ಪ್ರತಿ ಗುಡಿಸಲಿನಲ್ಲಿಯೂ ಒಬ್ಬೊಬ್ಬ ಅಂಬೇಡ್ಕರ್ ಹುಟ್ಟುವ ಕನಸು ಕಂಡಿದ್ದರು. ದೇಶದಲ್ಲಿ ಇನ್ನೂ ಜೀವಂತವಾಗಿರುವ ಬಡತನ, ಅಸಮಾನತೆ, ಅತ್ಯಾಚಾರ, ಶೋಷಣೆ ನಿರ್ಮೂಲನೆಗೆ ಅಂಬೇಡ್ಕರ್ ಚಿಂತನೆ, ಮೌಲ್ಯಗಳು ಸಾರ್ವಕಾಲಿಕ ದಾರಿದೀಪಗಳಾಗಿವೆ ಎಂದರು.ಅಂಬೇಡ್ಕರ್ ಬಗ್ಗೆ ವಿದೇಶೀಯರು ಹೆಚ್ಚಾಗಿ ತಿಳಿದಿದ್ದಾರೆ:
ಜಗತ್ತಿನ ಶಾಂತಿಗಾಗಿ ರಾಜಪದವಿಯನ್ನು ದಿಕ್ಕರಿಸಿದ ಬುದ್ಧ, ಸಾಮಾಜಿಕ ಅಸಮಾನತೆ ವಿರೋಧಿಸಿ ಮಂತ್ರಿ ಪದವಿ ದಿಕ್ಕರಿಸಿದ ಬಸವಣ್ಣ, ಮಹಿಳೆಯರಿಗೆ ಹಕ್ಕುಗಳನ್ನು ನೀಡಲು ನಿರಾಕರಿಸಿದ ನಿಲುವಿಗೆ ಮಂತ್ರಿ ಪದವಿ ಒಲ್ಲದ ಆಧುನಿಕ ವ್ಯಕ್ತಿ ಅಂಬೇಡ್ಕರ್, ಈ ಮೂರು ವಿಚಾರಗಳಲ್ಲಿ ಸರ್ವರ ಒಳಿತು ಅಡಗಿದೆ. ಈ ಕುರಿತು ಆತ್ಮವಿಮರ್ಶೆ ಮಾಡಬೇಕಾದ ಅಗತ್ಯವಿದೆ. ಅಂಬೇಡ್ಕರ್ ಯಾರೆಂದು ಎಲ್ಲರಿಗೂ ಗೊತ್ತು. ಅಂಬೇಡ್ಕರ್ ಏನು ? ಎಂಬುದನ್ನು ಅರಿಯುವ ಅವಶ್ಯವಿದೆ. ಅಂಬೇಡ್ಕರ್ ಬಗ್ಗೆ ಭಾರತೀಯರಿಗಿಂತ ಹೆಚ್ಚಾಗಿ ವಿದೇಶಿಯರು ಅರಿತಿದ್ದಾರೆ. ಅದಕ್ಕಾಗಿಯೇ ಸಾಕಷ್ಟು ರಾಷ್ಟ್ರಗಳಲ್ಲಿ ಅಂಬೇಡ್ಕರ್ ಅವರನ್ನು ಸ್ಮರಿಸಿ ಗೌರವ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.ಸಮಾಜದಲ್ಲಿ ಪ್ರತಿಯೊಬ್ಬರು ಗೌರವಯುತವಾಗಿ ಬದುಕಲು ಎಲ್ಲಾ ಹಕ್ಕುಗಳನ್ನು ನೀಡಿ ಸುಭದ್ರ ಜೀವನಕ್ಕೆ ಭದ್ರಬುನಾದಿ ಹಾಕಿದ ಅಂಬೇಡ್ಕರ್ ಅವರ ಮೌಲ್ಯಯುತ ಚಿಂತನೆಗಳು ಎಲ್ಲರಲ್ಲೂ ಮೊಳೆಯಬೇಕು. ಮಾನವ ಪ್ರೇಮದ ಸಂಕೇತವಾದ ಅಂಬೇಡ್ಕರ್ ಅವರನ್ನು ಎಲ್ಲರ ಹೃದಯಗಳಲ್ಲಿ ಬಿತ್ತಿ ಬೆಳೆಯಬೇಕು. ಅದರ್ಶ ಸಾಮಾಜದ ಪ್ರಜ್ಞೆಯ ಕಡೆಗೆ ಮುಂದಿನ ಪೀಳಿಗೆಯನ್ನು ಕೊಂಡೊಯ್ಯಬೇಕು ಎಂದು ಮಲ್ಕುಂಡಿ ಮಹದೇವಸ್ವಾಮಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ ವಹಿಸಿದ್ದರು. ಕೊಳ್ಳೇಗಾಲದ ಜೇತವನ ಬುದ್ಧವಿಹಾರದ ಸುಗತಪಾಲ ಬಂತೇಜಿ ಅವರು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದರು. ಎಡಿಸಿ ಗೀತಾ ಹುಡೇದ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉದೇಶ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ, ಮಂಜುನಾಥ ಪ್ರಸನ್ನ, ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್, ಸಮಾಜ ಕಲ್ಯಾಣ ಉಪನಿರ್ದೇಶಕ, ಬಿ. ಮಲ್ಲಿಕಾರ್ಜುನ, ಸಹಾಯಕ ನಿರ್ದೇಶಕ, ಚಿಕ್ಕಬಸವಯ್ಯ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಎಸ್ಪಿ ಪದ್ಮಿನಿ ಸಾಹು ಹಾಗೂ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಬಳಿಕ ನಗರದ ಪ್ರವಾಸಿ ಮಂದಿರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಮರವಣಿಗೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ಪ್ರಸನ್ನ ಅವರು ಚಾಲನೆ ನೀಡಿದರು.